ತುರುವೇಕೆರೆ: ಮಾದಕ ವ್ಯಸನ ಸೇರಿದಂತೆ ಹಲವಾರು ದುಶ್ಚಟಗಳ ದಾಸನಾಗಿರುವ 20 ವರ್ಷದ ಮಗನನ್ನು ಸರಿ ದಾರಿಗೆ ತರಲು ಸಾಧ್ಯವಾಗದೆ ಬೇಸತ್ತ ತಾಯಿಯೊಬ್ಬಳು ಮಗನನ್ನು ಸಾಯಿಸಲು ಅನುಮತಿ ಕೋರಿ ಭಾನುವಾರ ತುರುವೇಕೆರೆ ಪೊಲೀಸರ ಮೊರೆ ಹೋಗಿದ್ದಾರೆ. ‘ಗಾಂಜಾ ಹಾಗೂ ಇತರ ಮಾದಕ ವಸ್ತುಗಳ ವ್ಯಸನಿಯಾಗಿರುವ ಮಗ ಅಭಿ ನನ್ನ ಗೌರವ ಹಾಳು ಮಾಡುತ್ತಿದ್ದಾನೆ. ಮನೆಯಲ್ಲಿ ಕಿರುಕುಳ ಕೊಡುತ್ತಿದ್ದಾನೆ. ದಯಮಾಡಿ ಆತನನ್ನು ಜೈಲಿಗೆ ಹಾಕಿ ಸರಿ ದಾರಿಗೆ ತನ್ನಿ. ಇಲ್ಲವೇ ಆತನನ್ನು ಸಾಯಿಸಲು ಅನುಮತಿ ಕೊಡಿ. ಅವನನ್ನು ಕೊಂದು, ನಾನೂ ಸಾಯುತ್ತೇನೆ’ ಎಂದು ಪಟ್ಟಣದ ನಿವಾಸಿ ರೇಣುಕಮ್ಮ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ತುರುವೇಕೆರೆಯಲ್ಲಿ ಸಣ್ಣದೊಂದು ಹೋಟೆಲ್ ಇಟ್ಟುಕೊಂಡು ಜೀವನ ನಡೆಸುತ್ತಿರುವ ರೇಣುಕಮ್ಮ ಮಗನನ್ನು ಪೊಲೀಸ್ ಠಾಣೆಗೆ ಕರೆ ತಂದಿದ್ದರು.
ಕೆಟ್ಟ ಸ್ನೇಹಿತರ ಸಹವಾಸಕ್ಕೆ ಬಿದ್ದ ಮಗ ದುಶ್ಚಟಗಳ ದಾಸನಾಗಿದ್ದಾನೆ. ಆತನನ್ನು ಸರಿ ದಾರಿಗೆ ತರಲು ಹಲವು ಬಾರಿ ಯತ್ನಿಸಿ ಸೋತಿದ್ದೇನೆ ಎಂದು ಅವರು ಪೊಲೀಸರ ಮುಂದೆ ಕಣ್ಣೀರಿಟ್ಟಿರು.
‘ತುರುವೇಕೆರೆಯಲ್ಲಿ ಗಾಂಜಾ ಸೇರಿದಂತೆ ಹಲವಾರು ಮಾದಕ ವಸ್ತುಗಳು ರಾಜಾರೋಷವಾಗಿ ಮಾರಾಟವಾಗುತ್ತಿವೆ. ಅನೇಕ ಯುವಕರು ಮಾದಕ ವ್ಯಸನಕ್ಕೆ ಬಿದ್ದು ಹಾಳಾಗುತ್ತಿದ್ದಾರೆ. ನನ್ನ ಮಗನೂ ಇಂತಹ ಜಾಲಕ್ಕೆ ಬಿದ್ದು ತನ್ನ ಜೀವನ ಹಾಳು ಮಾಡಿಕೊಂಡಿದ್ದಾನೆ’ ಎಂದು ದೂರಿದರು.
‘ನಿಮ್ಮ ಮಗ ಸ್ನೇಹಿತರ ಸಹವಾಸದಿಂದ ಹಾಳಾಗಿದ್ದಾನೆ. ಅವನನ್ನು ಸರಿ ದಾರಿಗೆ ತರುವ ಪ್ರಯತ್ನಕ್ಕೆ ನಾವೂ ಕೈ ಜೋಡಿಸುತ್ತೇವೆ’ ಎಂದು ರೇಣುಕಮ್ಮ ಅವರಿಗೆ ಪೊಲೀಸರು ಧೈರ್ಯ ತುಂಬಿದರು.
ಸದ್ಯ ಪೊಲೀಸರ ವಶದಲ್ಲಿರುವ ರೇಣುಕಮ್ಮ ಅವರ ಮಗ ಅಭಿಗೆ ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಕೊಡಿಸಲು ನೆರವು ನೀಡುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.