ADVERTISEMENT

ಮಾಜಿ ಶಾಸಕರಿಂದಾಗಿ ಮೂರು ಸಾವಿರ ಮನೆ ಕೈತಪ್ಪಿದೆ: ಶಾಸಕ ಎಂ.ಟಿ.ಕೃಷ್ಣಪ್ಪ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2023, 12:48 IST
Last Updated 12 ಆಗಸ್ಟ್ 2023, 12:48 IST
ಶಾಸಕ ಎಂ.ಟಿ.ಕೃಷ್ಣಪ್ಪ
ಶಾಸಕ ಎಂ.ಟಿ.ಕೃಷ್ಣಪ್ಪ   

ತುರುವೇಕೆರೆ: ‘ತಾಲ್ಲೂಕಿಗೆ ಮಂಜೂರಾಗಿದ್ದ ಮೂರು ಸಾವಿರ ಆಶ್ರಯ ಮನೆಗಳು ಕುಣಿಗಲ್ ತಾಲ್ಲೂಕಿಗೆ ವರ್ಗಾವಣೆಯಾಗಿದ್ದು, ಇದರಲ್ಲಿ ಮಾಜಿ ಶಾಸಕ ಮಸಾಲ ಜಯರಾಂ ಕೈವಾಡ ಇದೆ’ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪಿಸಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ತಾಲ್ಲೂಕಿಗೆ ಮುಂಜೂರಾಗಿದ್ದ ಮೂರು ಸಾವಿರ ಮನೆಗಳು ಕುಣಿಗಲ್ ಕ್ಷೇತ್ರಕ್ಕೆ ವರ್ಗಾವಣೆ ಮಾಡಿಸಿಕೊಂಡಿರುವುದು ಖಂಡನೀಯ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಕುಣಿಗಲ್ ಶಾಸಕ ರಂಗನಾಥ್‍ ಸರ್ಕಾರದಿಂದ ಅವರ ಕ್ಷೇತ್ರಕ್ಕೆ 30 ಸಾವಿರ ಮನೆ ತರುವ ಶಕ್ತಿ ಇಲ್ಲವಾ? ಅದನ್ನು ಬಿಟ್ಟು ನಮ್ಮ ತಾಲ್ಲೂಕಿನ ಮನೆಗಳನ್ನು ವರ್ಗಾವಣೆ ಮಾಡಿಸಿಕೊಳ್ಳುವುದು ಸರಿಯಲ್ಲ. ಈ ಬಗ್ಗೆ ಮುಖ್ಯಮಂತ್ರಿ, ವಸತಿ ಸಚಿವರಿಗೆ ಪತ್ರ ಬರೆದು ರದ್ದು ಮಾಡುವಂತೆ ಒತ್ತಾಯಿಸುತ್ತೇನೆ. ವರ್ಗಾವಣೆ ರದ್ದಾಗದಿದ್ದರೆ ಹೈಕೋರ್ಟ್‍ಗೆ ರಿಟ್ ಹಾಕಿ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.

ತಾಲ್ಲೂಕಿನಲ್ಲಿ ನಡೆಯುತ್ತಿರುವ ಜಲಜೀವನ್ ಮಿಷನ್ ಕಾಮಗಾರಿ ಮಾಜಿ ಶಾಸಕರ ಅವಧಿಯಲ್ಲಿ ಆರಂಭವಾಗಿದ್ದು, ಬಿಜೆಪಿ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಇನ್ನು ಎಲ್ಲಿಯೂ ಮುಗಿದಿಲ್ಲ. ಆದರೂ ಜೆಜೆಎಂ ಕಾಮಗಾರಿ ಕಳಪೆಯಾಗಿದೆ. ತನಿಖೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಶಾಸಕರು ಸಂಸದರ ಮೂಲಕ ಪತ್ರ ಬರೆಸಿದ್ದಾರೆ ಎಂದು ದೂರಿದರು.

ADVERTISEMENT

‘ನಾನು ಖುದ್ದಾಗಿ ಹಳ್ಳಿಗಳಿಗೆ ತೆರಳಿ ಕಾಮಗಾರಿ ಪರಿಶೀಲಿಸಿದ್ದೇನೆ. ಎಲ್ಲಿಯೂ ಕಳಪೆಯಾಗಿಲ್ಲ. ಕೆಲವು ಕಡೆಯಲ್ಲಿ ಕಾಮಗಾರಿ ಪೂರ್ಣವಾಗಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ವಿದಾನ ಪರಿಷತ್ ಮಾಜಿ ಸದಸ್ಯ ಬೆಮೆಲ್ ಕಾಂತರಾಜು ತಾಲ್ಲೂಕು ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ಮುಳುಗಿದ್ದಾರೆ. ಇವರಿಗೆ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು. ನಾನು ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ಆರೋಪ ಮಾಡುವ ಬೆಮೆಲ್ ಕಾಂತರಾಜು ಆರು ವರ್ಷ ವಿಧಾನ ಪರಿಷತ್ ಸದಸ್ಯರಾಗಿದ್ದಾಗ ತಾಲ್ಲೂಕಿಗೆ ಎಷ್ಟು ಕೆಲಸ ಮಾಡಿದ್ದಾರೆ ಎಂದು ಜನರಿಗೆ ಉತ್ತರಿಸಲಿ’ ಎಂದರು.

‘ಕಾಂಗ್ರೆಸ್ ಸರ್ಕಾರ ಕೇವಲ ಗ್ಯಾರಂಟಿಗಳಲ್ಲಿ ಮುಳುಗಿದ್ದು, ಬಿಜೆಪಿ ಸರ್ಕಾರವನ್ನು ಶೇ 40ರ ಸರ್ಕಾರ ಎನ್ನುತಿದ್ದ ಕಾಂಗ್ರೆಸ್‍ನವರು ಅದನ್ನು ಮೀರಿಸಿ ವರ್ಗಾವಣೆ ದಂಧೆಯಲ್ಲಿ ಮುಳುಗಿದ್ದಾರೆ. ಮೂರು ತಿಂಗಳಾದರೂ ಶಾಸಕರಿಗೆ ಅಭಿವೃದ್ಧಿ ಕಾರ್ಯಗಳಿಗೆ ಹಣ ನೀಡುತ್ತಿಲ್ಲ. ಅತ್ಯಂತ ಭಷ್ಟ ಸರ್ಕಾರ’ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ಮುಖಂಡರಾದ ವೆಂಕಾಟಪುರ ಯೋಗೀಶ್, ಜಕ್ಕನಹಳ್ಳಿ ಲೋಕೇಶ್‍ ಬಾಬು, ರಂಗಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.