ADVERTISEMENT

ಪಾರದರ್ಶಕ ಆತ್ಮಕಥೆಯೇ ಶ್ರೇಷ್ಠ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 16:05 IST
Last Updated 9 ಜುಲೈ 2024, 16:05 IST
ತುಮಕೂರು ವಿಶ್ವವಿದ್ಯಾಲಯ ಡಿವಿಜಿ ಕನ್ನಡ ಅಧ್ಯಯನ ಕೇಂದ್ರ ಮಂಗಳವಾರ ಆಯೋಜಿಸಿದ್ದ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರ ಆತ್ಮಕಥನ ‘ಯರೆಬೇವು’ ಕುರಿತ ಸಂವಾದ ಕಾರ್ಯಕ್ರಮಕ್ಕೆ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಚಾಲನೆ ನೀಡಿದರು. ಪ್ರೊ.ನಿತ್ಯಾನಂದ ಬಿ. ಶೆಟ್ಟಿ, ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಪ್ರೊ.ಕೆ.ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು
ತುಮಕೂರು ವಿಶ್ವವಿದ್ಯಾಲಯ ಡಿವಿಜಿ ಕನ್ನಡ ಅಧ್ಯಯನ ಕೇಂದ್ರ ಮಂಗಳವಾರ ಆಯೋಜಿಸಿದ್ದ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರ ಆತ್ಮಕಥನ ‘ಯರೆಬೇವು’ ಕುರಿತ ಸಂವಾದ ಕಾರ್ಯಕ್ರಮಕ್ಕೆ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಚಾಲನೆ ನೀಡಿದರು. ಪ್ರೊ.ನಿತ್ಯಾನಂದ ಬಿ. ಶೆಟ್ಟಿ, ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಪ್ರೊ.ಕೆ.ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು   

ತುಮಕೂರು: ಬಾಳಕಥನ ಎಂಬುದು ರೂಪಕವಿದ್ದಂತೆ. ಪಾರದರ್ಶಕತೆಯಿಂದ ಕೂಡಿದ ಆತ್ಮಕಥೆ ಮಾತ್ರ ಶ್ರೇಷ್ಠವಾದದ್ದು ಎಂದು ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾಲಯ ಡಿವಿಜಿ ಕನ್ನಡ ಅಧ್ಯಯನ ಕೇಂದ್ರ ಮಂಗಳವಾರ ಆಯೋಜಿಸಿದ್ದ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರ ಆತ್ಮಕಥನ ‘ಯರೆಬೇವು’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ನಮನ್ನು ನಾವು ಜಗತ್ತಿಗೆ ತೆರೆದಿಡುವ ನೈತಿಕ ಕ್ರಮವೇ ಆತ್ಮಕಥೆಯಾಗಿದೆ. ಆತ್ಮವಿಮರ್ಶೆಯ ಮೂಲಕವೇ ಆತ್ಮಕಥೆ ರಚಿಸಬೇಕೆ ಹೊರೆತು, ಅದು ಆತ್ಮರತಿಯಾಗಬಾರದು. ಆತ್ಮಕಥೆಗಳು ಸಮಾಜದ ಏಣಿ ಶ್ರೇಣಿಗಳು, ಅವಮಾನಗಳು, ದುಗುಡ-ದುಮ್ಮಾನಗಳ ಜೊತೆಗೆ ಆ ಕಾಲಘಟ್ಟದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಿನ್ನೆಲೆಗಳ ಕೈಗನ್ನಡಿಯಾಗಿರುತ್ತವೆ ಎಂದು ಹೇಳಿದರು.

ADVERTISEMENT

‘ಯರೆಬೇವು’ ಆತ್ಮಕಥೆಯು ನನ್ನ ಕಾಲಘಟ್ಟದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಹಿನ್ನೆಲೆಯನ್ನು ಕಟ್ಟಿಕೊಡುತ್ತದೆ. ಬಾಲ್ಯದ ಗೆಳೆಯರ ಅನುಭವ, ಗ್ರಾಮೀಣ ಸೊಗಡಿನ ಚಿತ್ರಣಗಳನ್ನು ನೀಡುತ್ತದೆ ಎಂದರು.

ಸಾಹಿತಿಗಳಾದ ಪಿ.ಲಂಕೇಶ್, ಗಿರೀಶ್ ಕಾರ್ನಾಡ್, ಶ್ಯಾಮರಾಯರು, ಕುವೆಂಪು, ಶಿವರಾಮ ಕಾರಂತರ ಆತ್ಮಕಥೆಗಳು ನೈಜ ಭಾವವನ್ನು ಹೊಂದಿವೆ. ಬರಹಕ್ಕೆ ವಸ್ತುವಾಗುವಂತೆ ಬದುಕಬೇಕೆಂಬ ಪರಿಕಲ್ಪನೆಯಲ್ಲಿ ಅನೇಕ ಮಹಿಳಾ ಸಾಹಿತಿಗಳ ಉತ್ಕೃಷ್ಟ ಆತ್ಮಕಥಾನಕಗಳು ಬಂದಿವೆ. ಸಾಲುಮರದ ತಿಮ್ಮಕ್ಕ, ಮಾಟಗಾನಹಟ್ಟಿಯ ದಾಸಪ್ಪ ಅವರಂತಹ ಅದೆಷ್ಟೋ ಅನಾಮಧೇಯ ಆತ್ಮಕಥೆಗಳನ್ನು ನಾವಿಂದು ಕಟ್ಟಬೇಕಿದೆ ಎಂದರು.

ಪುರಾಣಗಳಲ್ಲಿ ಬರುವ ಮಹಿಳಾ ಪಾತ್ರಗಳಾದ ಸೀತೆ, ಊರ್ಮಿಳೆ, ಶಾಂತ, ಅಂಬೆ, ಅಂಬಿಕೆ, ಅಂಬಾಲಿಕೆ, ಕುಂತಿ, ಭಾನುಮತಿಯ ಆತ್ಮಕಥನವನ್ನು ಬರೆದಿದ್ದರೆ ಅವರ ತುಡಿತ, ಮಿಡಿತಗಳು, ಆ ಕಾಲಘಟ್ಟದ ಸತ್ಯ ಕಥೆಗಳನ್ನು ಬಿಚ್ಚಿಡುತ್ತಿದ್ದವು ಎಂದು ತಿಳಿಸಿದರು.

ವಿ.ವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ‘ಪದವಿ ಜೊತೆಗೆ ಸಾಹಿತ್ಯ ಜ್ಞಾನವಿದ್ದಾಗ ಸಮಾಜಮುಖಿ ಕಾರ್ಯಗಳಲ್ಲಿ ಆಸಕ್ತಿ ಬೆಳೆಯುತ್ತದೆ’ ಎಂದರು.

ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ನಿತ್ಯಾನಂದ ಬಿ. ಶೆಟ್ಟಿ, ‘ವಿದ್ಯಾರ್ಥಿಗಳಿಗೆ ಸಮಾಜದ ಸಮಸ್ಯೆಗಳ ಕುರಿತು ಬರೆಯಬೇಕೆಂಬ ತುಡಿತವಿರುತ್ತದೆ. ಅವರ ಬರಹಗಳನ್ನು ಸರಿಯಾದ ಕ್ರಮದಲ್ಲಿ ಸೇರಿಸಿ, ಸಮಗ್ರವಾಗಿಸುವ ಕಲ್ಪನೆಯನ್ನು ಆತ್ಮಕಥೆಗಳು ನೀಡುತ್ತವೆ’ ಎಂದು ಹೇಳಿದರು.

ವಿ.ವಿ ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.