ADVERTISEMENT

ತುಮಕೂರು: ಲಾಕ್‌ಡೌನ್‌ನಿಂದ ಆದಾಯಕ್ಕೆ ಕತ್ತರಿ, ಮೈ–ಮೇಲೆ ಬಿದ್ದಿದೆ ಬಾಡಿಗೆ

ಸ್ಟೇಷನರಿ ಅಂಗಡಿ ಕೆಲಸಗಾರರೂ ಅತಂತ್ರ

ಪೀರ್‌ ಪಾಶ, ಬೆಂಗಳೂರು
Published 3 ಮೇ 2020, 2:20 IST
Last Updated 3 ಮೇ 2020, 2:20 IST
ಬಿ.ಎಚ್‌.ರಸ್ತೆಯ ಬದಿಯಲ್ಲಿನ ಫೋಟೊ ಕಾಪಿ ಮಾಡಿಕೊಡುವ ಅಂಗಡಿಯ ಬಾಗಿಲು ಬಂದ್ ಆಗಿತ್ತು
ಬಿ.ಎಚ್‌.ರಸ್ತೆಯ ಬದಿಯಲ್ಲಿನ ಫೋಟೊ ಕಾಪಿ ಮಾಡಿಕೊಡುವ ಅಂಗಡಿಯ ಬಾಗಿಲು ಬಂದ್ ಆಗಿತ್ತು   

ತುಮಕೂರು: ಲಾಕ್‌ಡೌನ್‌ನಿಂದಾಗಿ ನಗರದಲ್ಲಿನ ವಿವಿಧ ಅಂಗಡಿಗಳ ಮಾಲೀಕರು ಹಾಗೂ ಅಲ್ಲಿ ಕೆಲಸ ಮಾಡುತ್ತಿದ್ದವರ ಬದುಕು ಅತಂತ್ರದ ಸ್ಥಿತಿಗೆ ಸಿಲುಕಿದೆ.

ನಗರದಲ್ಲಿ ಜೆರಾಕ್ಸ್‌ ಮಾಡುವ, ಲೇಖನ ಸಾಮಗ್ರಿಗಳು ಸೇರಿದಂತೆ ಸ್ಟೇಷನರಿಗಳನ್ನು ಮಾರುವ, ಮೊಬೈಲ್ ಕರೆನ್ಸಿ ರೀಚಾರ್ಜ್‌, ರಿಪೇರಿ ಮಾಡುವ, ಅಂತರ್ಜಾಲ ಸೇವೆ ನೀಡುವ ಸೈಬರ್‌ ಕೆಫೆಯಂಥ ನೂರಾರು ಅಂಗಡಿಗಳು ಇವೆ.

ಜಿಲ್ಲಾಧಿಕಾರಿ ಕಚೇರಿ, ಮಹಾನಗರ ಪಾಲಿಕೆ, ಆರ್‌ಟಿಒ, ಉಪನೋಂದಣಾಧಿಕಾರಿ, ತುಮಕೂರು ವಿಶ್ವವಿದ್ಯಾನಿಲಯಕ್ಕೆ ಹೊಂದಿಕೊಂಡ ಪ್ರದೇಶಗಳಲ್ಲಿ ಇಂತಹ ಅಂಗಡಿಗಳ ಸಮೂಹವೇ ಇದೆ. ಸರ್ಕಾರದ ವಿವಿಧ ಸೇವಾ ಸೌಲಭ್ಯಗಳು, ಪ್ರಮಾಣಪತ್ರಗಳಿಗಾಗಿ ಅರ್ಜಿ ಸಲ್ಲಿಕೆ ಸೇರಿದಂತೆ ಹತ್ತಾರು ಕೆಲಸಗಳಿಗೆ ಬರುವವರು ಜೆರಾಕ್ಸ್‌ ಮಾಡಿಸಿ, ಸ್ಟೇಷನರಿ ವಸ್ತುಗಳನ್ನು ಖರೀದಿಸುತ್ತಿದ್ದರು.

ADVERTISEMENT

ಇಂತಹ ಅಂಗಡಿಗಳಲ್ಲಿ ಹೆಚ್ಚಾಗಿ ಯುವ ಜನರು ಕೆಲಸ ಮಾಡುತ್ತಿದ್ದರು. ಕಳೆದ ವರ್ಷ ಇದೇ ತಿಂಗಳಿನಲ್ಲಿ ಪುಸ್ತಕ, ಲೇಖನ ಸಾಮಗ್ರಿ ಖರೀದಿಸಲು ಪುಸ್ತಕಗಳ ಅಂಗಡಿಗಳ ಮುಂದೆ ಗ್ರಾಹಕರ ದಂಡೇ ಇರುತ್ತಿತ್ತು. ಈಗ ವರಮಾನ ಇಲ್ಲದೆ ಅಸಂಘಟಿತ ದುಡಿಮೆಗಾರರ ಜೀವನ ದುಸ್ತರವಾಗಿದೆ.

‘ಕಾಲೇಜುಗಳನ್ನು ಸೆಪ್ಟೆಂಬರ್‌ವರೆಗೂ ತೆರೆಯಲ್ಲ ಅಂತಿದ್ದಾರೆ. ಹೀಗಾದರೆ ಬಲುಕಷ್ಟ. ಸಾಮಾನ್ಯ ದಿನಗಳಲ್ಲಿ ಕನಿಷ್ಠ ₹1,500 ಆದರೂ ವ್ಯಾಪಾರ ಆಗುತ್ತಿತ್ತು. ಈಗ ಏನೂ ಇಲ್ಲ. ಹಿಂಗಾದರೆ ಹೆಂಗೆ ಜೀವನ ಮಾಡುವುದು’ ಎಂದು ಅಳಲು ತೋಡಿಕೊಂಡರು ಬಿ.ಎಚ್‌.ರಸ್ತೆಯ ಸಾಗರ ಸ್ಟೇಷನರಿ ಅಂಗಡಿಯ ಎ.ಬಿ.ಪ್ರಭಾಕರ್‌.

‘ಬಾಡಿಗೆ–ಬಿಲ್‌ ಕಟ್ಟಲೇ ಬೇಕಲ್ಲ’

ಅಂಗಡಿ ತೆರೆಯದೆ ಇದ್ದರೂ ಬಾಡಿಗೆ ಮತ್ತು ಬ್ರಾಡ್‌ಬ್ಯಾಂಡ್‌ ಬಿಲ್‌ ಕಟ್ಟುವ ಹೊರೆ ಬಿದ್ದಿದೆ ಎಂದು ತುಮಕೂರು ವಿ.ವಿ ಮುಂಭಾಗದ ನೆಟ್‌ ಪ್ಲೆ ಸೈಬರ್‌ ಕೆಫೆಯ ಎಂ.ಎಚ್‌.ಗಿರೀಶ್‌ ತಿಳಿಸಿದರು.

ಸಾಲಮಾಡಿ ಅಂಗಡಿ ತೆರೆದಿದ್ದೆವು. ಸಾಲ ಮರುಪಾವತಿಗಾಗಿ ತಿಂಗಳಿಗೆ ₹30 ಸಾವಿರ ಕಟ್ಟಬೇಕಿದೆ. ಅಂಗಡಿಯಲ್ಲಿನ ಕೆಲಸಕ್ಕೆ ಇರುವ ಸಹಾಯಕರೂ ಮನೆಬಾಡಿಗೆ ಕಟ್ಟಬೇಕಿದೆ ಎಂದು ಅವರು ಕಷ್ಟ ಹೇಳಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.