ಕುಣಿಗಲ್: ನಿರೀಕ್ಷಿತ ಅಂಕ ಪಡೆಯಲು ಅಸಾಧ್ಯವಾಗುತ್ತಿದೆ ಎಂದು ಖಿನ್ನತೆಗೆ ಒಳಗಾಗಿದ್ದ ತಾಲ್ಲೂಕಿನ ಗಿರಿಗೌಡನಪಾಳ್ಯದ ಅರವಿಂದ್ ಇಂಟರ್ ನ್ಯಾಷನಲ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಧ್ರುವ (16) ಸೋಮವಾರ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಧ್ರುವ ಪೋಷಕರು ತುಮಕೂರಿನ ಕ್ಯಾತ್ಸಂದ್ರ ಚಂದ್ರಮೌಳೇಶ್ವರ ಬಡಾವಣೆ ಮೂಲದವರು. ಸದ್ಯ ಬೆಂಗಳೂರಿನ ಮತ್ತಿಕೆರೆಯಲ್ಲಿ ವಾಸಿಸುತ್ತಿದ್ದಾರೆ. ಅವರ ತಂದ ನಾಗರಾಜು ಶಿಕ್ಷಕರಾಗಿದ್ದಾರೆ.
ಜ.26ರಂದು ಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಾವು ಮಗನ ಜತೆ ಭಾಗಿಯಾಗಿದ್ದೆವು. ಆ ಸಮಯದಲ್ಲಿ ಮಗ ನಾನು ಅಂದುಕೊಂಡಂತೆ ಅಂಕಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದ. ನಾವು ಸಮಾಧಾನಪಡಿಸಿ ಹಿಂತಿರುಗಿದ್ದೆವು.
ಸೋಮವಾರ ರಾತ್ರಿ ಹಾಸ್ಟೆಲ್ ಉಸ್ತುವಾರಿ ಶಿವಕುಮಾರ್ ನಮಗೆ ಧ್ರುವ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿಸಿದರು. ಸಂಜೆಯ ಮನೆಪಾಠ (ಟ್ಯೂಷನ್)ಕ್ಕೆ ತೆರಳದೆ ಆತ ಕೊಠಡಿಯಲ್ಲಿ ಉಳಿದಿದ್ದ. ಆಗ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾನೆ ಎಂದು ಧ್ರುವ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.
ಸಿಪಿಐ ನಿರಂಜನ್ ಕುಮಾರ್ ಮತ್ತು ಪಿಎಸ್ಐ ವಿಕಾಸ್ ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಮರುಗಿದ ಪೊಲೀಸರು: ಧ್ರುವ ಈ ಹಿಂದೆ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿರುವಾಗಲೂ ಶಾಲಾಹಂತದ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಪಡೆಯಲು ಸಾಧ್ಯವಾಗದ ಕಾರಣ ಬೇಸತ್ತು ಬೆಂಗಳೂರಿನಿಂದ ಮನೆಬಿಟ್ಟು ಬಂದು ಪಟ್ಟಣದ ಬೇಕರಿಯೊಂದರಲ್ಲಿ ಕೆಲಸ ಕೇಳುತ್ತಿದ್ದ. ಆಗ ಬೇಕರಿ ಮಾಲೀಕರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರು. ಪೊಲೀಸರು ಪೋಷಕ ನಾಗರಾಜು ಅವರನ್ನು ಸಂಪರ್ಕಿಸಿದ್ದರು. ಧ್ರುವನಿಗೆ ಬುದ್ದಿವಾದ ಹೇಳಿದ್ದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 96ರಷ್ಟು ಅಂಕ ಪಡೆದ ಧ್ರುವ ಕುಣಿಗಲ್ ಠಾಣೆಗೆ ಬಂದು ಪೊಲೀಸರಿಗೆ ಸಿಹಿ ನೀಡಿದ್ದ. ಮುಂದೆ ಹೆಚ್ಚಿನ ಅಂಕ ಪಡೆದು ಐಎಎಸ್ ಮಾಡುವೆ ಎಂದಿದ್ದ. ಆದರೆ ಈಗ ಆತ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದು ಪೊಲೀಸ್ ಸಿಬ್ಬಂದಿ ಗವಿಯಪ್ಪ ಮತ್ತು ಮಲ್ಲೇಶ್ ಮರುಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.