ADVERTISEMENT

ತುಮಕೂರು: ಉತ್ಸಾಹ ಕಳೆದುಕೊಂಡ ಮದ್ಯ ಪ್ರಿಯರು, ಬಿಕೋ ಎನ್ನುತ್ತಿವೆ ಮದ್ಯದಂಗಡಿಗಳು

ವ್ಯಾಪಾರ ದಿಢೀರ್ ಕುಸಿತ

ಅನಿಲ್ ಕುಮಾರ್ ಜಿ
Published 13 ಮೇ 2020, 4:25 IST
Last Updated 13 ಮೇ 2020, 4:25 IST
ತುಮಕೂರು ವಿವೇಕಾನಂದ ರಸ್ತೆಯಲ್ಲಿ ಗ್ರಾಹಕರಲ್ಲಿದೇ ಬಣಗುಡುತ್ತಿರುವ ಮದ್ಯದಂಗಡಿ
ತುಮಕೂರು ವಿವೇಕಾನಂದ ರಸ್ತೆಯಲ್ಲಿ ಗ್ರಾಹಕರಲ್ಲಿದೇ ಬಣಗುಡುತ್ತಿರುವ ಮದ್ಯದಂಗಡಿ   

ತುಮಕೂರು: ಗಂಟೆಗಟ್ಟಲೇ ಸರದಿ ಸಾಲಿನಲ್ಲಿ ನಿಂತು ಮದ್ಯ ಖರೀದಿಸಿದ ಚಿತ್ರಣ ಇನ್ನೂ ನಮ್ಮಕಣ್ಣು ಮುಂದೆ ಇರುವಾಗಲೇ ಬಹುತೇಕ ಮದ್ಯದ ಅಂಗಡಿಗಳ ಮುಂದೆ ಜನರಿಲ್ಲದೆ ಬಿಕೋ ಎನ್ನುತ್ತಿರುವ ದೃಶ್ಯ ಕಾಣಸಿಗುತ್ತದೆ.

ಹೌದು, 40 ದಿನಗಳ ಲಾಕ್‌ಡೌನ್‌ನಿಂದಾಗಿ ಮದ್ಯ ಸಿಗದೆ ಮದ್ಯಪ್ರಿಯರು ಪರದಾಡಿದ್ದರು. ಮದ್ಯದ ಅಂಗಡಿಗಳು ತೆರೆಯುತ್ತಿದ್ದಂತೆ ಯುವಕ–ಯುವತಿಯರು, ಮಹಿಳೆಯರು, ಪುರುಷರು ಎನ್ನದೇ ಸರದಿ ಸಾಲಿನಲ್ಲಿ ಗಂಟೆಗಟ್ಟಲೇ ಕಾದು ಮದ್ಯ ಖರೀದಿಸಿದ್ದರು. ಆದರೆ,ಆರಂಭದಲ್ಲಿ ಮದ್ಯ ಖರೀದಿಸಲು ತೋರಿದ ಉತ್ಸಾಹ ಈಗ ಕಾಣುತ್ತಿಲ್ಲ.

ಜಿಲ್ಲೆಯ ಬಹುತೇಕ ಮದ್ಯದ ಅಂಗಡಿಗಳು ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿವೆ. ತುಮಕೂರು ನಗರ ಹೊರತುಪಡಿಸಿ ಜಿಲ್ಲೆಯ ಎಲ್ಲೆಡೆ ಮೇ 4ರಿಂದಲೇ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. 76 ವೈನ್‌ ಸ್ಟೋರ್, 24 ಎಂಎಸ್‌ಐಎಲ್‌ ಮಳಿಗೆ ಸೇರಿದಂತೆ 200 ಮದ್ಯದ ಅಂಗಡಿಗಳು ಇವೆ. ಒಂದೇ ದಿನಕ್ಕೆ 29,487 ಲೀಟರ್ ಮದ್ಯ ಹಾಗೂ 4,196 ಲೀಟರ್ ಬಿಯರ್ ಮಾರಾಟವಾಗಿತ್ತು.

ADVERTISEMENT

ಆರಂಭದ ದಿನ ಸರದಿ ಹೆಚ್ಚಿರುವುದನ್ನು ಮನಗಂಡ ಅನೇಕರು ಸರದಿಯಲ್ಲಿ ನಿಲ್ಲುವುದು ತಪ್ಪಿಸಿಕೊಳ್ಳುವ ಸಲುವಾಗಿ ನಂತರ 2 ದಿನ ಹೆಚ್ಚು ಮದ್ಯ ಖರೀದಿಗೆ ಮುಂದಾದರು. ಪರಿಣಾಮ ಮೇ 5 ರಂದು 97881 ಲೀಟರ್ ಮದ್ಯ, 22082 ಬಿಯರ್ ಹಾಗೂ ಮೇ 6 ರಂದು 90865 ಮದ್ಯ, 17143 ಲೀಟರ್ ಬಿಯರ್ ಮಾರಾಟವಾಯಿತು.

ನಂತರ ತುಮಕೂರು ನಗರದಲ್ಲಿ ಮೇ 8 ರಿಂದ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿದರೂ ಜಿಲ್ಲೆಯಲ್ಲಿ ವಹಿವಾಟು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಸಾಗಿದೆ. ಗ್ರಾಹಕರ ಸಂಖ್ಯೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಹಲವೆಡೆ ಸ್ಥಾಪಿಸಿದ್ದ ಬ್ಯಾರಿಕೇಡ್‌ಗಳನ್ನು ತೆಗೆದು ಹಾಕಲಾಗಿದೆ. ಹಲವೆಡೆ ಗ್ರಾಹಕರು ಬಂದರೆ ಸಾಕು ಎಂಬ ಪರಿಸ್ಥಿತಿ ಇದೆ. ಸ್ಯಾನಿಟೈಸರ್ ಹಾಕಿಯೇ ಗ್ರಾಹಕರನ್ನು ಒಳ ಬಿಡಬೇಕು. ಸಿಬ್ಬಂದಿ ಕೈ ಗ್ಲೌಸ್, ಮಾಸ್ಕ್ ಧರಿಸಬೇಕು. ಒಮ್ಮೆ ಒಬ್ಬರಿಗೆ ಮಾತ್ರ ಒಳಗೆ ಬಿಡಬೇಕು ಎಂಬ ನಿಯಮಗಳನ್ನು ಕೈ ಬಿಡಲಾಗಿದೆ.

ಆಗೊಮ್ಮೆ ಈಗೊಮ್ಮೆ: ಮೇ 5ರಿಂದಲೇ ಮದ್ಯದಂಗಡಿಗಳ ಮುಂದೆ ಸರದಿ ಸಾಲು ಸಣ್ಣದಾಯಿತು. ಈಗ ಮದ್ಯದ ಅಂಗಡಿಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ. ಆಗೊಮ್ಮೆ, ಈಗೊಮ್ಮೆ ಗ್ರಾಹಕರು ಖರೀದಿಗೆ ಬರುತ್ತಿದ್ದಾರೆ. ಆರಂಭದ 2 ದಿನಗಳಿಗೆ ಹೋಲಿಸಿದರೆ ಶೇ 50ರಷ್ಟು ವ್ಯಾಪಾರ ಕಡಿಮೆಯಾಗಿದೆ ಎನ್ನುತ್ತಾರೆ ವ್ಯಾಪಾರಿಯೊಬ್ಬರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.