ತುಮಕೂರು: ತುಮಕೂರು– ಮಂಗಳೂರು ನಡುವೆ ರೈಲು ಸಂಚಾರ ಆರಂಭಿಸುವ ಕುರಿತು ಅಧಿಕಾರಿಗಳ ಜತೆ ಚರ್ಚಿಸಿ, ಅಗತ್ಯ ಎನಿಸಿದರೆ ರೈಲಿನ ವ್ಯವಸ್ಥೆ ಮಾಡಲಾಗುವುದು ಎಂದು ಕೇಂದ್ರ ಜಲಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.
ನಗರದಲ್ಲಿ ಭಾನುವಾರ ‘ಗುರುಕುಲ ಆರ್ಕೆಡ್’ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ನಗರ ಬೆಳೆದಂತೆ ಭೂಮಿಯ ಬೆಲೆ ಗಗನಮುಖಿಯಾಗಿದೆ. ಭವಿಷ್ಯದ ದೃಷ್ಟಿಯಿಂದ ನೆರೆಯ ಆಂಧ್ರಪ್ರದೇಶದವರು ದುಪ್ಪಟ್ಟು ಹಣ ನೀಡಿ ಈ ಭಾಗದ ಭೂಮಿ ಖರೀದಿಸುತ್ತಿದ್ದಾರೆ. ವೀರಶೈವ ಲಿಂಗಾಯತ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ 5 ಎಕರೆ ಜಾಗ ಖರೀದಿಸಿ, ಹಾಸ್ಟೆಲ್ ನಿರ್ಮಾಣಕ್ಕೆ ಮುಂದಾದರೆ ಅಗತ್ಯ ನೆರವು ನೀಡಲಾಗುವುದು ಎಂದರು.
ಮಾಜಿ ಸಂಸದ ಜಿ.ಎಸ್.ಬಸವರಾಜು, ‘ನಮ್ಮಲ್ಲಿ ಗುಂಪುಗಾರಿಕೆ ಕಡಿಮೆಯಾಗದಿದ್ದರೆ ಸಮುದಾಯಕ್ಕೆ ಉಳಿಗಾಲವಿಲ್ಲ. ಎಲ್ಲರೂ ಒಗ್ಗೂಡಿದರೆ ಸಮಾಜದ ಅಭಿವೃದ್ಧಿ ಸಾಧ್ಯ. ಜಿಲ್ಲೆಗೆ ಹೇಮಾವತಿ ನೀರು ಹರಿದ ನಂತರ ಸಮುದಾಯ ಬೆಳೆದಿದೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಹೇಮಾವತಿ ನೀರಿಗೆ ಅಡ್ಡಿಪಡಿಸಿದ ಸಂದರ್ಭದಲ್ಲಿ ಅವರ ಮಾತು ತಿರಸ್ಕರಿಸಿ ಜಿಲ್ಲೆಗೆ ನೀರು ಹರಿಸಲಾಯಿತು’ ಎಂದು ನೆನಪಿಸಿಕೊಂಡರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ವೀರಶೈವ ಗುರುಕುಲ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಜಿ.ಎನ್.ಬಸವರಾಜು, ಉಪಾಧ್ಯಕ್ಷ ಎಂ.ಆರ್.ಸಿದ್ಧಲಿಂಗಪ್ಪ, ಜಂಟಿ ಕಾರ್ಯದರ್ಶಿ ಎನ್.ಜಯಣ್ಣ, ಖಜಾಂಚಿ ಮಲ್ಲಿಕಾರ್ಜುನಯ್ಯ, ನಿರ್ದೇಶಕರಾದ ಪ್ರಭು ಸಾಗರನಹಳ್ಳಿ, ಎಂ.ಎನ್.ರೇಣುಕರಾಧ್ಯ, ಬಿ.ಬಿ.ಮಹದೇವಯ್ಯ, ಹಾಲೆನೂರು ಲೇಪಾಕ್ಷ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.