ADVERTISEMENT

ವಾಕ್‌ & ಶ್ರವಣ ದೋಷವುಳ್ಳ ಮಕ್ಕಳ ವಸತಿ ಶಾಲೆ: ನೂರು ಮಕ್ಕಳಿಗೆ ಮೂವರು ಶಿಕ್ಷಕರು!

ದಶಕದಿಂದ ನಡೆಯದ ನೇಮಕಾತಿ; ವಾಕ್‌ ಮತ್ತು ಶ್ರವಣ ದೋಷವುಳ್ಳ ಮಕ್ಕಳ ಶಾಲೆ ಅನಾಥ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2024, 15:49 IST
Last Updated 24 ನವೆಂಬರ್ 2024, 15:49 IST
ತುಮಕೂರು ತಾಲ್ಲೂಕಿನ ಬೆಳಗುಂಬ ಹೊರವಲಯದಲ್ಲಿರುವ ವಾಕ್‌ ಮತ್ತು ಶ್ರವಣ ದೋಷವುಳ್ಳ ಮಕ್ಕಳ ವಸತಿ ಶಾಲೆ
ತುಮಕೂರು ತಾಲ್ಲೂಕಿನ ಬೆಳಗುಂಬ ಹೊರವಲಯದಲ್ಲಿರುವ ವಾಕ್‌ ಮತ್ತು ಶ್ರವಣ ದೋಷವುಳ್ಳ ಮಕ್ಕಳ ವಸತಿ ಶಾಲೆ   

ತುಮಕೂರು: ನಗರದ ಹೊರವಲಯದ ಬೆಳಗುಂಬದಲ್ಲಿರುವ ವಾಕ್‌ ಮತ್ತು ಶ್ರವಣ ದೋಷವುಳ್ಳ ಮಕ್ಕಳ ವಸತಿ ಶಾಲೆಯು ಶಿಕ್ಷಕರ ಕೊರತೆಯಿಂದ ಬೀಗ ಹಾಕುವ ಹಂತ ತಲುಪಿದೆ.

19 ಜನ ಕಾಯಂ ಶಿಕ್ಷಕರು ಇರಬೇಕಾದ ಶಾಲೆಯಲ್ಲಿ ಕೇವಲ 3 ಮಂದಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಇಬ್ಬರು ಮುಂದಿನ ವರ್ಷದ ಜೂನ್‌ ತಿಂಗಳಲ್ಲಿ ನಿವೃತ್ತಿಯಾಗುತ್ತಿದ್ದಾರೆ. ನಂತರ ಏಕ ಶಿಕ್ಷಕ ಶಾಲೆಯಾಗಿ ಬದಲಾಗಲಿದೆ. 1ರಿಂದ 10ನೇ ತರಗತಿ ವರೆಗೆ ಒಟ್ಟು 104 ಮಕ್ಕಳು ಕಲಿಯುತ್ತಿದ್ದಾರೆ. 56 ಗಂಡು, 48 ಹೆಣ್ಣು ಮಕ್ಕಳಿದ್ದಾರೆ. ವಸತಿ ಶಾಲೆ ಕಳೆದ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 85ರಷ್ಟು ಸಾಧನೆ ಮಾಡಿದೆ.

ದಾವಣಗೆರೆ, ಕೋಲಾರ, ಗೌರಿಬಿದನೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಇತರ ಜಿಲ್ಲೆಗಳ ಮಕ್ಕಳು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರಿಗೆ ಉಳಿದುಕೊಳ್ಳಲು ಬೇಕಾದ ಹಾಸ್ಟೆಲ್‌, ಊಟದ ಸಭಾಂಗಣ, ಆಟೋಟಕ್ಕೆ ಮೈದಾನ ಸೇರಿದಂತೆ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಬೋಧಿಸಬೇಕಾದ ಶಿಕ್ಷಕರು ಮಾತ್ರ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿಲ್ಲ. ಅಗತ್ಯ ಶಿಕ್ಷಕರನ್ನು ನೇಮಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.

ADVERTISEMENT

ವಾಕ್‌ ಮತ್ತು ಶ್ರವಣ ದೋಷವುಳ್ಳ ಮಕ್ಕಳಿಗೆ ಅಗತ್ಯ ಶಿಕ್ಷಣ ನೀಡಿ, ಅವರು ಸ್ವಾವಲಂಬಿ ಜೀವನ ನಡೆಸಲು ನೆರವಾಗುವ ಉದ್ದೇಶದಿಂದ 1983ರಲ್ಲಿ ರೆಡ್‌ಕ್ರಾಸ್‌ ಸಂಸ್ಥೆಯ ಆಶ್ರಯದಲ್ಲಿ ಶಾಲೆ ಆರಂಭಿಸಲಾಗಿದೆ. ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯದ ಕಾರಣ ಮಕ್ಕಳ ದಾಖಲಾತಿಯೂ ಕುಸಿತ ಕಂಡಿದೆ.

ಸಂಬಳ ಬಾಕಿ: ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಮೂವರು ಶಿಕ್ಷಕರಿಗೂ ಸಕಾಲಕ್ಕೆ ಸಂಬಳ ಸಿಗುತ್ತಿಲ್ಲ. ಕಳೆದ 4 ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಜೂನ್‌ನಲ್ಲಿ ಬಂದಿದ್ದೇ ಕೊನೆ. ಅಲ್ಲಿಂದ ಇದುವರೆಗೆ ಇವರ ಖಾತೆಗೆ ವೇತನದ ಹಣ ಜಮಾ ಆಗಿಲ್ಲ. ಶಾಲೆಯ ಮುಖ್ಯ ಶಿಕ್ಷಕರು ವರ್ಷಕ್ಕೆ ₹1.64 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಇದರಲ್ಲಿ ಶಾಲೆಗೆ ಕೇವಲ ₹74 ಲಕ್ಷ ಮಾತ್ರ ಬಿಡುಗಡೆಯಾಗಿದೆ. ಇದರಿಂದ ಶಾಲೆ ನಡೆಸುವುದು ಕಷ್ಟವಾಗುತ್ತಿದೆ.

2007–08ರಲ್ಲಿ ಶಾಲೆಯಲ್ಲಿ 19 ಜನ ಶಿಕ್ಷಕರು ಕೆಲಸ ಮಾಡುತ್ತಿದ್ದರು. ಅಲ್ಲಿಂದ ಇದುವರೆಗೆ 16 ಮಂದಿ ನಿವೃತ್ತಿಯಾಗಿದ್ದಾರೆ. ಅವರ ಜಾಗಕ್ಕೆ ಮತ್ತೊಬ್ಬರನ್ನು ನೇಮಕ ಮಾಡಿಕೊಂಡಿಲ್ಲ. ಇದರಿಂದಾಗಿ ಶಿಕ್ಷಕರ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಒಬ್ಬರು ಗ್ರೂಪ್‌ ಡಿ ನೌಕರರು ಕೆಲಸ ಮಾಡುತ್ತಿದ್ದೂ, ಅವರ ಮೇಲೂ ಒತ್ತಡ ಹೆಚ್ಚಾಗಿದೆ. ಎಲ್ಲ ಮಕ್ಕಳನ್ನು ಸುಧಾರಿಸಲು ಸಾಧ್ಯವಾಗುತ್ತಿಲ್ಲ.

5 ಜನ ಅತಿಥಿ ಶಿಕ್ಷಕರು ಕೆಲಸ ಮಾಡುತ್ತಿದ್ದು, ಮಕ್ಕಳ ಕಲಿಕೆ ಪರಿಣಾಮಕಾರಿಯಾಗಿ ಆಗುತ್ತಿಲ್ಲ. ಒಳ್ಳೆಯ ಶಾಲೆ, ಉತ್ತಮ ಪರಿಸರ, ಹಾಸ್ಟೆಲ್‌ ವ್ಯವಸ್ಥೆ ಇದೆ ಎಂದು ತಮ್ಮ ಮಕ್ಕಳನ್ನು ಸೇರಿಸಿದ ಪೋಷಕರು ಬೋಧಿಸಲು ಶಿಕ್ಷಕರೇ ಇಲ್ಲದೆ ಪರಿತಪಿಸುತ್ತಿದ್ದಾರೆ.

‘ನಗರದಿಂದ ಹೊರಗಿದೆ ಎಂದು ಅಭಿವೃದ್ಧಿ, ಶಿಕ್ಷಕರ ನೇಮಕದಲ್ಲೂ ಶಾಲೆಯನ್ನು ಹೊರಗಿಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಬೇಕು. ತುರ್ತು ಕ್ರಮಕೈಗೊಂಡು ಶಾಲೆಯನ್ನು ಸಹಜ ಸ್ಥಿತಿಗೆ ತರಬೇಕು’ ಎಂದು ನಗರದ ರಾಜಶೇಖರ್‌ ಒತ್ತಾಯಿಸಿದರು.

ಶಿಕ್ಷಕರ ನೇಮಕಾತಿ ಸಂಬಂಧ ಅಗತ್ಯ ಕ್ರಮ ಕೈಗೊಂಡಿದ್ದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ
–ಲಕ್ಷ್ಮಿಕಾಂತ್‌ ಮುಖ್ಯ ಶಿಕ್ಷಕ ವಾಕ್‌ ಮತ್ತು ಶ್ರವಣ ದೋಷವುಳ್ಳ ಮಕ್ಕಳ ವಸತಿ ಶಾಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.