ADVERTISEMENT

ಮೂವರು ಪಿಎಸ್‌ಐ, ಎಎಸ್‌ಐ ಅಮಾನತು

ಕರ್ತವ್ಯ ಲೋಪ ಆರೋಪ; ಎಫ್‌ಐಆರ್ ದಾಖಲಿಸದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2023, 14:30 IST
Last Updated 20 ಡಿಸೆಂಬರ್ 2023, 14:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ತುಮಕೂರು: ಕರ್ತವ್ಯಲೋಪ ಆರೋಪದ ಮೇಲೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಮೂವರು ಸಬ್‌ಇನ್ಸ್‌ಪೆಕ್ಟರ್, ತಲಾ ಒಬ್ಬರು ಸಹಾಯಕ ಸಬ್‌ಇನ್ಸ್‌ಪೆಕ್ಟರ್, ಕಾನ್‌ಸ್ಟೇಬಲ್ ಅಮಾನತು ಮಾಡುವ ಮೂಲಕ ಪೊಲೀಸ್ ವ್ಯವಸ್ಥೆಗೆ ಸ್ವಲ್ಪ ಮಟ್ಟಿಗೆ ಚುರುಕು ಮುಟ್ಟಿಸಲಾಗಿದೆ.

ತುರುವೇಕೆರೆ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್‌ಗಳಾದ ಗಣೇಶ್, ರಾಮಚಂದ್ರಯ್ಯ, ಹೆಡ್‌ ಕಾನ್‌ಸ್ಟೇಬಲ್ ರಘುನಂದನ್, ಮಧುಗಿರಿ ತಾಲ್ಲೂಕು ಬಡವನಹಳ್ಳಿ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ನಾಗರಾಜು, ಎಎಸ್ಐ ಸುರೇಶ್ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಆದೇಶಿಸಿದ್ದಾರೆ.

ADVERTISEMENT

ತುರುವೇಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ಕಾಣೆಯಾಗಿದ್ದು, ದೂರು ನೀಡಿದ್ದರೂ ಪ್ರಕರಣ ದಾಖಲಿಸಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್, ಹೆಡ್‌ ಕಾನ್‌ಸ್ಟೇಬಲ್ ಅಮಾನತು ಮಾಡಲಾಗಿದೆ.

ಮಧುಗಿರಿ ತಾಲ್ಲೂಕು ಬಡವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಯವರ ಮೇಲೆ ಸವರ್ಣೀಯರು ಹಲ್ಲೆ‌ ಮಾಡಿದ್ದು, ಈ ಸಂಬಂಧ ಸಂತ್ರಸ್ತರು ದೂರು ನೀಡಿದ್ದರು. ಎಫ್‌ಐಆರ್ ದಾಖಲಿಸದೆ ನಿರ್ಲಕ್ಷ್ಯ ತೋರಿದ್ದರು. ಹಾಗಾಗಿ ಸಬ್‌ಇನ್ಸ್‌ಪೆಕ್ಟರ್, ಎಎಸ್ಐ ಅಮಾನತುಗೊಂಡಿದ್ದಾರೆ.

ಎಸ್ಪಿ ಕೆ.ವಿ.ಅಶೋಕ್ ಅವರು ಇತ್ತೀಚೆಗೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಗೆ ಭೇಟಿನೀಡಿ ಸಾರ್ವಜನಿಕರ ಕುಂದುಕೊರತೆ ಆಲಿಸಿದ್ದರು. ಈ ಸಮಯದಲ್ಲಿ ಪೊಲೀಸರು ಸ್ಪಂದಿಸದಿರುವ ಬಗ್ಗೆ ಸಾರ್ವಜನಿಕರು ದೂರು ಸಲ್ಲಿಸಿದ್ದರು. ಈ ದೂರಿನ ಆಧಾರದ ಮೇಲೆ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.