ADVERTISEMENT

ಬಹು ಬೆಳೆ ಪದ್ಧತಿಯಿಂದ ಸುಸ್ಥಿರ ಕೃಷಿ: ಡಾ.ಮಂಜುನಾಥ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 14:14 IST
Last Updated 28 ಜೂನ್ 2024, 14:14 IST
ಹುಳಿಯಾರಿನ ಅಂಬೇಡ್ಕರ್‌ ಭವನದಲ್ಲಿ ಗುರುವಾರ ತಾಲ್ಲೂಕು ಪಂಚಾಯಿತಿಯಿಂದ ಸಹಜ ಕೃಷಿ ಅಳವಡಿಕೆ ತರಬೇತಿ ನಡೆಯಿತು
ಹುಳಿಯಾರಿನ ಅಂಬೇಡ್ಕರ್‌ ಭವನದಲ್ಲಿ ಗುರುವಾರ ತಾಲ್ಲೂಕು ಪಂಚಾಯಿತಿಯಿಂದ ಸಹಜ ಕೃಷಿ ಅಳವಡಿಕೆ ತರಬೇತಿ ನಡೆಯಿತು   

ಹುಳಿಯಾರು: ಸಹಜ ಕೃಷಿಯಲ್ಲಿ ಬಹು ಬೆಳೆ ಪದ್ಧತಿಯಿಂದ ಸುಸ್ಥಿರ ಕೃಷಿ ಸಾಧ್ಯ. ರಾಸಾಯನಿಕ ಬಳಕೆಯಿಂದಲೇ ಕೃಷಿ ಸಾಧ್ಯ ಎಂಬ ತಪ್ಪು ಗ್ರಹಿಕೆಯನ್ನು ರೈತರು ಮನದಿಂದ ಕಿತ್ತೊಗೆಯಬೇಕು ಎಂದು ತುಮಕೂರಿನ ಗಾಂಧಿ ಸಹಜ ಬೇಸಾಯ ಶಾಲೆಯ ಡಾ.ಮಂಜುನಾಥ್‌ ತಿಳಿಸಿದರು.

ಪಟ್ಟಣದ ಅಂಬೇಡ್ಕರ್‌ ಭವನದಲ್ಲಿ ಗುರುವಾರ ತಾಲ್ಲೂಕು ಪಂಚಾಯಿತಿಯಿಂದ 14 ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಎನ್‌ಆರ್‌ಇಜಿ ಯೋಜನೆಯಡಿ ಸಹಜ ಕೃಷಿ ಅಳವಡಿಸಿಕೊಳ್ಳಲು ನಡೆದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚಿಕ್ಕನಾಯಕನಹಳ್ಳಿ ತಾಲ್ಲೂಕು ತೆಂಗಿನ ಸೀಮೆಯಾಗಿದ್ದು ಮೊದಲು ಒಂದು ತೆಂಗಿನಮರದಲ್ಲಿ ಸರಾಸರಿ ₹250ಕ್ಕೂ ಹೆಚ್ಚು ತೆಂಗಿನ ಕಾಯಿಗಳು ಬಿಡುತ್ತಿದ್ದವು. ಆದರೆ ಇಂದು ಅದರ ಸರಾಸರಿ 35ಕ್ಕೆ ಇಳಿಕೆಯಾಗಿದೆ. ತೆಂಗಿಗೆ ಕೀಟ ಬಾಧೆ, ರಾಸಾಯನಿಕ ಗೊಬ್ಬರ ಬಳಕೆ ಸೇರಿದಂತೆ ಅತಿವೃಷ್ಟಿ ಹಾಗೂ ಅನಾವೃಷ್ಟಿಯಂತಹ ಸಮಸ್ಯೆಗಳಿಂದ ಇಳುವರಿ ಕುಂಠಿತಗೊಂಡಿದೆ ಎಂದರು.

ADVERTISEMENT

ರೈತರು ಕೇವಲ ಮರದ ಬೇರುಗಳಿಗೆ ನೀರು ಕೊಡುವ ಪದ್ಧತಿ ಬಿಟ್ಟು, ಪೂರ್ತಿ ತೋಟದಲ್ಲಿ ಹಸಿರು ವಾತಾವರಣ ಸೃಷ್ಟಿಸಬೇಕು. ಇದಕ್ಕೆ ಪೂರಕವಾಗಿ ಜೀವಾಮೃತ, ದ್ವಿದಳ ಧಾನ್ಯಗಳನ್ನು ಬೆಳೆಯುವ ಮೂಲಕ ಅಧಿಕ ಪೋಷಕಾಂಶಗಳನ್ನು ಭೂಮಿಯಲ್ಲಿ ಬೆಳೆಯಲು ಉತ್ತೇಜನ ನೀಡಬೇಕು ಎಂದರು.

ತಾಲ್ಲೂಕು ಪಂಚಾಯಿತಿ ಇಒ ದೊಡ್ಡಸಿದ್ಧಯ್ಯ ಮಾತನಾಡಿ, ರಾಜ್ಯದಲ್ಲಿಯೇ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಸಹಜ ಕೃಷಿ ಪದ್ಧತಿಯನ್ನು ರೈತರು ಅಳವಡಿಸಿಕೊಳ್ಳಲು ಆಯಾಯ ಗ್ರಾಮ ಪಂಚಾಯಿತಿಗೆ ಒಪ್ಪಿಗೆ ನೀಡಲಾಗಿದೆ. ತಾಲ್ಲೂಕಿನ 27 ಗ್ರಾಮ ಪಂಚಾಯಿತಿಯಲ್ಲೂ ಹೆಚ್ಚಿನ ರೈತರು ಸಹಜ ಕೃಷಿ ಅಳವಡಿಸಿಕೊಳ್ಳಲು ಮುಂದೆ ಬಂದಿದ್ದಾರೆ ಎಂದರು.

ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ದರ್ಶನ್‌, ತಾಲ್ಲೂಕು ಪಂಚಾಯಿತಿ ಎನ್‌ಆರ್‌ಇಜಿ ಯೋಜನೆ ವ್ಯವಸ್ಥಾಪಕ ಕಾಂತರಾಜು ಸೇರಿದಂತೆ ತಾಲ್ಲೂಕಿನ 14 ಗ್ರಾಮ ಪಂಚಾಯಿತಿಗಳ ಪಿಡಿಒ, ಪಶು ಸಖಿ ಹಾಗೂ ಕೃಷಿ ಸಖಿಯರು, ರೈತರು ಹಾಜರಿದ್ದರು.

ಗೃಹ ಸಚಿವರಿಂದ ರೈತರಿಗೆ ತರಬೇತಿ
ಸಹಜ ಕೃಷಿಕ ಭಟ್ಟರಹಳ್ಳಿ ಮಲ್ಲಿಕಾರ್ಜುನ್‌ ಮಾತನಾಡಿ ಜಿಲ್ಲೆಯ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅವರು ಸಸ್ಯ ಶರೀರ ಶಾಸ್ತ್ರ ವಿಭಾಗದಲ್ಲಿ ಪಿಎಚ್‌ಡಿ ಪದವಿ ಪಡೆದು ಕೃಷಿ ವಿಜ್ಞಾನಿಯಾಗಿದ್ದಾರೆ. ಅವರಿಂದ ರೈತರಿಗೆ ಸಸ್ಯ ಶರೀರ ಶಾಸ್ತ್ರಕ್ಕೆ ಸಂಬಂಧಪಟ್ಟಂತೆ ತರಬೇತಿ ಕೊಡಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.