ADVERTISEMENT

ತುಮಕೂರು | ನಮ್ಮ ಕ್ಲಿನಿಕ್‌ನಲ್ಲಿ ವೈದ್ಯರೇ ಇಲ್ಲ!

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2024, 7:04 IST
Last Updated 24 ಫೆಬ್ರುವರಿ 2024, 7:04 IST
ತುಮಕೂರಿನ ದಿಬ್ಬೂರಿನಲ್ಲಿರುವ ನಮ್ಮ ಕ್ಲಿನಿಕ್‌
ತುಮಕೂರಿನ ದಿಬ್ಬೂರಿನಲ್ಲಿರುವ ನಮ್ಮ ಕ್ಲಿನಿಕ್‌    

ತುಮಕೂರು: ಎಲ್ಲರಿಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಆರಂಭಿಸಿದ್ದ ‘ನಮ್ಮ ಕ್ಲಿನಿಕ್‌’ಗಳು ತನ್ನ ಉದ್ದೇಶವನ್ನೇ ಮರೆತಿವೆ. ರೋಗಿಗಳನ್ನು ಪರೀಕ್ಷಿಸಿ, ಮಾತ್ರೆ ನೀಡಲು ವೈದ್ಯರೇ ಇಲ್ಲವಾಗಿದ್ದಾರೆ!

ಕ್ಲಿನಿಕ್‌ಗಳು ಪ್ರಾರಂಭವಾಗಿ ವರ್ಷ ಕಳೆದರೂ ಇನ್ನೂ ಸುಸ್ಥಿತಿಗೆ ಬಂದಿಲ್ಲ. ಅಗತ್ಯ ಸಿಬ್ಬಂದಿ ನಿಯೋಜಿಸುವ ಕೆಲಸವಾಗಿಲ್ಲ. ಕ್ಲಿನಿಕ್‌ಗಳು ‘ಚೆನ್ನಾಗಿ’ ನಡೆಯುತ್ತಿವೆ ಎಂದು ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರ ಜತೆ ನಡೆದ ಸಭೆಗಳಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ವಾಸ್ತವದ ಚಿತ್ರಣ ಅಧಿಕಾರಿಗಳ ಮಾತಿಗಿಂತ ಭಿನ್ನವಾಗಿದೆ.

ನಮ್ಮ ಕ್ಲಿನಿಕ್‌ಗಳಲ್ಲಿ ಕಡಿಮೆ ಸಂಬಳ ಸಿಗುತ್ತದೆ ಎಂದು ಯಾರೂ ಇತ್ತ ಸುಳಿಯುತ್ತಿಲ್ಲ. ವೈದ್ಯರನ್ನು ಕರೆತಂದು ಕ್ಲಿನಿಕ್‌ ನಡೆಸುವುದು ಅಧಿಕಾರಿಗಳಿಗೆ ಸವಾಲಾಗಿದೆ. ಈಗ ವೈದ್ಯರಿಗೆ ₹40 ಸಾವಿರ ನೀಡಲಾಗುತ್ತಿದೆ. ಕನಿಷ್ಠ ₹60 ಸಾವಿರ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ, ಇದುವರೆಗೆ ಯಾವುದೇ ಕ್ರಮ ಆಗಿಲ್ಲ.

ADVERTISEMENT

ಗುತ್ತಿಗೆ ಆಧಾರದ ಮೇಲೆ ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ. ಪ್ರತಿ ತಿಂಗಳು ಸರಿಯಾಗಿ ಸಂಬಳ ಸಿಗದೆ ಇಲ್ಲಿಗೆ ನೇಮಕಗೊಂಡವರು ಕೆಲವೇ ದಿನಗಳಿಗೆ ಕೆಲಸ ಬಿಟ್ಟು ಹೋಗುತ್ತಿದ್ದಾರೆ. ಒಂದು ಉತ್ತಮ ಕಲ್ಪನೆಯೊಂದಿಗೆ ಆರಂಭವಾದ ಕೇಂದ್ರಗಳು ಜನರಿಗೆ ಆರೋಗ್ಯ ಸೇವೆ ನೀಡುವಲ್ಲಿ ಹಿಂದೆ ಬೀಳುತ್ತಿವೆ.

ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಯಾವುದೇ ಸಿದ್ಧತೆ ಮಾಡಿಕೊಳ್ಳದೆ ತರಾತುರಿಯಲ್ಲಿ ಕ್ಲಿನಿಕ್‌ಗಳಿಗೆ ಚಾಲನೆ ನೀಡಲಾಯಿತು. ಹಿಂದಿನ ಬಿಜೆಪಿ ಸರ್ಕಾರ ‘ನಮ್ಮ ಅವಧಿಯಲ್ಲಿಯೇ ಕ್ಲಿನಿಕ್‌ ತೆರೆಯಲಾಯಿತು’ ಎಂದು ಇದರ ‘ಕ್ರೆಡಿಟ್‌’ ಪಡೆಯುವ ಭರದಲ್ಲಿ ಬಾಡಿಗೆ ಕಟ್ಟಡದಲ್ಲಿ ಹೆಚ್ಚಿನ ಕ್ಲಿನಿಕ್‌ಗಳನ್ನು ಆರಂಭಿಸಿತು. ಇದುವರೆಗೆ ಕ್ಲಿನಿಕ್‌ಗಳಿಗೆ ಸ್ವಂತ ಕಟ್ಟಡ ಒದಗಿಸಲು ಆಗಿಲ್ಲ. ಈಗ ‘ನಮ್ಮ ಕ್ಲಿನಿಕ್‌’ಗಳ ಸ್ಥಿತಿ ಯಾರಿಗೂ ಬೇಡವಾಗಿದೆ.

ನಗರದ ಹೊರ ವಲಯದಲ್ಲಿರುವ ದಿಬ್ಬೂರಿನ ಕ್ಲಿನಿಕ್‌ನಲ್ಲಿ ಹಲವು ದಿನಗಳಿಂದ ವೈದ್ಯರಿಲ್ಲ. ಇಲ್ಲಿ ಕೇವಲ ನರ್ಸ್‌ ಮಾತ್ರ ಕೆಲಸ ಮಾಡುತ್ತಿದ್ದಾರೆ. ಜಯಪುರ ಪ್ರದೇಶದಲ್ಲಿರುವ ವೈದ್ಯರು ರಜೆಯ ಮೇಲೆ ತೆರಳಿದ್ದರಿಂದ ಇಲ್ಲಿನ ಜನರಿಗೂ ಅಗತ್ಯ ಆರೋಗ್ಯ ಸೇವೆ ಸಿಗುತ್ತಿಲ್ಲ. ದೇವರಾಯಪಟ್ಟಣದಲ್ಲಿ ಇರುವ ಕ್ಲಿನಿಕ್‌ಗೆ ಬರುವ ರೋಗಿಗಳಿಗೆ ಮಾತ್ರೆ ನೀಡಿ, ಉಪಚಾರ ಮಾಡುವ ಕೆಲಸ ನಡೆಯುತ್ತಿದೆ. ಇದೊಂದು ಬಿಟ್ಟರೆ ನಗರದ ಎಲ್ಲ ಕಡೆಗಳಲ್ಲಿ ಕ್ಲಿನಿಕ್‌ಗಳು ತೀರಾ ಅಧ್ವಾನದ ಸ್ಥಿತಿಯಲ್ಲಿ ನಡೆಯುತ್ತಿವೆ.

ಸಾರ್ವಜನಿಕರ ತೆರಿಗೆ ವೆಚ್ಚವನ್ನು ಹೇಗೆ ಪೋಲು ಮಾಡಬಹುದು ಎಂಬುವುದಕ್ಕೆ ನಮ್ಮ ಕ್ಲಿನಿಕ್‌ಗಳು ಸೂಕ್ತ ಉದಾಹರಣೆಯಾಗಿವೆ. ಕ್ಲಿನಿಕ್‌ಗಳು ಶುರುವಾದಾಗ ಔಷಧಿ ವಿತರಣೆಯೂ ಸೂಕ್ತ ರೀತಿಯಲ್ಲಿ ಆಗುತ್ತಿರಲಿಲ್ಲ. ಕ್ಲಿನಿಕ್‌ ಬಂದವರು ಬರಿಗೈಲಿ ವಾಪಸ್‌ ಆಗುತ್ತಿದ್ದರು. ಈಗ ಔಷಧಿ, ಅಗತ್ಯ ಸೌಲಭ್ಯ ಇದ್ದರೂ ವೈದ್ಯರಿಲ್ಲ. ಹಲವು ಕ್ಲಿನಿಕ್‌ಗಳು ‘ಯಜಮಾನ’ನಿಲ್ಲದ ಮನೆಯಂತಾಗಿವೆ.

ಜಿಲ್ಲಾ ಆಸ್ಪತ್ರೆ ಮೇಲೆ ಒತ್ತಡ ಕಡಿಮೆ ಮಾಡುವುದು. ರಕ್ತ ಪರೀಕ್ಷೆ, ಮಧುಮೇಹ ಸೇರಿದಂತೆ ಸಾಮಾನ್ಯ ಕಾಯಿಲೆಗಳಿಗೆ ಪರೀಕ್ಷೆ ನಡೆಸಿ, ಚಿಕಿತ್ಸೆ ನೀಡುವುದು. ಎಲ್ಲದಕ್ಕೂ ಜಿಲ್ಲಾ ಆಸ್ಪತ್ರೆ ಆಶ್ರಯಿಸುವುದನ್ನು ತಗ್ಗಿಸುವ ಸಲುವಾಗಿ ಬಡಾವಣೆಗಳಲ್ಲೇ ನಮ್ಮ ಕ್ಲಿನಿಕ್‌ಗಳನ್ನು ಆರಂಭಿಸಲಾಯಿತು. ಸರ್ಕಾರ ಹಲವು ಯೋಜನೆಗಳಂತೆ ಇದೂ ಅದೇ ದಾರಿ ಹಿಡಿದಿದೆ.

ಬಾಡಿಗೆಯಲ್ಲಿ 6 ಕ್ಲಿನಿಕ್‌

ಜಿಲ್ಲೆಯ ವಿವಿಧೆಡೆ 10 ಕ್ಲಿನಿಕ್‌ಗಳನ್ನು ತೆರೆಯಲಾಗಿದೆ. ಇದರಲ್ಲಿ 6 ಕ್ಲಿನಿಕ್‌ಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಇವುಗಳಿಗೆ ಆರೋಗ್ಯ ಇಲಾಖೆಯಿಂದ ಪ್ರತಿ ತಿಂಗಳು ₹1.44 ಲಕ್ಷ ಬಾಡಿಗೆ ಪಾವತಿಸಲಾಗುತ್ತಿದೆ. ನಗರದಲ್ಲಿರುವ 7 ಕ್ಲಿನಿಕ್‌ಗಳ ಪೈಕಿ 3 ಕ್ಲಿನಿಕ್‌ಗಳಿಗೆ ಸ್ವಂತ ಸೂರಿಲ್ಲ. ನಗರದ ಕ್ಲಿನಿಕ್‌ಗಳ ಬಾಡಿಗೆಗೆ ಪ್ರತಿ ತಿಂಗಳ ₹92 ಸಾವಿರ ಭರಿಸಲಾಗುತ್ತಿದೆ. ಸ್ವಂತ ಕಟ್ಟಡ ಇಲ್ಲದಿರುವುದರಿಂದ ಅಗತ್ಯ ಸೌಲಭ್ಯಗಳು ಸಿಗುತ್ತಿಲ್ಲ. ಹಲವು ಕಡೆಗಳಲ್ಲಿ ಸಮುದಾಯ ಭವನ ಅಂಗನವಾಡಿ ಕೇಂದ್ರಗಳು ಕ್ಲಿನಿಕ್‌ಗಳಿಗೆ ಆಶ್ರಯ ನೀಡಿವೆ. ದೇವರಾಯಪಟ್ಟಣದ ಸಮುದಾಯ ಭವನ ಜಯಪುರದ ಅಂಗನವಾಡಿ ಕೇಂದ್ರಗಳಲ್ಲಿ ಕ್ಲಿನಿಕ್‌ಗಳು ನಡೆಯುತ್ತಿವೆ.

ಮತ್ತೆ 4 ಹೊಸ ಕ್ಲಿನಿಕ್‌

ಜಿಲ್ಲೆಯಲ್ಲಿ ಈಗಿರುವ 10 ಕ್ಲಿನಿಕ್‌ಗಳು ಕುಂಟುತ್ತಾ ಸಾಗುತ್ತಿದ್ದು ಇದರ ಮಧ್ಯೆ ಮತ್ತೆ ಹೊಸದಾಗಿ ನಾಲ್ಕು ಕ್ಲಿನಿಕ್‌ ತೆರೆಯಲು ಸರ್ಕಾರ ಅನುಮತಿ ನೀಡಿದೆ. ಶಿರಾ ತಿಪಟೂರು ಗುಬ್ಬಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರಿನಲ್ಲಿ ನಮ್ಮ ಕ್ಲಿನಿಕ್ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ತಿಪಟೂರಿನಲ್ಲಿ ಇನ್ನೂ ಸ್ಥಳ ನಿಗದಿ ಮಾಡಿಲ್ಲ. ಉಳಿದ 3 ಕಡೆಗಳಲ್ಲಿ ವೈದ್ಯರನ್ನು ನೇಮಿಸಿಕೊಂಡು ಕೆಲಸ ಆರಂಭಿಸಲು ತಯಾರಿ ನಡೆದಿದೆ. ಸದ್ಯ ಇರುವ ಕ್ಲಿನಿಕ್‌ಗಳಿಗೆ ಅಗತ್ಯ ಸಿಬ್ಬಂದಿ ನಿಯೋಜಿಸಿ ಜನರಿಗೆ ಸೇವೆ ನೀಡಲು ಆಗುತ್ತಿಲ್ಲ. ಈ ಯೋಜನೆ ಸಂಪೂರ್ಣವಾಗಿ ಹಳ್ಳ ಹಿಡಿಯುತ್ತ ಸಾಗುತ್ತಿದೆ. ಇಂತಹ ಸಮಯದಲ್ಲಿ ಹೊಸ ಕ್ಲಿನಿಕ್‌ಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುವುದನ್ನು ಕಾದು ನೋಡಬೇಕಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಸಮಸ್ಯೆ ಇರುವ ಕಡೆಗಳಲ್ಲಿ ಹೊಸದಾಗಿ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ವೈದ್ಯರ ಸಂಬಳ ಹೆಚ್ಚಿಸುವಂತೆ ಸರ್ಕಾರಕ್ಕೂ ಮನವಿ ಸಲ್ಲಿಸಲಾಗಿದೆ.
ಡಾ.ಡಿ.ಎನ್‌.ಮಂಜುನಾಥ್‌, ಡಿಎಚ್‌ಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.