ADVERTISEMENT

ಜೀವನ ನಿರ್ವಹಣೆಗೆ ಕುಂಬಾರರ ಹೆಣಗಾಟ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2021, 5:48 IST
Last Updated 13 ಏಪ್ರಿಲ್ 2021, 5:48 IST
ತೋವಿನಕೆರೆ ಬಸ್‌ನಿಲ್ದಾಣದಲ್ಲಿ ಮಣ್ಣಿನ ಮಡಿಕೆಗಳನ್ನು ಮಾರಾಟ ಮಾಡುತ್ತಿರುವ ಕುಂಬಾರ ರುಕ್ಕಮ್ಮ
ತೋವಿನಕೆರೆ ಬಸ್‌ನಿಲ್ದಾಣದಲ್ಲಿ ಮಣ್ಣಿನ ಮಡಿಕೆಗಳನ್ನು ಮಾರಾಟ ಮಾಡುತ್ತಿರುವ ಕುಂಬಾರ ರುಕ್ಕಮ್ಮ   

ತೋವಿನಕೆರೆ: ದಶಕಗಳ ಹಿಂದೆ ಮಣ್ಣಿನಿಂದ ತಯಾರಿಸುವ ಉಪಕರಣಗಳು ಜನರ ಜೀವನದ ಪ್ರತಿ ಹಂತದಲ್ಲೂ ಬೇಕಾಗಿದ್ದವು. ಆಧುನಿಕ ಜೀವನದಲ್ಲಿ ಯಾರಿಗೂ ಬೇಡವಾದ ವಸ್ತುಗಳಾಗಿ ವಿನಾಶದ ಅಂಚಿನಲ್ಲಿದ್ದು, ತಯಾರು ಮಾಡುವ ಕುಂಬಾರರು ಜೀವನ ಕಷ್ಟದಾಯಕವಾಗಿದೆ.

ತೋವಿನಕೆರೆಯಲ್ಲಿ ಪ್ರತಿ ಶುಕ್ರವಾರ ಸಂತೆ ಮೈದಾನದಲ್ಲಿ, ಪ್ರತಿನಿತ್ಯ ಬಸ್ ನಿಲ್ದಾಣದಲ್ಲಿ ಸೂರೇನಹಳ್ಳಿ, ವೆಂಕಟರಮಣಹಳ್ಳಿ ಕುಂಬಾರರು ಮಣ್ಣಿನಿಂದ ತಯಾರಿಸಿದ ಉಪಕರಣಗಳನ್ನು ಹಲವು ದಶಕಗಳಿಂದ ಮಾರಾಟ ಮಾಡುತ್ತಿದ್ದಾರೆ. ಸಂತೆ ದಿನಗಳಲ್ಲಿ ಸಾವಿರಾರು, ಇತರೆ ದಿನಗಳಲ್ಲಿ ನೂರಾರು ಉಪಕರಣಗಳನ್ನು ಮಾರುತ್ತಿದ್ದರು. ಈಗ ಕೇವಲ 20ರಿಂದ 30 ಉಪಕರಣಗಳು ಮಾರಾಟವಾಗುವುದು ಕಷ್ಟವಾಗಿದೆ. ಇದರಿಂದ ಜೀವನ ನಿರ್ವಹಿಸುವುದು ಕಷ್ಟವಾಗಿದೆ.

ಸ್ಟೀಲ್, ಅಲ್ಯೂಮಿನಿಯಂ ಹಾಗೂ ಪ್ಲಾಸ್ಟಿಕ್ ವಸ್ತುಗಳ ಬಳಕೆ ಪ್ರಾರಂಭವಾದ ನಂತರ ಕುಂಬಾರರ ಮಕ್ಕಳು ಕುಲಕಸುಬಾದ ಕುಂಬಾರಿಕೆಯನ್ನು ಬಿಟ್ಟು ಬೇರೆ ವೃತ್ತಿಗಳಿಗೆ ಹೋಗಿದ್ದಾರೆ.ತೋವಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂರೇನಹಳ್ಳಿ, ವೆಂಕಟರಮಣಹಳ್ಳಿಯ ಹಲವಾರು ಕುಂಬಾರರ ಕುಟುಂಬಗಳು ಈಗಲೂ ಮಣ್ಣಿನ ಮಡಿಕೆಗಳ ತಯಾರಿಕೆ ಹಾಗೂ ಮಾರಾಟ ಮಾಡುತ್ತಿವೆ.

ADVERTISEMENT

ಹಗುರುವಾದ, ಹೆಚ್ಚು ದಿನಗಳು ಬಾಳಿಕೆ ಬರುವ, ಆಕರ್ಷಕವಾದ, ಶುಚಿ ಮತ್ತು ಸಾಗಾಣಿಕೆ ಮಾಡಲು ಸುಲಭವಾದ ಉಪಕರಣಗಳು ಮಾರುಕಟ್ಟೆಗೆ ಬಂದ ನಂತರ ಮಣ್ಣಿನಿಂದ ಮಾಡಿದ ಉಪಕರಣಗಳಿಗೆ ದೊಡ್ಡ ಹೊಡೆತ ಬಿದ್ದಿದೆ.

‘ಈ ಹಿಂದೆ ವರ್ಷದ ಎಲ್ಲಾ ದಿನಗಳಲ್ಲಿ ತಯಾರು ಮಾಡಿ ಮಾರಾಟ ಮಾಡುತ್ತಿದ್ದೆವು. ಆದರೆ, ಈಗ ಜನರು ಬೇಸಿಗೆಯ ನಾಲ್ಕು ತಿಂಗಳು ಮಾತ್ರ ಉಪಯೋಗ ಮಾಡುತ್ತಾರೆ. ಮನೆಗಳಲ್ಲಿ ಯುವಕರು ಈ ಕಸುಬನ್ನು ಮುಂದುವರಿಸಲು ಆಸಕ್ತಿ ತೋರಿಸುತ್ತಿಲ್ಲ’ ಎಂದು ನೋವಿನಿಂದ ಹೇಳುತ್ತಾರೆ ವೆಂಕಟರಮಣಹಳ್ಳಿ ಮಂಜುನಾಥ.

30 ವರ್ಷದಿಂದ ವ್ಯಾಪಾರ ಮಾಡುತ್ತಿದ್ದೇನೆ. ಸಂತೆಯ ದಿನ ₹ 800 ಹಾಗೂ ಇತರೆ ದಿನಗಳಲ್ಲಿ ₹ 400 ವ್ಯಾಪಾರ ಮಾಡುತ್ತೇವೆ. ಬಿಸಿಲು ಹೆಚ್ಚು ಇದ್ದರೆ ವ್ಯಾಪಾರ ಚೆನ್ನಾಗಿ ಆಗುತ್ತದೆ. ಕೆಲವು ಸಲ ವ್ಯಾಪಾರವಿಲ್ಲದೇ ಬರಿ ಕೈಯಲ್ಲಿ ಹೋಗಿದ್ದು ಇದೆ’ ಎಂದು ಹೇಳಿದ ರುಕ್ಕಮ್ಮ ಅವರ ಕಣ್ಣಿನಲ್ಲಿ ನೀರು ಜಿನುಗಿತು.

‘ಮಣ್ಣಿನ ಉಪಕರಣಗಳನ್ನು ತಯಾರಿಸುವುದನ್ನು ಕಲೆ ಎಂದು ಘೋಷಿಸಬೇಕು. ದಶಕಗಳಿಂದ ಕಸುಬನ್ನು ಉಳಿಸಿರುವ ಜನಾಂಗದ ವರಿಗೆ ಪ್ರತಿ ತಿಂಗಳು ಗೌರವಧನ ನೀಡಬೇಕು’ ಎಂದು ಒತ್ತಾಯಿಸುತ್ತಾರೆ ಕೊರಟಗೆರೆ ತಾಲ್ಲೂಕು ಕುಂಬಾರ ಸಂಘದ ಅಶ್ವತನಾರಾಯಣ ರಾಜು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.