ತುಮಕೂರು: ಜಿಲ್ಲೆಯ ತುಮಕೂರು ದಕ್ಷಿಣ ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಗಳ ಹಲವು ಶಾಲೆಗಳಲ್ಲಿ ಇನ್ನೂ ಶಾಲಾ ಮಕ್ಕಳಿಗೆ ಶೌಚಾಲಯಗಳೇ ಇಲ್ಲ!
ರಾಜ್ಯ ಮತ್ತು ಕೇಂದ್ರ ಸರ್ಕಾರವು ಶಾಲೆಗಳಲ್ಲಿ ಕಡ್ಡಾಯವಾಗಿ ಶೌಚಾಲಯ ನಿರ್ಮಾಣ ಆಗಬೇಕು ಎಂಬ ಆದೇಶ ಇದ್ದರೂ ಶೌಚಾಲಯಗಳು ಮಾತ್ರ ಅನೇಕ ಶಾಲೆಗಳಲ್ಲಿ ಇಲ್ಲದಾಗಿದೆ.
ಶೌಚಾಲಯ ಇಲ್ಲದ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಕೇಂದ್ರ ಸರ್ಕಾರವು ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಲಕ್ಷಾಂತರ ಅನುದಾನ ಒದಗಿಸಿದೆ. ಹಣ ಒದಗಿಸಿದರೂ ಅರೆ ಬರೆ ಖರ್ಚು ಮಾಡಿ ಶೌಚಾಲಯಗಳನ್ನೂ ನಿರ್ಮಿಸದೇ ಇರುವುದು ಬೆಳಕಿಗೆ ಬಂದಿದೆ.
ತುಮಕೂರು ಶೈಕ್ಷಣಿಕ ಜಿಲ್ಲೆಯ 22 ಶಾಲೆಗಳಿಗೆ (ಪ್ರಾಥಮಿಕ ಮತ್ತು ಪ್ರೌಢ ಶಾಲೆ) ಶೌಚಾಲಯ ನಿರ್ಮಾಣಕ್ಕೆ ₹ 44 ಲಕ್ಷ ಅನುದಾನ ಬಿಡುಗಡೆಯಾಗಿದೆ. ಆದರೆ ಖರ್ಚು ಮಾಡಿದ್ದು ಕೇವಲ ₹ 16 ಲಕ್ಷ!
ಮಧುಗಿರಿ ಶೈಕ್ಷಣಿಕ ಜಿಲ್ಲೆಯ 27 ಶಾಲೆಗಳಿಗೆ (ಪ್ರಾಥಮಿಕ ಮತ್ತು ಪ್ರೌಢ ಶಾಲೆ) ₹ 54 ಲಕ್ಷ ಬಿಡುಗಡೆ ಆಗಿದೆ. ಆದರೆ ₹ 12 ಲಕ್ಷ ಮಾತ್ರ ಖರ್ಚು ಮಾಡಲಾಗಿದೆ.
ಒಂದೊಂದು ಶಾಲೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಎಷ್ಟು ತಿಂಗಳು ಬೇಕಾಗುತ್ತದೆ? ಐದಾರು ತಿಂಗಳಾದರೂ ಶೌಚಾಲಯಗಳು ಪೂರ್ಣಗೊಂಡಿಲ್ಲ. ಕಾಮಗಾರಿ ಮಾಡದೇ ಸರ್ಕಾರ ಒದಗಿಸಿದ ಅನುದಾನವನ್ನು ಹಾಗೆಯೇ ಉಳಿಸಲಾಗಿದೆ.
ಎಪ್ರಿಲ್ ತಿಂಗಳಲ್ಲಿಯೇ ಅನುದಾನ ದೊರಕಿದೆ. ಶಾಲೆಗಳು ಜೂನ್ ತಿಂಗಳಲ್ಲಿ ಆರಂಭವಾಗಿದೆ. ಅನುದಾನ ಲಭಿಸಿ 7 ತಿಂಗಳಾದರೂ ಅನುದಾನ ಖರ್ಚು ಮಾಡಿಲ್ಲ. ನಿರ್ದಿಷ್ಟ ಶೌಚಾಲಯಗಳ ನಿರ್ಮಾಣ ಕಾಮಗಾರಿ ಪೂರ್ಣವಾದರೆ ಅನುದಾನ ಖರ್ಚಾಗುತ್ತದೆ. ಆದರೆ, ಕಾಮಗಾರಿಯನ್ನೇ ಮಾಡಿಲ್ಲ!
ಇದಕ್ಕೆ ಕಾರಣವಾದರೂ ಏನು: ಶೌಚಾಲಯ ನಿರ್ಮಾಣ ವಿಳಂಬಕ್ಕೆ ನಾನಾ ಕಾರಣಗಳು ಕೇಳಿ ಬರುತ್ತಿವೆ. ಕೆಲ ಶಾಲೆಗಳಿಗೆ ನೀರಿನ ಸಮಸ್ಯೆ ಇದೆ. ಶೌಚಾಲಯ ನಿರ್ಮಾಣ ಮಾಡಿದರೆ ಹೆಚ್ಚು ನೀರಿನ ಲಭ್ಯತೆ ಇರಬೇಕು. ನೀರೇ ಇಲ್ಲದಿರುವುದರಿಂದ ಶೌಚಾಲಯ ನಿರ್ಮಾಣ ಕಾಮಗಾರಿ ತ್ವರಿತ ಪೂರ್ಣಗೊಳಿಸದೇ ಇರುವುದಕ್ಕೆ ಕಾರಣ ಎಂದು ಹೇಳಲಾಗುತ್ತದೆ.
ಮತ್ತೆ ಕೆಲವೆಡೆ ಶೌಚಾಲಯ ನಿರ್ಮಾಣ ಮಾಡುವುದು ಸರಳ. ಆದರೆ, ನಿರ್ವಹಣೆಯೇ ಕಷ್ಟ ಎಂಬ ಕಾರಣಕ್ಕೆ ಶೌಚಾಲಯ ನಿರ್ಮಾಣಕ್ಕೆ ಶಿಕ್ಷಕರು, ಶಿಕ್ಷಣ ಇಲಾಖೆ ಅಧಿಕಾರಿಗಳು ಉತ್ಸುಕತೆ ತೋರುತ್ತಿಲ್ಲ ಎಂಬ ಆರೋಪಗಳು ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.