ADVERTISEMENT

ಅಕ್ಕಿ ಕೇಂದ್ರದ್ದು, ಚೀಲ ರಾಜ್ಯ ಸರ್ಕಾರದ್ದು: ಕಾರಜೋಳ ಟೀಕೆ

ಕಾರ್ಯಕರ್ತರ ಸಭೆಯಲ್ಲಿ ಮೈತ್ರಿ ಅಭ್ಯರ್ಥಿ ಗೋವಿಂದ ಎಂ. ಕಾರಜೋಳ ಟೀಕೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2024, 13:27 IST
Last Updated 6 ಏಪ್ರಿಲ್ 2024, 13:27 IST
ಪಾವಗಡದಲ್ಲಿ ಶನಿವಾರ ನಡೆದ ಜೆಡಿಎಸ್, ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟನೆ ಸಂದರ್ಭ
ಪಾವಗಡದಲ್ಲಿ ಶನಿವಾರ ನಡೆದ ಜೆಡಿಎಸ್, ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟನೆ ಸಂದರ್ಭ   

ಪಾವಗಡ: ತಾಲ್ಲೂಕಿನಲ್ಲಿ ನಿರ್ಮಾಣವಾಗಿರುವ ಸೋಲಾರ್ ಪಾರ್ಕ್ ಕೇಂದ್ರದ ಯೋಜನೆ. ರಾಜ್ಯದಲ್ಲಿ ವಿತರಿಸುತ್ತಿರುವ ಅಕ್ಕಿಯೂ ಕೇಂದ್ರ ಸರ್ಕಾರದ್ದು. ಆದರೆ ಕಾಂಗ್ರೆಸ್‌ ನವರು ಎಲ್ಲವನ್ನು ತಾವು ಮಾಡಿದ್ದು, ಎಲ್ಲವೂ ತಮ್ಮದೇ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಗೋವಿಂದ ಎಂ. ಕಾರಜೋಳ ಆರೋಪಿಸಿದರು.

ಪಟ್ಟಣದಲ್ಲಿ ಶನಿವಾರ ಜೆಡಿಎಸ್, ಬಿಜೆಪಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಅಕ್ಕಿ ಕೇಂದ್ರದ್ದು ಆದರೆ ಚೀಲ ಮಾತ್ರ ಸಿದ್ದರಾಮಯ್ಯ ಅವರ ಸರ್ಕಾರದ್ದು. ಕಾಂಗ್ರೆಸ್ ನವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಬಿಜೆಪಿ ಸರ್ಕಾರ ಸಂವಿಧಾನವನ್ನೇ ಬದಲಿಸುತ್ತದೆ ಎಂದು ಸಲ್ಲದ ಸುಳ್ಳನ್ನು ಪ್ರಚಾರ ಮಾಡಲಾಗುತ್ತಿದೆ. ಆದರೆ ಮೋದಿ ಪ್ರಧಾನಿಯಾಗಿದ್ದೇ ಅಂಬೇಡ್ಕರ್ ರಚಿಸಿರುವ ಸಂವಿಧಾನದಿಂದ ಎಂದು ಹಲವು ಬಾರಿ ಹೇಳಿದ್ದಾರೆ ಎಂದರು.

ADVERTISEMENT

ಕಾಂಗ್ರೆಸ್‌ನಲ್ಲಿ ಪ್ರಧಾನಿ ಅಭ್ಯರ್ಥಿಯೇ ಇಲ್ಲ. ರಾಹುಲ್ ಪ್ರಧಾನಿ ಆಗುವುದನ್ನು ಯಾರೊಬ್ಬರೂ ಒಪ್ಪುವುದಿಲ್ಲ. ಕಾಂಗ್ರೆಸ್ ಆಡಳಿತ ನಡೆಸಿದ ಅವಧಿಯಲ್ಲಿ ದೇಶ ಸುರಕ್ಷಿತವಾಗಿರಲಿಲ್ಲ. ದೇಶದ ಐಕ್ಯತೆ, ಅಭಿವೃದ್ಧಿ, ಸುರಕ್ಷತೆಗಾಗಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದರು.

ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ಜೆಡಿಎಸ್ ಬಿಜೆಪಿ ಮೈತ್ರಿಯಿಂದ ರಾಜ್ಯದಲ್ಲಿ ಸಂಚಲನ ಮೂಡಿದೆ. ದೇಶದ ಅಭಿವೃದ್ಧಿಗಾಗಿ ಮತ್ತೊಮ್ಮೆ ಎನ್‌ಡಿಎ ಸರ್ಕಾರ ರಚನೆಯಾಗಬೇಕಿದೆ. ದಲಿತರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ದಿಕ್ಕು ತಪ್ಪಿಸುತ್ತಿದ್ದಾರೆ. ಪರಿಶಿಷ್ಟ ಜಾತಿಯ ಅಭಿವೃದ್ಧಿಗಾಗಿ ಬಳಸಬೇಕಿದ್ದ ₹27 ಸಾವಿರ ಕೋಟಿ ಅನುದಾನ ಬೇರೆಡೆ ಬಳಸಿದ್ದಾರೆ ಎಂದು ದೂರಿದರು.

ಕೆ.ಎಂ. ತಿಮ್ಮರಾಯಪ್ಪ ಮಾತನಾಡಿ, ಈ ಹಿಂದೆಂದಿಗಿಂತಲೂ ಹೆಚ್ಚಿನ ಮತಗಳ ಅಂತರದಲ್ಲಿ ಕ್ಷೇತ್ರದ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ ಜೆಡಿಎಸ್, ಬಿಜೆಪಿ ಕಾರ್ಯಕರ್ತರ ಮೇಲಿದೆ. ಪಕ್ಷದ ವರಿಷ್ಠರ ತೀರ್ಮಾನದಂತೆ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರಿಗೆ ಬೆಂಬಲ ನೀಡಬೇಕು ಎಂದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಸಿ. ಅಂಜಿನಪ್ಪ, ಕಾಂಗ್ರೆಸ್ ಕುತಂತ್ರದಿಂದ ತುಮಕೂರು ಲೋಕಸಭೆ ಚುನಾವಣೆಯಲ್ಲಿ ದೇವೇಗೌಡ ಸೋತರು. ಆದರೆ ಈ ಬಾರಿ ರಾಜ್ಯದಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಪ್ರತಿಯೊಬ್ಬರು ಮತದಾರರಿಗೆ ಗೊಂದಲವಾಗದಂತೆ ಮಾಹಿತಿ ನೀಡಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಮಾಜಿ ಶಾಸಕ ತಿಪ್ಪಾರೆಡ್ಡಿ, ಎಸ್. ಶಿವಪ್ರಸಾದ್, ತಿಮ್ಮಾರೆಡ್ಡಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟೇಶ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎನ್‌.ಎ. ಈರಣ್ಣ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ರಂಗಣ್ಣ, ಬಲರಾಮರೆಡ್ಡಿ, ಚನ್ನಕೇಶವರೆಡ್ಡಿ ಮಾತನಾಡಿದರು.

ಮುಖಂಡ ಡಾ ಜಿ.ವೆಂಕಟರಾಮಯ್ಯ, ಜಿ.ಟಿ. ಗಿರೀಶ್, ಕಾವಲಗೆರೆ ರಾಮಾಂಜಿ, ಯುನುಸ್, ರವಿಶಂಕರನಾಯ್ಕ, ಗಂಗಾಧರ ನಾಯ್ಡು, ಬ್ಯಾಡನೂರು ಶಿವು, ಅಲಕುಂದಿರಾಜು, ರಘು, ಅಂಜಿನಪ್ಪ, ಅಶೋಕ್, ನವೀನ್ ಸೀತಾರಮ್, ಶಿವಕುಮಾರ್ ಸಾಕೇಲ್ ಉಪಸ್ಥಿತರಿದ್ದರು.

ಭದ್ರಾ ಮೇಲ್ದಂಡೆ ಪೂರ್ಣ ತಾಲ್ಲೂಕು ಸೇರಿದಂತೆ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಸುವ ಅಗತ್ಯವಿದೆ. ನೀರಾವರಿ ಸಚಿವನಾಗಿದ್ದಾಗ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ₹2500 ಕೋಟಿ ಅನುದಾನ ಮಂಜೂರು ಮಾಡಲಾಗಿತ್ತು. ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಿ ರೈತರಿಗೆ ನೀರು ಪೂರೈಸಲಾಗುವುದು. ನೀರಾವರಿ ಯೋಜನೆಗೆ ಒತ್ತು ನೀಡಲಾಗುವುದು ಎಂದು ಗೋವಿಂದ ಎಂ. ಕಾರಜೋಳ ಭರವಸೆ ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.