ಶಿರಾ: ಶಿಕ್ಷಕರು ಮನಸ್ಸು ಮಾಡಿದರೆ ಖಾಸಗಿ ಶಾಲೆಯನ್ನು ಮೀರಿಸುವಂತೆ ಸರ್ಕಾರಿ ಶಾಲೆಯನ್ನು ಅಭಿವೃದ್ಧಿ ಪಡಿಸಬಹುದು ಎನ್ನುವುದಕ್ಕೆ ತಾಳಗುಂದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಿದರ್ಶನದಂತಿದೆ.
ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿ ತಾಳಗುಂದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಹಲವು ಕೊರತೆಗಳ ನಡುವೆಯೂ ದಾನಿಗಳ ಸಹಕಾರದಿಂದ ಮಾದರಿ ಶಾಲೆಯನ್ನಾಗಿ ರೂಪಿಸಿದ್ದಾರೆ.
ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 131 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ.
ಶಾಲೆಯಲ್ಲಿ 9 ಕೊಠಡಿಗಳಿವೆ. ಅದರಲ್ಲಿ ಐದು ಶಿಥಿಲಗೊಂಡಿದ್ದರೆ, ಮತ್ತೊಂದು ಕೊಠಡಿಯನ್ನು ನೆಲಸಮ ಮಾಡಬೇಕಿದೆ. ಉಳಿದ ಮೂರು ಕೊಠಡಿಗಳಲ್ಲಿ ಶಾಲೆಗಳು ನಡೆಯುವಂತಾಗಿದೆ. 131 ಮಕ್ಕಳಿದ್ದರೂ ನಾಲ್ಕು ಜನ ಶಿಕ್ಷಕರಿದ್ದಾರೆ. ವಿಷಯವಾರು ಬೋಧನೆಗೆ ತೊಂದರೆಯಾಗುತ್ತಿದೆ. ಜೊತೆಗೆ ದೈಹಿಕ ಶಿಕ್ಷಣ ಶಿಕ್ಷಕರು ಇಲ್ಲ. ಶಿಕ್ಷಕರು ಹಾಗೂ ಕೊಠಡಿ ಸಮಸ್ಯೆಗಳ ನಡುವೆಯೂ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಪೋಷಕರ ಗಮನ ಸೆಳೆದಿರುವುದು ವಿಶೇಷ.
ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಟಿ.ವಿ.ರೂಪ ಅವರು 21 ವರ್ಷದಿಂದ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮಾದರಿ ಶಾಲೆಯನ್ನಾಗಿ ಮಾಡಲು ಶ್ರಮಿಸಿದ್ದಾರೆ. ಶಾಲೆಯಲ್ಲಿ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಿದ್ದಾರೆ. ಒಳಗಿನ ಪ್ರಶಾಂತ ವಾತಾವರಣ ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿ ಮಾಡುತ್ತದೆ.
ನಲಿ–ಕಲಿಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಮಕ್ಕಳಿಗೆ ಬೋಧನೆ ಮಾಡುತ್ತಿರುವುದು ವಿಶೇಷ. ಹಳೆಯ ವಿದ್ಯಾರ್ಥಿಗಳ ನೆರವಿನಿಂದ ಶಾಲೆಯಲ್ಲಿ ಕಂಪ್ಯೂಟರ್, ಪ್ರೊಜೆಕ್ಟರ್, ಸ್ಮಾರ್ಟ್ ಕ್ಲಾಸ್ ಪ್ರಾರಂಭಿಸಿದ್ದಾರೆ. ನಲಿ–ಕಲಿ ಕಲಿಯುತ್ತಿದ್ದ ಮಕ್ಕಳು ನೆಲದ ಮೇಲೆ ಕುಳಿತುಕೊಳ್ಳುವುದನ್ನು ಗಮನಿಸಿ ಹಳೆ ವಿದ್ಯಾರ್ಥಿಗಳಿಂದ ಚಿಕ್ಕ ಮಕ್ಕಳ ಚೇರ್ ಮತ್ತು ರೌಂಡ್ ಟೇಬಲ್ ಕೊಡುಗೆಯಾಗಿ ಪಡೆದಿದ್ದಾರೆ.
‘ಸುವಿದ್ಯಾ’ ಸರ್ಕಾರೇತರ ಸಂಸ್ಥೆಯವರು ಕಂಪ್ಯೂಟರ್, 10 ಟ್ಯಾಬ್ ನೀಡಿದರೆ, ಐಎಲ್‌ಪಿ ಸರ್ಕಾರೇತರ ಸಂಸ್ಥೆಯಿಂದ ಪ್ರೊಜೆಕ್ಟರ್, ಲ್ಯಾಪ್‌ಟಾಪ್, ₹2 ಲಕ್ಷ ವೆಚ್ಚದಲ್ಲಿ ವಿಜ್ಞಾನ ಪ್ರಯೋಗಾಲಯದ ಉಪಕರಣ ನೀಡಿದ್ದು, ಇದರಿಂದಾಗಿ ಮಕ್ಕಳಿಗೆ ಹೈಟೆಕ್ ಶಿಕ್ಷಣ ದೊರೆಯುವಂತಾಗಿದೆ.
ಮಾದರಿ ನಡೆ: ಸರ್ಕಾರಿ ಶಾಲೆಯ ಬಹುತೇಕ ಶಿಕ್ಷಕರು ತಮ್ಮ ಮಕ್ಕಳನ್ನು ಕಾನ್ವೆಂಟ್‌ಗಳಿಗೆ ಸೇರಿಸುತ್ತಿರುವ ಸಮಯದಲ್ಲಿ ಟಿ.ವಿ.ರೂಪ ಅವರು ಅವರ ಮಗನನ್ನು ಇದೇ ಶಾಲೆಗೆ ಸೇರಿಸಿರುವುದು ವಿಶೇಷ. ಸರ್ಕಾರಿ ನೌಕರಿಯಲ್ಲಿರುವ ಶಿಕ್ಷಕಿಯೇ ತನ್ನ ಮಗನನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದಾರೆ ಎಂದರೆ ಈ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವುದು ಎನ್ನುವ ನಂಬಿಕೆ ಪೋಷಕರಲ್ಲಿ ಮೂಡಿ, ಅವರ ಮಕ್ಕಳನ್ನು ಇಲ್ಲಿಯೇ ಸೇರಿಸಲು ಮುಂದಾಗಿದ್ದಾರೆ.
ದೀರ್ಘಕಾಲದಿಂದ ಇದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದು, ಈಗಲೂ ಗ್ರಾಮಸ್ಥರು ಅವರನ್ನು ಬಿಟ್ಟುಕೊಡಲು ಸಿದ್ಧರಿಲ್ಲದಿರುವುದು ಇವರ ಕೆಲಸಕ್ಕೆ ಸಾಕ್ಷಿಯಾಗಿದೆ.
ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸುವುದರ ಜೊತೆಗೆ ಕಲಿಕೆಯ ಹಸಿವು ತೋರಿಸಿದ್ದಾರೆ. ತಾಲ್ಲೂಕಿನಲ್ಲಿ ಮಾದರಿ ಶಾಲೆಗಳಲ್ಲಿ ಇದು ಒಂದಾಗಿದ್ದು, ಶಿಕ್ಷಕಿ ಟಿ.ವಿ.ರೂಪ ಅವರ ಕಾರ್ಯವನ್ನು ಗುರುತಿಸಿ ಶಿಕ್ಷಣ ಇಲಾಖೆ ಈ ಬಾರಿ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.