ತೋವಿನಕೆರೆ: ಮಧುಗಿರಿ ತಾಲ್ಲೂಕು ಕವಣದಾಲ ಗ್ರಾಮ ಪಂಚಾಯಿತಿ ಓಬಳಹಳ್ಳಿಯಲ್ಲಿರುವ 35 ಕುಟುಂಬಗಳು ಹಲವು ದಶಕಗಳಿಂದ ಹುಣಸೆ ಸಸಿಗಳನ್ನು ಬೆಳೆಸುತ್ತಿವೆ. ಈ ಕುಟುಂಬಗಳು ಈ ಬಾರಿ ಎರಡು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ರಾಜ್ಯ ಮತ್ತು ಆಂಧ್ರಪ್ರದೇಶದ ಗಡಿ ಭಾಗದ ರೈತರಿಗೆ ಮಾರಾಟ ಮಾಡಿವೆ.
ಕಳೆದ ವರ್ಷ ಆಂಧ್ರಪ್ರದೇಶದ ಆರ್‌ಜಿಟಿ ಸಂಸ್ಥೆಯವರು ಒಂದು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ಖರೀದಿಸಿದ್ದರು. ಒಂದು ಸಸಿಯನ್ನು ₹ 85ರಿಂದ 140ರ ವರೆಗೂ ಮಾರಾಟ ಮಾಡುತ್ತಿದ್ದಾರೆ.
ಓಬಳಹಳ್ಳಿಯ ಸಮೀಪದ ಹೊಸಹಳ್ಳಿ, ತಿಮಲಾಪುರ, ಗಿರಿಯಾಗಲಹಳ್ಳಿ ಗ್ರಾಮಗಳ ಬೆಳೆಗಾರರು ಸೇರಿ ನಾಲ್ಕು ಲಕ್ಷ ಹುಣಸೆ ಸಸಿಗಳನ್ನು ಬೆಳೆಸಿದ್ದಾರೆ. ರಾಜ್ಯ ಹಾಗೂ ಹೊರ ರಾಜ್ಯಗಳಿಗೆ ಸಸಿಗಳನ್ನು ಮಾರಾಟ ಮಾಡಿದ್ದಾರೆ. ಉಳಿದಿರುವ ಸಸಿಗಳು ತಿಂಗಳಲ್ಲಿ ಮಾರಾಟವಾಗುತ್ತವೆ. ಆಂಧ್ರದ ಸಂಸ್ಥೆಯವರು ಬಂದರೆ ಸಸಿ ಕೊರತೆ ಆಗುತ್ತದೆ ಎನ್ನುತ್ತಾರೆ ಬೆಳೆಗಾರರು.
ರಾಜ್ಯದ ಐದು ಜಿಲ್ಲೆಗಳ ಜನರು ಇಲ್ಲಿಂದ ಸಸಿಗಳನ್ನು ಖರೀದಿಸುತ್ತಾರೆ. ಕೆಲ ನರ್ಸರಿಯವರು ರೈತರ ಹೆಸರಿನಲ್ಲಿ ಖರೀದಿಮಾಡಿ ಕೊಂಡೊಯ್ದು ಬೇರೆಡೆಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಹುಣಸೆ ಬೀಜವನ್ನು ಪ್ಲಾಸ್ಟಿಕ್ ಬ್ಯಾಗ್‌ಗಳಲ್ಲಿ ಮಣ್ಣು, ಕೊಟ್ಟಿಗೆ ಗೊಬ್ಬರ ತುಂಬಿ ನಾಟಿ ಮಾಡುತ್ತಾರೆ. ಬೀಜಗಳು ಮೊಳಕೆ ಬಂದ ಮೂರು ತಿಂಗಳವರೆಗೆ ಕೀಟನಾಶಕಗಳನ್ನು ಸಿಂಪಡಿಸುತ್ತಾರೆ. 3 ತಿಂಗಳ ನಂತರ ರಾಸಾಯನಿಕ ಗೊಬ್ಬರ, ಹೊಂಗೆ ಮತ್ತು ಬೇವಿನ ಹಿಂಡಿಗಳನ್ನು ದ್ರವ ರೂಪದಲ್ಲಿ ಮತ್ತೆ ಕೆಲವರು
ಪುಡಿ ರೂಪದಲ್ಲಿ ಹಾಕುತ್ತಾರೆ. ಹತ್ತು ತಿಂಗಳಲ್ಲಿ ಸಸಿ ಆರುಅಡಿಗೂ ಹೆಚ್ಚು ಎತ್ತರ ಬೆಳೆಯುತ್ತವೆ ಎನ್ನುತ್ತಾರೆ ರೈತರು.
ಆಂಧ್ರದ ಸಂಸ್ಥೆಯೊಂದು ಮೂರು ವರ್ಷದಿಂದ ಸಸಿ ಖರೀದಿಸುತ್ತಿದೆ. 2019ರಲ್ಲಿ ಒಂದು ಲಕ್ಷ ಸಸಿಗಳನ್ನು ಖರೀದಿಸಿತ್ತು. ಈ ವರ್ಷ 2 ಲಕ್ಷ ಖರೀದಿಸುವ ಭರವಸೆ ನೀಡಿದ್ದರು. ಆದರೆ ಕೊರೊನಾದಿಂದಾಗಿ ಬರಲು ಸಾಧ್ಯವಾಗಿಲ್ಲ ಎಂದು ಮಾಹಿತಿ ನೀಡಿದರು.
***
ಬೀಜಕ್ಕೆ ಬೇಕಾದ ಕಾಯಿಗಳನ್ನು ಮೊದಲೇ ಮರಗಳಲ್ಲೇ ಗುರುತಿಸಿರುತ್ತೇವೆ. ಪ್ರತಿ ವರ್ಷವೂ ಒಂದೇ ರೀತಿ ಇಳುವರಿ ಕೊಡುವ ಮರಗಳಿಗೆ ಪ್ರಾಶಸ್ತ್ಯ ನೀಡುತ್ತೇವೆ
ವೀರೇಶ್, ಬೆಳಗಾರ, ಓಬಳಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.