ತುಮಕೂರು: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ ಪ್ರಯುಕ್ತ ಭಾನುವಾರ ರಾಷ್ಟ್ರೀಯ ಹೆದ್ದಾರಿ 48ರ ಒಂದು ಬದಿಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಇದರಿಂದ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು.
ಮುಂಜಾಗ್ರತಾ ಕ್ರಮವಾಗಿ ಹೆದ್ದಾರಿಯ ಎಡ ಬದಿಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಬೆಂಗಳೂರಿನಿಂದ ಚಿತ್ರದುರ್ಗದ ಕಡೆಗೆ ಹೋಗುವ ಹಾಗೂ ಚಿತ್ರದುರ್ಗದಿಂದ ಬೆಂಗಳೂರಿನತ್ತ ತೆರಳುವ ವಾಹನಗಳು ಒಂದೇ ರಸ್ತೆಯಲ್ಲಿ (ಹೆದ್ದಾರಿಯ ಬಲ ಭಾಗದಲ್ಲಿ) ಸಂಚರಿಸಿದ ಕಾರಣ ವಾಹನಗಳ ಓಡಾಟಕ್ಕೆ ಸಮಸ್ಯೆಯಾಯಿತು.
ತಾಲ್ಲೂಕಿನ ಸೀಬಿ ಗ್ರಾಮದಿಂದ ಸೋರೆಕುಂಟೆ ಕ್ರಾಸ್‌ವರೆಗೆ ಸುಮಾರು 5 ಕಿಲೊ ಮೀಟರ್ ವ್ಯಾಪ್ತಿಯಲ್ಲಿ ನೂರಾರು ವಾಹನಗಳು ನಿಂತಿದ್ದವು. ನೆಲಹಾಳ್, ಸೀಬಿ ಬಳಿ ಹೆದ್ದಾರಿ ಮತ್ತು ಸರ್ವೀಸ್ ರಸ್ತೆಯಲ್ಲಿ ನೂರಾರು ವಾಹನ ಗಂಟೆ ಗಟ್ಟಲೆ ನಿಂತಲ್ಲಿಯೇ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಎರಡೂ ಬದಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಿದ ನಂತರ ವಾಹನ ದಟ್ಟಣೆ ಕೊಂಚ ಕಡಿಮೆಯಾಯಿತು.
ವಾರಾಂತ್ಯದ ಸಮಯದಲ್ಲಿ ಬೆಂಗಳೂರಿನಿಂದ ನಾನಾ ಊರುಗಳಿಗೆ ತೆರಳುವವರು, ಬೇರೆ ಬೇರೆ ಜಿಲ್ಲೆಗಳಿಂದ ಬೆಂಗಳೂರಿಗೆ ಹೋಗುವವರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಕಷ್ಟ ಅನುಭವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.