ADVERTISEMENT

ನೋವುಂಡು ರಂಜಿಸುವ ಕಲಾವಿದರು

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 4:27 IST
Last Updated 28 ಮಾರ್ಚ್ 2021, 4:27 IST
ಕಲಾವಿದ ಲಕ್ಷ್ಮಣದಾಸ್ ನಗಾರಿ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು
ಕಲಾವಿದ ಲಕ್ಷ್ಮಣದಾಸ್ ನಗಾರಿ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು   

ತುಮಕೂರು: ಕನ್ನಡಪರ ಮನಸ್ಸುಗಳನ್ನು ಒಟ್ಟಾಗಿ ಸೇರಿಸುವ ರಂಗಭೂಮಿಯು ಮಣಿಗಳನ್ನು ಪೋಣಿಸುವ ದಾರವಿದ್ದಂತೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಇಲ್ಲಿ ಶನಿವಾರ ಅಭಿಪ್ರಾಯಪಟ್ಟರು.

ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಾಟಕ ಮನೆ ಮತ್ತು ಜಿಲ್ಲಾ ರಂಗ ಕಲಾವಿದರು ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ವಿಶ್ವರಂಗಭೂಮಿ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಕಲಾವಿದರು ತಮ್ಮ ಒತ್ತಡಗಳನ್ನು ಬದಿಗೊತ್ತಿ ಅಭಿನಯಿಸುವ ಮೂಲಕ ಎಲ್ಲರನ್ನೂ ರಂಜಿಸುತ್ತಾರೆ’ ಎಂದರು.

ರಂಗ ಕಲೆಯು ಸಾಮಾಜಕ್ಕೆ ಉತ್ತಮ ಸಂದೇಶ ನೀಡುತ್ತದೆ. ಜನರನ್ನು ಒಂದು ಅದೃಶ್ಯವಾದ ಲೋಕಕ್ಕೆಕರೆದೊಯ್ಯುತ್ತದೆ. ಮನರಂಜನೆ ನೀಡುವುದರ ಜತೆಗೆ ಸೃಜನಶೀಲತೆ ಅರಳಿಸುವಲ್ಲಿ ಕಲೆಗಳು ಮಹತ್ತರ ಪಾತ್ರ ವಹಿಸುತ್ತವೆ ಎಂದು ಹೇಳಿದರು.

ADVERTISEMENT

ಹರಿಕಥೆ ಕಲಾವಿದ ಲಕ್ಷ್ಮಣದಾಸ್, ‘ಕೋವಿಡ್-19ನಿಂದಾಗಿ ಕಲಾವಿದರು ಈಗಲೂ ಸಂಕಷ್ಟದಲ್ಲೇ ಬದುಕು ದೂಡುತ್ತಿದ್ದಾರೆ. ಪೌರಾಣಿಕ ರಂಗಭೂಮಿ ಕಲಾವಿದರು ಕಳೆದ ಒಂದು ವರ್ಷದಿಂದ ಉಪವಾಸ ಅನುಭವಿಸಿದ್ದಾರೆ. ಸರ್ಕಾರವು ಸಭೆ, ಸಮಾರಂಭ, ಇನ್ನಿತರೆ ಕಾರ್ಯಕ್ರಮಗಳಿಗೆ ಈಗ ನಿರ್ಬಂಧ ವಿಧಿಸಿದ್ದು, ಇದರಿಂದಾಗಿ ನಾಟಕ ಪ್ರದರ್ಶನಗಳು ನಿಂತುಹೋಗಿದೆ’ ಎಂದು ತಿಳಿಸಿದರು.

ಕಾರ್ಯಕ್ರಮ ಆಯೋಜಕರಾದ ನಾಟಕಮನೆ ಮಹಲಿಂಗು ಮಾತನಾಡಿ, ‘ವಿಶ್ವ ರಂಗಭೂಮಿ ದಿನಾಚರಣೆಯನ್ನು ಸಂಭ್ರಮವನ್ನು ಕೋವಿಡ್ ಬಲಿ ತೆಗೆದುಕೊಂಡಿದೆ. ಸರಳವಾಗಿ ಆಯೋಜಿಸಲಾಗಿದೆ’ ಎಂದರು.

ರಂಗಭೂಮಿ ನಿರ್ದೇಶಕ ಮೆಳೇಹಳ್ಳಿ ದೇವರಾಜ್, ‘ನಾಟಕಮನೆ ನಿರಂತರವಾಗಿ ನಾಟಕ ತರಬೇತಿ, ಅಭಿನಯ ಶಿಬಿರ, ಹೊಸ ಕಲಾವಿದರನ್ನು ರಂಗಭೂಮಿಗೆ ಪರಿಚಯಿಸುವ ಕೆಲಸ ಮಾಡುತ್ತಿದೆ ’ ಎಂದರು.

ಕಲಾವಿದೆ ಬಾಲಾ ವಿಶ್ವನಾಥ್, ಕಲಾವಿದ ವೈ.ಎನ್.ಶಿವಣ್ಣ, ಎಂ.ಎಸ್. ರವಿಕುಮಾರ್ ಕಟ್ಟೀಮನಿ, ಗಾಯಕ ಮಲ್ಲಿಕಾರ್ಜುನ ಕೆಂಕೆರೆ,
ಯಕ್ಷಗಾನ ಅಕಾಡೆಮಿ ಸದಸ್ಯೆ ಆರತಿ ಪಟ್ರಮೆ, ಉಗಮ ಶ್ರೀನಿವಾಸ್ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.