ಕೊರಟಗೆರೆ: ಯುವಕರು ಪ್ರಾಮಾಣಿಕತೆ ಹಾಗೂ ನಿಷ್ಠೆಯನ್ನು ಮರೆಯುತ್ತಿರುವುದು ದುರದೃಷ್ಟಕರ ಬೆಳವಣಿಗೆಯಾಗಿದೆ ಎಂದು ಶಾಸಕ ಡಾ.ಜಿ. ಪರಮೇಶ್ವರ ತಿಳಿಸಿದರು.
ಪಟ್ಟಣದ ಗುಂಡಾಂಜನೇಯ ಸ್ವಾಮಿ ದೇವಾಲಯದಲ್ಲಿ ಸುರಕ್ಷಾ ಚಾರಿಟೇಬಲ್ ಸೇವಾ ಸಮಿತಿ ಹಮ್ಮಿಕೊಂಡಿದ್ದ ಬಡಜನರಿಗೆ ಬಟ್ಟೆ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಕ್ತಿ ಹಾಗೂ ನಿಷ್ಠೆಗೆ ಆಂಜನೇಯ ಆದರ್ಶಪ್ರಾಯ. ಅವರಲ್ಲಿನ ಸ್ವಾಮಿನಿಷ್ಠೆ ಇಂದಿನ ಪೀಳಿಗೆಗೆ ಅನುಕರಣೀಯ. ಆದರೆ, ಅದು ಕಣ್ಮರೆಯಾಗುತ್ತಿರುವುದು ಆತಂಕಕಾರಿ. ರಾಜಕೀಯ ರಂಗದಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಬೆಲೆ ಇಲ್ಲದಂತಾಗಿದೆ. ಜನರು ನೋಡುವ ದೃಷ್ಟಿ ಬದಲಾಗಿದೆ ಎಂದರು.
ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಗುಂಡಾಂಜನೇಯ ಸ್ವಾಮಿ ದೇಗುಲ ಅಭಿವೃದ್ಧಿಯಾಗದೇ ಉಳಿದಿದೆ. ಇದರ ಜೀರ್ಣೋದ್ಧಾರಕ್ಕಾಗಿ ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ತಿಳಿಸಿದರು.
ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ.ಎಚ್. ಅನಿಲ್ ಕುಮಾರ್ ಮಾತನಾಡಿ, ತುಮಕೂರಿನಲ್ಲಿ ಸಿದ್ಧಾರ್ಥ ವಿದ್ಯಾಸಂಸ್ಥೆಯು ತುಳಿತಕ್ಕೆ ಒಳಗಾದ ವರ್ಗದವರಿಗೆ ವಿದ್ಯಾಭ್ಯಾಸ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ದಲಿತರು ಮುಖ್ಯ ಭೂಮಿಕೆಗೆ ಬರಬೇಕಾದ ಅನಿವಾರ್ಯತೆ ಇದೆ ಎಂದರು.
ನಿವೃತ್ತ ಐಎಎಸ್ ಅಧಿಕಾರಿ ಬಲದೇವಕೃಷ್ಣ ಮಾತನಾಡಿ, ಸುರಕ್ಷಾ ಚಾರಿಟೇಬಲ್ ಸೇವಾ ಸಮಿತಿಯು ಮುಂಬರುವ ದಿನಗಳಲ್ಲಿ ಧಾರ್ಮಿಕ ಕಾರ್ಯದೊಂದಿಗೆ ಸಾಮಾಜಿಕ ಸೇವೆಯನ್ನು ರೂಢಿಸಿಕೊಂಡು ಬರಲಿದೆ ಎಂದರು.
ಮುಖಂಡರಾದ ಅಶೋಕ್ ರಾಜವರ್ಧನ್, ರೋಹಿಣಿ ಸುರೇಶ್ ಮಾತನಾಡಿದರು. ಕೆಪಿಸಿಸಿ ಕಾರ್ಯದರ್ಶಿ ದಿನೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಶ್ವತ್ಥ್, ಶಂಕರ್, ಜಿ. ವೆಂಕಟಾಚಲಯ್ಯ, ಎಂ.ಎನ್.ಜೆ. ಮಂಜು, ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್, ಮಹಿಳಾ ಅಧ್ಯಕ್ಷೆ ಜಯಮ್ಮ, ಪಟ್ಟಣ ಪಂಚಾಯಿತಿ ಸದಸ್ಯರಾದ ಕೆ.ಆರ್. ಓಬಳರಾಜು, ನಾಗರಾಜು, ಮುಖಂಡರಾದ ಕೆ.ವಿ. ಮಂಜುನಾಥ್, ರಾಘವೇಂದ್ರ, ಶಂಕರ್, ಗಣೇಶ್, ಮಂಜುನಾಥ್, ಛಾಯಪತಿ, ಕಣಿವೆ ಹನುಮಂತರಾಯಪ್ಪ, ಗಂಗಾಧರ್, ಮಧುಸೂದನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.