ADVERTISEMENT

ತುಮಕೂರು | ನಿಷೇಧದ ನಂತರವೂ ಖಾದ್ಯಗಳಿಗೆ ನಿಲ್ಲದ ಕೃತಕ ಬಣ್ಣ ಬಳಕೆ

ಗೋಬಿ, ಕಬಾಬ್‌ ಬಳಕೆಗೆ ಬೀಳದ ಕಡಿವಾಣ, ನೋಂದಣಿಯಾಗದ ಶವರ್ಮಾ ಮಳಿಗೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 4:28 IST
Last Updated 25 ಜುಲೈ 2024, 4:28 IST
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ತುಮಕೂರಿನ ಜಿಲ್ಲಾ ಅಂಕಿತ ಅಧಿಕಾರಿಯ ಕಚೇರಿ
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ತುಮಕೂರಿನ ಜಿಲ್ಲಾ ಅಂಕಿತ ಅಧಿಕಾರಿಯ ಕಚೇರಿ   

ತುಮಕೂರು: ಗೋಬಿ ಮಂಚೂರಿ, ಕಬಾಬ್‌ ಖಾದ್ಯಗಳಿಗೆ ಕೃತಕ ಬಣ್ಣ ಬಳಸುವುದನ್ನು ನಿಷೇಧಿಸಿ 5 ತಿಂಗಳು ಕಳೆಯುತ್ತಾ ಬಂದರೂ ಜಿಲ್ಲೆಯಲ್ಲಿ ಕೃತಕ ಬಣ್ಣ ಬಳಕೆ ನಿಂತಿಲ್ಲ.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್ಎಐ) ಅಧಿಕಾರಿಗಳು ತಡವಾಗಿ ಎಚ್ಚೆತ್ತುಕೊಂಡಿದ್ದಾರೆ. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ, ರಸ್ತೆ ಪಕ್ಕದಲ್ಲಿನ ಹೋಟೆಲ್‌, ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ನಗರ ವ್ಯಾಪ್ತಿಯಲ್ಲಿ ಈ ಕೆಲಸ ಇನ್ನೂ ಪ್ರಾರಂಭವಾಗಿಲ್ಲ. ಕೃತಕ ಬಣ್ಣ ಬಳಸುವುದನ್ನು ತಡೆದಿಲ್ಲ. ಇದರ ಅಡ್ಡ ಪರಿಣಾಮದ ಅರಿಯದ ಜನ ಕಬಾಬ್‌, ಗೋಬಿ ಮಂಚೂರಿ ಸೇವನೆಯಲ್ಲಿ ನಿರತರಾಗಿದ್ದಾರೆ.

ಮಾರ್ಚ್‌ 11ರಂದು ಗೋಬಿ ಮಂಚೂರಿ, ಕಬಾಬ್‌, ಪಾನಿಪೂರಿ ಖಾದ್ಯಗಳಿಗೆ ಕೃತಕ ಬಣ್ಣ ಬಳಸುವುದನ್ನು ನಿಷೇಧಿಸಿ ಸರ್ಕಾರ ಆದೇಶಿಸಿತ್ತು. ಬಳಸುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚಿಸಿತ್ತು. ನಗರದಿಂದಲೂ ಕಬಾಬ್‌ ಮಾದರಿಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಕೃತಕ ಬಣ್ಣ ಬಳಸಿದ ಕಬಾಬ್‌ ಬಳಕೆಗೆ ಯೋಗ್ಯವಲ್ಲ ಎಂಬ ವರದಿ ಬಂದಿತ್ತು. ಸರ್ಕಾರ ಆದೇಶ ನೀಡಿ ನಾಲ್ಕು ತಿಂಗಳು ಕಳೆದ ನಂತರ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ.

ADVERTISEMENT

ಪ್ರಾಧಿಕಾರದಲ್ಲಿ ಸಿಬ್ಬಂದಿಯ ಕೊರತೆಯಿಂದ ಆಹಾರ ಗುಣಮಟ್ಟದ ಪರಿಶೀಲನೆ ಕಾರ್ಯ ಸಮರ್ಪಕವಾಗಿ ಆಗುತ್ತಿಲ್ಲ. ಜಿಲ್ಲೆಗೆ 11 ಆಹಾರ ಸುರಕ್ಷತಾ ಅಧಿಕಾರಿ ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ 10 ಹುದ್ದೆಗಳು ಖಾಲಿ ಇವೆ. ಒಬ್ಬ ಕಾಯಂ ಅಧಿಕಾರಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆರೋಗ್ಯ ಇಲಾಖೆಯಿಂದ ಮೂವರನ್ನು ನಿಯೋಜಿಸಿಕೊಳ್ಳಲಾಗಿದೆ. ಈ ನಾಲ್ವರು ಅಧಿಕಾರಿಗಳು ಇಡೀ ಜಿಲ್ಲೆಯ ಆಹಾರ ಸುರಕ್ಷತೆಯ ಜವಾಬ್ದಾರಿ ಹೊತ್ತಿದ್ದಾರೆ. ಮೂರು ತಾಲ್ಲೂಕಿನ ಜವಾಬ್ದಾರಿಯನ್ನು ಒಬ್ಬರು ನೋಡಿಕೊಳ್ಳಬೇಕಿದೆ.

ಶವರ್ಮಾ ಸುರಕ್ಷಿತ– ಬಳಕೆ ಬೇಡ: ನಗರದ ವಿವಿಧ ಕಡೆಗಳಲ್ಲಿ ತಯಾರಿಸುವ ಶವರ್ಮಾ ಆಹಾರದ 6 ಮಾದರಿಗಳನ್ನು ಬೆಂಗಳೂರಿನ ಪ್ರಯೋಗಾಲಯದಲ್ಲಿ ಈಚೆಗೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಶವರ್ಮಾ ಮಾದರಿಯಲ್ಲಿ ಯಾವುದೇ ಕೆಮಿಕಲ್‌ ಅಂಶಗಳು ಇಲ್ಲ ಎಂಬುವುದು ವರದಿಯಿಂದ ದೃಢಪಟ್ಟಿದೆ. ಆದರೂ ಶವರ್ಮಾ ಸೇವಿಸುವವರು ಎಚ್ಚರಿಕೆಯಿಂದ ಇರಬೇಕು ಎಂದು ಆಹಾರ ಗುಣಮಟ್ಟದ ಅಧಿಕಾರಿಗಳು ಮನವಿ ಮಾಡಿದ್ದಾರೆ.

ನಗರದಲ್ಲಿ 15ಕ್ಕೂ ಹೆಚ್ಚು ಮಳಿಗೆಗಳಲ್ಲಿ ಶವರ್ಮಾ ತಯಾರಿಸಲಾಗುತ್ತಿದೆ. ಆದರೆ ಇವೆಲ್ಲ ಆಹಾರ ಗುಣಮಟ್ಟದ ಪ್ರಾಧಿಕಾರದಿಂದ ಅನುಮತಿ ಪಡೆದಿಲ್ಲ. ಗಂಗೋತ್ರಿ ರಸ್ತೆಯ 3, ಎಸ್‌.ಎಸ್‌.ಪುರಂ ಬಳಿಯ 1 ಆಹಾರ ಮಳಿಗೆ ಮಾತ್ರ ಶವರ್ಮಾ ಆಹಾರ ತಯಾರಿಗೆ ಪರವಾನಗಿ ಪಡೆದಿದೆ. ಬೇರೆ ಯಾವ ಮಳಿಗೆಗಳೂ ಎಫ್‌ಎಸ್‌ಎಸ್‌ಎಐನಲ್ಲಿ ನೋಂದಣಿಯಾಗಿಲ್ಲ. ಇದರಿಂದ ನಗರದ ಜನರು ಶವರ್ಮಾ ಸೇವಿಸುವ ಮುನ್ನ ಒಮ್ಮೆ ಯೋಚಿಸಬೇಕಿದೆ.

‘ಜನರ ಆರೋಗ್ಯದ ಮೇಲೆ ತೀವ್ರತರವಾದ ಪರಿಣಾಮ ಬೀರುವ ಕೃತಕ ಬಣ್ಣ ಬಳಕೆಯನ್ನು ಕಟ್ಟುನಿಟ್ಟಾಗಿ ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ನಿಷೇಧಿತ ಬಣ್ಣ ಬಳಸುವವರ ವಿರುದ್ಧ ಯಾವುದೇ ಮುಲಾಜು ನೋಡದೆ ಶಿಸ್ತು ಕ್ರಮ ಜರುಗಿಸಬೇಕು. ಆಹಾರ ತಯಾರಕರು ಹಾಗೂ ಸಾರ್ವಜನಿಕರಲ್ಲಿ ವ್ಯಾಪಕ ಪ್ರಮಾಣದಲ್ಲಿ ಜಾಗೃತಿ ಮೂಡಿಸಬೇಕು. ಆಹಾರದ ಗುಣಮಟ್ಟ ಕಾಪಾಡಲು ಕಾನೂನಿನ ಅಸ್ತ್ರ ಬಳಕೆ ಮಾಡಬೇಕು’ ಎಂದು ನಗರದ ಸಂಜೀವಿನಿ ಒತ್ತಾಯಿಸಿದರು.

ಕಾನೂನು ಕ್ರಮ

ಜಿಲ್ಲೆಯಾದ್ಯಂತ ಕೆಮಿಕಲ್‌ ಮಿಶ್ರಿತ ಆಹಾರ ಸೇವಿಸದಂತೆ ಮಾರಾಟ ಮಾಡದಂತೆ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಎಲ್ಲ ಅಂಗಡಿ ಮಳಿಗೆ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುತ್ತದೆ. ಸೂಚನೆ ನಂತರ ಕೂಡ ಕೃತಕ ಬಣ್ಣ ಬಳಸುವುದು ಗಮನಕ್ಕೆ ಬಂದರೆ ದಂಡ ವಿಧಿಸಿ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುವುದು. ಡಾ.ಪಿ.ಹರೀಶ್‌ ಜಿಲ್ಲಾ ಅಂಕಿತ ಅಧಿಕಾರಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.