ADVERTISEMENT

ಗಣಿಬಾಧಿತ ಪ್ರದೇಶಕ್ಕೆ ಸೌಲಭ್ಯ ಮರೀಚಿಕೆ!

ಗಣಿಗಾರಿಕೆಯಿಂದ ನಲುಗಿದ ಕೊಂಡ್ಲಿ ಸುತ್ತಲಿನ ಹಳ್ಳಿಗಳು

ಟಿ.ಎಚ್‌.ಪಂಚಾಕ್ಷರಯ್ಯ
Published 21 ಏಪ್ರಿಲ್ 2019, 20:40 IST
Last Updated 21 ಏಪ್ರಿಲ್ 2019, 20:40 IST
ಗುಬ್ಬಿ ತಾಲ್ಲೂಕು ನಿಟ್ಟೂರು ಹೋಬಳಿ ಕೊಂಡ್ಲಿ ಭಾಗದ ಗಣಿಬಾಧಿತ ಪ್ರದೇಶದಲ್ಲಿ ಮೇವಿಗಾಗಿ ತಡಕಾಡುತ್ತಿರುವ ಕುರಿಗಳು
ಗುಬ್ಬಿ ತಾಲ್ಲೂಕು ನಿಟ್ಟೂರು ಹೋಬಳಿ ಕೊಂಡ್ಲಿ ಭಾಗದ ಗಣಿಬಾಧಿತ ಪ್ರದೇಶದಲ್ಲಿ ಮೇವಿಗಾಗಿ ತಡಕಾಡುತ್ತಿರುವ ಕುರಿಗಳು   

ಗುಬ್ಬಿ: ದಶಕದ ಹಿಂದೆ ಗಣಿಗಾರಿಕೆಯಿಂದ ನಲುಗಿದ್ದ ತಾಲ್ಲೂಕಿನ ನಿಟ್ಟೂರು ಹೋಬಳಿಯ ಕೊಂಡ್ಲಿ ಸುತ್ತಲಿನ ಹಳ್ಳಿಗಳ ಜನರಿಗೆ ಮೂಲ ಸೌಲಭ್ಯಗಳು ಮರೀಚಿಕೆ ಆಗಿವೆ. ಇಲ್ಲಿ ಮೊದಲಿದ್ದ ಅತ್ಯಂತ ಸುಂದರ ಭೌಗೊಳಿಕ ರಚನೆ ಹಾಗೂ ಪ್ರಕೃತಿಯ ಸೌಂದರ್ಯ ನಾಶವಾಗಿದೆ. ಇದನ್ನು ಪುನಃ ಕಟ್ಟುವ ಯೋಜನೆಗೆ ಕಾಯಕಲ್ಪ ಸಿಗಬೇಕಿದೆ.

ಶಿವಸಂದ್ರ, ಎಮ್ಮೆದೊಡ್ಡಿ, ಮುಸಕೊಂಡ್ಲಿ, ಮಾವಿನಹಳ್ಳಿ, ಕಂಚಿಗಾನಹಳ್ಳಿ, ಕೊಂಡ್ಲಿಕ್ರಾಸ್, ಬ್ಯಾಟಪ್ಪನಪಾಳ್ಯ, ಹೊನ್ನೇನಹಳ್ಳಿ, ದೊಡ್ಡಕೊಂಡ್ಲಿ, ಹರೇನಹಳ್ಳಿ, ಕಾರೇಕುರ್ಚಿ ಭಾಗದ ರೈತರು ಗಣಿಗಾರಿಕೆಯ ಕರಾಳ ಪರಿಣಾಮಗಳಿಂದ ಈಗಾಗಲೇ ತತ್ತರಿಸಿದ್ದಾರೆ. ಇಲ್ಲಿನ ಜನರು ಪಂಚಾಯಿತಿ ಮಟ್ಟದಲ್ಲಿ ಜಾರಿಯಾಗುವ ಯೋಜನೆಗಳಿಗಷ್ಟೇ ತೃಪ್ತಿಪಟ್ಟುಕೊಳ್ಳಬೇಕಿದೆ.

‘ಗಣಿಗಾರಿಕೆ ಕಾರಣ ಸುತ್ತಲ ಹಳ್ಳಿಗಳ ರೈತರ ಜಮೀನು ಫಲವತ್ತತೆ ಕಳೆದುಕೊಂಡಿದೆ. ಗೋಮಾಳ, ಹುಲ್ಲುಗಾವಲು ಪ್ರದೇಶ ಮತ್ತು ಗೋಕಟ್ಟೆ ಮರೆಯಾಗಿವೆ. ಇವನ್ನು ಮೊದಲಿನಂತೆ ಪುನರ್ ನಿರ್ಮಿಸಬೇಕು ಎನ್ನುವ ಒತ್ತಾಯವೂ ರೈತರಿಂದ ಕೇಳಿಬಂದಿದೆ. ಒಮ್ಮೊಮ್ಮೆ ಹೆಚ್ಚು ಮಳೆಯಾದರೂ ಬವಣೆ ತೀರದಾಗಿದೆ. ವಾರ್ಷಿಕವಾಗಿ 300 ಮಿ.ಮಿ.ಗೂ ಕಡಿಮೆ ಮಳೆ ಆಗುತ್ತಿರುವುದರಿಂದ ಯಾವುದೇ ಬೆಳೆಗಳು ಈ ಭಾಗದಲ್ಲಿ ಕೈಹಿಡಿಯುತ್ತಿಲ್ಲ’ ಎನ್ನುತ್ತಾರೆ ನೈಸರ್ಗಿಕ ಸಂಪನ್ಮೂಲ ಕ್ರಿಯಾ ಸಮಿತಿ ಅಧ್ಯಕ್ಷ ನಂಜುಂಡಯ್ಯ.

ADVERTISEMENT

ಗಣಿ ತೋಡುವಾಗ ನೂರಾರು ಮರಗಳ ಮಾರಣ ಹೋಮ ನಡೆದಿದೆ. ಮೊದಲು ಈ ಜಾಗದಲ್ಲಿ ಮರಗಳನ್ನು ಬೆಳೆಸುವ ಕಾರ್ಯ ಆಗಬೇಕಿದೆ. ಈ ಭಾಗದ ಮೂರ್ನಾಲ್ಕು ದಶಕದಿಂದ ಉಳುಮೆ ಮಾಡಿಕೊಂಡು ಬಂದ ಕೆಲ ರೈತರಿಗೆ ಉಳುಮೆ ಚೀಟಿ ಹಕ್ಕು ಸಿಕ್ಕಿದೆ. ಕೆಲ ರೈತರು ಸಾಗುವಳಿ ಚೀಟಿ ಪಡೆದು ಧನ್ಯರಾಗಿದ್ದಾರೆ.

ನಮ್ಮೂರ ರಸ್ತೆಗಳು ಸರಿ ಇಲ್ಲ. ಕೆಲವರು ಎಳೆಯ ವಯಸ್ಸಿನಲ್ಲೇ ಶಾಲೆ ಬಿಟ್ಟು ದುಡಿಮೆಯ ಹಾದಿ ಹಿಡಿದಿದ್ದಾರೆ. ಈ ದುಡಿಮೆಯು ಅಷ್ಟಕಷ್ಟೇ. ಎಳವೆಯಲ್ಲೇ ಮದ್ಯ, ಗುಟ್ಕ, ಪಾನ್‌ ಪರಾಗ್‌ ಅಗೆಯುತ್ತಾ ತಮ್ಮ ಯವ್ವನವನ್ನು ಕಳೆದುಕೊಳ್ಳುವ ಗತಿ ಬಂದಿದೆ’ ಎನ್ನುತ್ತಾರೆ ಕೊಂಡ್ಲಿಯ ನಾಗರತ್ನಮ್ಮ.

‘ಮಳೆಗಾಲದಲ್ಲಿ ಆರೋಗ್ಯ ತಪ್ಪಿದರೆ ನಮ್ಗೆ ನರಕವೇ ಸೈ ಎನ್ನುವಂತಾಗಿದೆ. ಐದಾರು ಕಿಲೋಮೀಟರ್ ಸುತ್ತ ಯಾವುದೇ ಆಸ್ಪತ್ರೆ ಇಲ್ಲ. ರಾತ್ರಿ ಹೊತ್ತು ಆರೋಗ್ಯ ಕೆಟ್ಟರೆ ಆಟೊ ಹಿಡಿದು ಗುಬ್ಬಿ- ತುಮಕೂರಿಗೆ ಹೋಗಬೇಕಿದೆ’ ಎಂದು ಅಳಲು ತೋಡಿಕೊಳ್ಳುತ್ತಾರೆ ಈ ಭಾಗದ ವೃದ್ಧರು.

‘ನಮ್ಮ ಗ್ರಾಮದ ಕಡೆ ಸರ್ಕಾರ ಕಣ್ತೆರದು ನೋಡಬೇಕು. ರಾಜಕೀಯದವ್ರು ನಮ್ಮ ಊರಿಗೆ ಸರಿಯಾಗಿ ಸೌಲಭ್ಯ ನೀಡಿಲ್ಲ. ಗಣಿಗಾರಿಕೆಯಿಂದ ನಲುಗಿರುವ ನಮ್ಮ ಭಾಗಕ್ಕೆ ಆಸ್ಪತ್ರೆ ಸೇರಿದಂತೆ ಮೂಲ ಸೌಲಭ್ಯ ಕೊಡಬೇಕು. ಪ್ರಗತಿಪರ ಹಳ್ಳಿಗಳಲ್ಲಿ ಏನೇನು ಇರಬಾರದೋ ಅದೆಲ್ಲವೂ ಇಲ್ಲಿದೆ. ಸರ್ಕಾರವೇ ಮದ್ಯದ ಅಂಗಡಿ (ಎಂಎಸ್ಐಎಲ್) ತೆರೆದು ಸುತ್ತಣ ಹಳ್ಳಿಗಳ ಸ್ವಾಸ್ಥ್ಯ ಕೆಡಿಸಿದೆ’ ಎಂದು ಕೊಂಡ್ಲಿ ಗ್ರಾಮದ ಪರಿಶಿಷ್ಟ ಕಾಲೊನಿ ಯುವಜನರ ಆರೋಪಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.