ADVERTISEMENT

ಪಾವಗಡ: ಶಸ್ತ್ರ ಚಿಕಿತ್ಸೆ ಬಳಿಕ ಮೂವರು ಮಹಿಳೆಯರ ಸಾವು

ಸರ್ಕಾರಿ ಆಸ್ಪತ್ರೆಯಲ್ಲಿ ದುರ್ಘಟನೆ * ಇಬ್ಬರ ಸ್ಥಿತಿ ಗಂಭೀರ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2024, 22:30 IST
Last Updated 26 ಫೆಬ್ರುವರಿ 2024, 22:30 IST
ಪಾವಗಡ ಸಾರ್ವಜನಿಕ ಆಸ್ಪತ್ರೆ
ಪಾವಗಡ ಸಾರ್ವಜನಿಕ ಆಸ್ಪತ್ರೆ   

ಪಾವಗಡ: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಫೆ. 22ರಂದು ಸಿಸೇರಿಯನ್‌ ಹೆರಿಗೆ ಹಾಗೂ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಏಳು ಮಹಿಳೆಯರಲ್ಲಿ ಮೂವರು ಮೃತಪಟ್ಟಿದ್ದಾರೆ. ತೀವ್ರ ಅಸ್ವಸ್ಥರಾಗಿರುವ ಮತ್ತಿಬ್ಬರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಾವಗಡ ತಾಲ್ಲೂಕಿನ ರಾಜವಂತಿ ಗ್ರಾಮದ ಅಂಜಲಿ (20), ವೀರ್ಲಗೊಂದಿಯ ಅನಿತಾ (30) ಹಾಗೂ ಬ್ಯಾಡನೂರಿನ ನರಸಮ್ಮ (40) ಮೃತ ಮಹಿಳೆಯರು. ಅಂಜಲಿ ಮತ್ತು ಅನಿತಾ ಅವರಿಗೆ ಸಿಸೇರಿಯನ್‌ ಹೆರಿಗೆಯಾಗಿತ್ತು. ನರಸಮ್ಮ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಶಸ್ತ್ರಚಿಕಿತ್ಸೆಗೆ ಒಳಗಾದ ಏಳು ಜನರಲ್ಲಿ ಚೇತರಿಸಿಕೊಂಡ ಇಬ್ಬರನ್ನು ಮನೆಗೆ ಕಳಿಸಲಾಗಿತ್ತು. ಉಳಿದ ಐವರಿಗೆ ಹೊಟ್ಟೆ, ಎದೆ ಭಾಗದಲ್ಲಿ ನೋವು ಕಾಣಿಸಿಕೊಂಡಿತ್ತು. ಆರೋಗ್ಯದಲ್ಲಿ ಏರುಪೇರಾದ ನಂತರ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದ್ದರು. 

ADVERTISEMENT

ಅದೇ ದಿನ ಐವರನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅನಿತಾ ಫೆ.22ರಂದು ಸಾವನ್ನಪ್ಪಿದರೆ, ಎರಡು ದಿನದ ಬಳಿಕ (ಫೆ.24ರಂದು) ಅಂಜಲಿ ಮತ್ತು ನರಸಮ್ಮ ಮೃತಪಟ್ಟಿದ್ದಾರೆ.

ನರಸಮ್ಮ ತಮ್ಮ ಊರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಬೆಂಗಳೂರಿನಲ್ಲಿ ಮನೆಗೆಲಸ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದ ಅನಿತಾ ಶಸ್ತ್ರಚಿಕಿತ್ಸೆಗಾಗಿ ತಮ್ಮೂರಿಗೆ ಬಂದಿದ್ದರು. ಅವರಿಗೆ ಮೂವರು ಮಕ್ಕಳಿದ್ದಾರೆ. ಅಂಜಲಿಯ ಮೂರು ವರ್ಷದ ಹೆಣ್ಣು ಮಗು ಮತ್ತು ನವಜಾತಶಿಶು ತಬ್ಬಲಿಗಳಾಗಿವೆ.  

‘ಅಂಜಲಿ ಭಾರಿ ನೋವು ಅನುಭವಿಸುತ್ತಿದ್ದರು. ಮಕ್ಕಳಿಗಾದರೂ ನಾನು ಉಳಿಯಬೇಕು. ಹೇಗಾದರೂ ಮಾಡಿ ನನ್ನನ್ನು ಉಳಿಸಿಕೊಳ್ಳಿ ಎಂದು ಆಕೆ ಅಂಗಲಾಚುತ್ತಿದ್ದ ದೃಶ್ಯ ಈಗಲೂ ಮನಕಲಕುತ್ತಿದೆ. ಆ ನೋವಿನಲ್ಲೂ ಮಗುವನ್ನು ತೋರಿಸುವಂತೆ ಕೇಳುತ್ತಿದ್ದಳು. ಮಕ್ಕಳ ಸ್ಥಿತಿ ನೆನಪಿಸಿಕೊಂಡರೆ ನಿದ್ದೆ ಬರುತ್ತಿಲ್ಲ’ ಎಂದು ಅಂಜಲಿ ಅಕ್ಕ ರಾಧಮ್ಮ ಕಣ್ಣೀರು ಹಾಕಿದರು.

ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ ಮಹಿಳೆಯರ ಕುಟುಂಬಸ್ಥರು ಆಸ್ಪತ್ರೆಯ ಮುಂಭಾಗ ಸೋಮವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಪೊಲೀಸರು ಪ್ರತಿಭಟನ ನಿರತರ ಮನವೊಲಿಸಿದರು.

‘ಮೃತರ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಡಿ.ಎನ್‌.ಮಂಜುನಾಥ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.