ADVERTISEMENT

ಕಲುಷಿತ ಆಹಾರ ಸೇವನೆ ಶಂಕೆ: ಅಸ್ವಸ್ಥಗೊಂಡ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2024, 14:29 IST
Last Updated 8 ಫೆಬ್ರುವರಿ 2024, 14:29 IST
ಕುಣಿಗಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವಿದ್ಯಾರ್ಥಿಗಳು
ಕುಣಿಗಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವಿದ್ಯಾರ್ಥಿಗಳು   

ಕುಣಿಗಲ್: ಕಲುಷಿತ ಆಹಾರ ಸೇವನೆಯಿಂದಾಗಿ ತಾಲ್ಲೂಕಿನ ಸೀನಪ್ಪನಹಳ್ಳಿ ಅಂಬಾಭವಾನಿ ಪ್ರೌಢಶಾಲೆಯ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅಸ್ವಸ್ಥಗೊಂಡಿದ್ದಾರೆ.

ತಾಲ್ಲೂಕಿನ ಹುತ್ರಿದುರ್ಗ ಹೋಬಳಿಯ ಸೀನಪ್ಪನಹಳ್ಳಿ ಅಂಬಾಭವಾನಿ ಪ್ರೌಢಶಾಲೆ ವಿದ್ಯಾರ್ಥಿಗಳು ಮತ್ತು ಕೆಲ ಶಿಕ್ಷಕರು ಬುಧವಾರ ಮಧ್ಯಾಹ್ನ ಮೊಸರಿನ ಸಾರು ಮತ್ತು ಅನ್ನ ಸೇವಿಸಿದ್ದಾರೆ. ಮನೆಗೆ ತೆರಳಿದ ವಿದ್ಯಾರ್ಥಿಗಳಿಗೆ ರಾತ್ರಿಯಿಂದಲೇ ವಾಂತಿ, ಭೇದಿ, ತಲೆಸುತ್ತು ಕಾಣಿಸಿಕೊಂಡಿದೆ. ಆತಂಕಗೊಂಡ ಪೋಷಕರು ಸ್ಥಳೀಯ ಮತ್ತು ಪಟ್ಟಣದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಗುರುವಾರ ಶಾಲೆಗೆ ಬಂದ ಕೆಲ ವಿದ್ಯಾರ್ಥಿಗಳಿಗೆ ಮೊದಲು ಸುಸ್ತು, ತಲೆಸುತ್ತು, ವಾಂತಿಯಾಗಿದೆ. ನಂತರ ಇತರ ವಿದ್ಯಾರ್ಥಿಗಳಿಗೂ ವಾಂತಿಯಾಗಿದ್ದು, ಶಿಕ್ಷಕರು ಸಹ ಬಳಲಿದ್ದಾರೆ. ಕೂಡಲೇ ಇಪ್ಪಾಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು, ನಂತರ ಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಆಸ್ಪತ್ರೆಯ ಮಕ್ಕಳ ತಜ್ಞೆ ಸುಮಾ, ಆಡಳಿತ ವೈದ್ಯಾಧಿಕಾರಿ ಗಣೇಶ್ ಬಾಬು, ಮಂಜುನಾಥ ಸ್ಮರಣ್ ಸೇರಿದಂತೆ ಸಿಬ್ಬಂದಿ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಿದ್ದು, ಎಲ್ಲರ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ.

ದೋಷಪೂರಿತ ಆಹಾರ ಸೇವನೆಯಿಂದಾಗಿ ಆರೋಗ್ಯದಲ್ಲಿ ವ್ಯಾತ್ಯಾಸವಾಗಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಶಾಲೆ ಪಕ್ಕದಲ್ಲಿ ಮಾವಿನ ತೋಟವಿದ್ದು, ಮರಗಳಿಗೆ ಬುಧವಾರ ಕ್ರಿಮಿನಾಶಕ ಔಷಧಿ ಸಿಂಪಡಿಸಿದ್ದು, ಇದರಿಂದಾಗಿ ವ್ಯತ್ಯಾಸವಾಗಿರಬಹುದು ಎಂದು ಕೆಲ ಪೋಷಕರು ಅಭಿಪ್ರಾಯಪಟ್ಟಿದ್ದಾರೆ.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜೋಸೆಫ್, ತಾಲ್ಲೂಕು ಆರೋಗ್ಯಾಧಿಕಾರಿ ಮರಿಯಪ್ಪ, ಪಿಎಸ್ಐ ಕೃಷ್ಣಪ್ರಸಾದ್ ಮತ್ತು ಸಿಬ್ಬಂದಿ ಭೇಟಿ ನೀಡಿ ಮಾಹಿತಿ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.