ADVERTISEMENT

ಇಂದಿಗೂ ಕಾಡುತ್ತಿದೆ ಜಾತಿ ವ್ಯವಸ್ಥೆ: ಚಿಂತಕ ಕೆ.ದೊರೈರಾಜ್‌ ವಿಷಾದ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2024, 3:12 IST
Last Updated 24 ನವೆಂಬರ್ 2024, 3:12 IST
ತುಮಕೂರಿನಲ್ಲಿ ಶನಿವಾರ ಕನ್ನಡ ಜನಮನ ವೇದಿಕೆ, ದಲಿತ ಸಂಘರ್ಷ ಸಮಿತಿಯಿಂದ ಸಾಹಿತ್ಯ, ರಂಗಭೂಮಿ ಇತರೆ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಚಿಂತಕ ಕೆ.ದೊರೈರಾಜ್‌, ವಿಶ್ವವಿದ್ಯಾಲಯದ ಕುಲಸಚಿವೆ ನಾಹಿದಾ ಜಮ್‌ ಜಮ್‌, ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ಚರಕ ಆಸ್ಪತ್ರೆಯ ವೈದ್ಯ ಬಸವರಾಜು ಮೊದಲಾದವರು ಪಾಲ್ಗೊಂಡಿದ್ದರು
ತುಮಕೂರಿನಲ್ಲಿ ಶನಿವಾರ ಕನ್ನಡ ಜನಮನ ವೇದಿಕೆ, ದಲಿತ ಸಂಘರ್ಷ ಸಮಿತಿಯಿಂದ ಸಾಹಿತ್ಯ, ರಂಗಭೂಮಿ ಇತರೆ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಚಿಂತಕ ಕೆ.ದೊರೈರಾಜ್‌, ವಿಶ್ವವಿದ್ಯಾಲಯದ ಕುಲಸಚಿವೆ ನಾಹಿದಾ ಜಮ್‌ ಜಮ್‌, ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ಚರಕ ಆಸ್ಪತ್ರೆಯ ವೈದ್ಯ ಬಸವರಾಜು ಮೊದಲಾದವರು ಪಾಲ್ಗೊಂಡಿದ್ದರು   

ತುಮಕೂರು: ಜಾತಿ ವ್ಯವಸ್ಥೆ ಇಂದಿಗೂ ನಮ್ಮನ್ನು ಕಾಡುತ್ತಿದ್ದು, ಕ್ರೌರ್ಯದ ಜಗತ್ತು ಮುಂದುವರಿದಿದೆ. ಜಾತಿ, ಧರ್ಮ ಮೀರಿ ಇಡೀ ವ್ಯವಸ್ಥೆಯನ್ನು ಮಾನವೀಕರಣ ಮಾಡಲು ಪ್ರಯತ್ನಿಸುತ್ತಿರುವ ಮನಸುಗಳನ್ನು ಗುರುತಿಸಬೇಕು ಎಂದು ಚಿಂತಕ ಕೆ.ದೊರೈರಾಜ್‌ ಸಲಹೆ ಮಾಡಿದರು.

ನಗರದಲ್ಲಿ ಶನಿವಾರ ಕನ್ನಡ ಜನಮನ ವೇದಿಕೆ, ದಲಿತ ಸಂಘರ್ಷ ಸಮಿತಿಯಿಂದ (ಅಂಬೇಡ್ಕರ್‌ ವಾದ) ಹಮ್ಮಿಕೊಂಡಿದ್ದ ‘ನಮ್ಮನ್ನು ನಾವು ಗೌರವಿಸಿಕೊಳ್ಳೋಣ’ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಲೇಖಕರು, ಬರಹಗಾರರು, ಸಾಹಿತಿಗಳು ಪ್ರೀತಿ ಹಂಚುತ್ತಾ, ಸಮಾಜದ ಪರಿವರ್ತನೆಗೆ ದುಡಿಯುತ್ತಿದ್ದಾರೆ. ನಮ್ಮ ಸುತ್ತ ಕ್ರೌರ್ಯ ಇದ್ದರೂ ಪ್ರೀತಿ ಬಿತ್ತಿ, ಸಮಾನತೆ ಕಾಣುತ್ತಾರೆ. ಜೀವಪರ ಸೆಲೆಯುಳ್ಳವರು. ಅವರನ್ನು ಗುರುತಿಸಿ ಗೌರವಿಸುವುದು ಸಂತೋಷದ ಸಂಗತಿ. ಎಲೆಮರೆಕಾಯಿಯಂತೆ ಇರುವ, ಅವಕಾಶ ವಂಚಿತ, ಅಂಚಿಗೆ ತಳ್ಳಲ್ಪಟ್ಟ ಸಮುದಾಯದ ಪ್ರತಿಭೆಗಳನ್ನು ಗುರುತಿಸಬೇಕು ಎಂದರು.

ADVERTISEMENT

ಶ್ರೇಣೀಕೃತ ವ್ಯವಸ್ಥೆಯಲ್ಲಿ ನಮ್ಮವರು ಎಂದರೆ ನಮ್ಮ ಜಾತಿಯವರು ಮಾತ್ರ ಇರಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಕೂತಾಗ, ನಿಂತಾಗ, ಮಾತನಾಡುವಾಗ ಎದುರುಗಡೆ ಇರುವ ವ್ಯಕ್ತಿಯ ಜಾತಿ ಹುಡುಕುತ್ತೇವೆ. ನಮ್ಮ ಜಾತಿಯವರಾದರೆ ಮಾತ್ರ ಮಾತಿಗೆ ಇಳಿಯುತ್ತೇವೆ. ಇಂತಹ ಅಸಹಿಷ್ಣುತೆ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ವಿಷಾದಿಸಿದರು.

ವಿಶ್ವವಿದ್ಯಾಲಯದ ಕುಲಸಚಿವೆ ನಾಹಿದಾ ಜಮ್‌ ಜಮ್‌, ‘ಡಾ.ಬಿ.ಆರ್‌.ಅಂಬೇಡ್ಕರ್‌ ಎಲ್ಲರಿಗೂ ಅಸ್ತಿತ್ವ ಕೊಟ್ಟರು. ಅವಮಾನ ಸಹಿಸಿ ಬದುಕಿ ತೋರಿಸಿದರು. ತಮಗಾದ ಅವಮಾನ ಇತರರಿಗೆ ಆಗಬಾರದು ಎಂದು ಹೋರಾಟ ಮಾಡಿ ಸಂವಿಧಾನ ಬರೆದರು’ ಎಂದು ಹೇಳಿದರು.

ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ವಡ್ಡಗೆರೆ ಕದರಮ್ಮ, ವಿರೂಪಾಕ್ಷ ಡ್ಯಾಗೇರಹಳ್ಳಿ, ತುಂಬಾಡಿ ರಾಮಣ್ಣ, ಮಿರ್ಜಾ ಬಶೀರ್‌, ಎಸ್‌.ವಿಷ್ಣುಕುಮಾರ್‌, ಪ್ರಭು ಹರಸೂರು, ಎಲ್‌.ಮುಕುಂದ, ಎಂ.ಸಿ.ನರಸಿಂಹಮೂರ್ತಿ, ವಾಣಿ ಸತೀಶ್‌, ಸಿದ್ದಗಂಗಯ್ಯ ಹೊಲತಾಳು, ಎಚ್‌.ವಿ.ವೆಂಕಟಾಚಲ, ಪಾವಗಡ ಸಣ್ಣರಂಗಮ್ಮ, ಕೆ.ಎಂ.ರವೀಶ್‌, ಯಶವಂತ್‌ ಕಲ್ಮನೆ ಅವರನ್ನು ಸನ್ಮಾನಿಸಲಾಯಿತು.

ಚರಕ ಆಸ್ಪತ್ರೆಯ ವೈದ್ಯ ಬಸವರಾಜು, ನಿವೃತ್ತ ಎಂಜಿನಿಯರ್‌ ಶಿವಕುಮಾರ್‌, ಪತ್ರಕರ್ತ ಎಸ್‌.ನಾಗಣ್ಣ, ಮುಖಂಡರಾದ ಲಕ್ಷ್ಮಿರಂಗಯ್ಯ, ಕುಂದೂರು ಮುರುಳಿ, ಶಿವಣ್ಣ ತಿಮ್ಲಾಪುರ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.