ತುಮಕೂರು: ಸಾಹಿತ್ಯದ ಕೃಷಿಯೊಂದಿಗೆ ರಾಜಕೀಯ ಸಖ್ಯವನ್ನು ಸಹ ಕೆ.ಬಿ.ಸಿದ್ದಯ್ಯ ಬೆಳೆಸಿಕೊಂಡಿದ್ದರು.
ವಿಧಾನಸಭೆ ವಿರೋಧ ಪಕ್ಷದ ಮುಖಂಡ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿದ್ದರು. ಒಳಮೀಸಲಾತಿಯ ವಿಚಾರದಲ್ಲಿ ಜಿ.ಪರಮೇಶ್ವರ್ ನಿಲುವನ್ನು ಕಟುವಾಗಿ ಟೀಕಿಸಿದ್ದರು.
ಕಾಂಗ್ರೆಸ್ ಮುಖಂಡ ಜಿ.ಪರಮೇಶ್ವರ್ ಅವರ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದರೂ, ಪರಮೇಶ್ವರ್ ಒಳಮೀಸಲಾತಿ ಪರ ಇಲ್ಲ ಎಂಬ ಕಾರಣಕ್ಕೆ ‘ಕಾಂಗ್ರೆಸ್ ಗೆಲ್ಲಿಸಿ, ಪರಮೇಶ್ವರ್ ಸೋಲಿಸಿ’ ಎಂಬ ಅಭಿಯಾನವನ್ನು ಕೆ.ಬಿ.ಸಿದ್ದಯ್ಯ ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಕೊರಟಗೆರೆಯಲ್ಲಿ ಆರಂಭಿಸಿದ್ದರು. ಇದರಿಂದ ವಿವಾದ ಬುಗಿಲೆದ್ದು ಪರ–ವಿರೋಧದ ಚರ್ಚೆ ಚುನಾವಣಾ ಕಾಲದಲ್ಲಿ ತೀವ್ರಗೊಂಡಿತ್ತು.
ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಸಿದ್ದಯ್ಯ ಮನೆಗೆ ಕರೆಸಿಕೊಂಡು ಟೀಕೆಗೂ ಗುರಿಯಾಗಿದ್ದರು. ಕಾರ್ಯಕ್ರಮವೊಂದರಲ್ಲಿ ಸಾಹಿತಿ ದೇವನೂರ ಮಹಾದೇವ ಅವರನ್ನು ಟೀಕೆ ಮಾಡಿ, ಬೌದ್ಧಿಕ ವಲಯದಲ್ಲಿ ಸಂಘರ್ಷಕ್ಕೆ ಕಿಡಿಹೊತ್ತಿಸಿದ್ದರು.
ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದ ಇವರು ಪಟ್ಟಿ ಬಿಡುಗಡೆಯಾಗುವ ಮೊದಲೇ ಸಮಿತಿಯಿಂದ ಹೊರಬಂದಿದ್ದರು. ಬಳಿಕ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿತ್ತು. ಇದು ಕೂಡ ಚರ್ಚೆಗೆ ಎಡೆಕೊಟ್ಟಿತ್ತು.
ಸಾಹಿತಿ ಯು.ಆರ್.ಅನಂತಮೂರ್ತಿ ಅವರ ಶಿಷ್ಯರಾಗಿದ್ದರು.
ಬುದ್ಧ ಮತ್ತು ಅಲ್ಲಮನ ಕುರಿತು ಗಂಭೀರವಾಗಿ ಓದಿಕೊಂಡಿದ್ದರು. ಅಲ್ಲಮನ ವಚನಗಳನ್ನು ಕೇಳುಗರಿಗೆ ಮನಮುಟ್ಟುವಂತೆ ವಿವರಿಸುತ್ತಿದ್ದರು. ಒಳಮೀಸಲಾತಿಯ ಪರವಾದ ಹೋರಾಟದಲ್ಲೂ ಗುರುತಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.