ತುಮಕೂರು: ವಿವಾಹ ವಿಚ್ಛೇದನ ಕೋರಿ ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದ 13 ಜೋಡಿಗಳು ಸೇರಿದಂತೆ ಜಿಲ್ಲೆಯಲ್ಲಿ 18 ಜೋಡಿಗಳು ಕಹಿ ಘಟನೆ ಮರೆತು ಒಂದಾಗಿವೆ.
ಹಲವು ವರ್ಷಗಳಿಂದ ನ್ಯಾಯಾಲಯದ ಬಾಗಿಲು ತಟ್ಟಿದ್ದ ದಂಪತಿಗಳು, ರಾಷ್ಟ್ರೀಯ ಲೋಕ್ ಅದಾಲತ್ ಸಂದರ್ಭದಲ್ಲಿ ಒಗ್ಗೂಡುವ ಮನಸ್ಸು ಮಾಡಿದ್ದಾರೆ. ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಧೀಶ ಬಿ.ಜಯಂತ್ ಕುಮಾರ್ ಪ್ರಯತ್ನದ ಫಲವಾಗಿ ವೈಮನಸ್ಸು ಮರೆತು ಒಟ್ಟಾಗಿ ಬಾಳುವ ಪ್ರತಿಜ್ಞೆ ಮಾಡಿದ್ದಾರೆ. ಹಾರ ಬದಲಿಸಿಕೊಂಡು, ಸಿಹಿ ಸವಿದು, ಪರಸ್ಪರ ಕೈ ಹಿಡಿದ ಜೋಡಿಗಳು ನಗುಮೊಗದೊಂದಿಗೆ ನ್ಯಾಯಾಲಯದಿಂದ ಮನೆಗೆ ತೆರಳಿದ್ದಾರೆ.
ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ 13 ಜೋಡಿ, ಮಧುಗಿರಿ ನ್ಯಾಯಾಲಯದಲ್ಲಿ 2, ಪಾವಗಡ, ತಿಪಟೂರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ತಲಾ ಒಂದು ಸೇರಿದಂತೆ ಒಟ್ಟು 18 ಜೋಡಿಗಳು ವಿವಾಹ ವಿಚ್ಛೇದನದಿಂದ ಹಿಂದೆ ಸರಿದಿವೆ. ಎರಡೂ ಕಡೆಯ ವಕೀಲರನ್ನು ಸಂಪರ್ಕಿಸಿ, ದಂಪತಿಗಳ ಮನವೊಲಿಸುವಲ್ಲಿ ನ್ಯಾಯಾಧೀಶ ಬಿ.ಜಯಂತ್ ಕುಮಾರ್ ಯಶಸ್ವಿಯಾಗಿದ್ದಾರೆ. ನಂತರ ಬುದ್ಧವಾದ ಹೇಳಿ ಮನೆಗೆ ಕಳುಹಿಸಿದ್ದಾರೆ.
‘ಚಿಕ್ಕ ವಿಚಾರಗಳಿಗೆ ಮನಸ್ತಾಪ ಮಾಡಿಕೊಳ್ಳಬಾರದು. ಮಕ್ಕಳ ಹಿತದೃಷ್ಟಿಯ ಜತೆಗೆ ಹಿರಿಯರನ್ನು ನೋಡಿಕೊಳ್ಳುವ ಜವಾಬ್ದಾರಿ ನಿಮ್ಮಗಳ ಮೇಲಿದೆ’ ಎಂದು ಬುದ್ಧಿವಾದ ಹೇಳಿದರು.
ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಮುನಿರಾಜು, ‘ಗಂಡ– ಹೆಂಡತಿ ಎರಡು ಕೈಗಳಿದ್ದಂತೆ. ಒಂದು ಕೈನಲ್ಲಿ ಏನೂ ಕೆಲಸ ಮಾಡಲಾಗದು. ಎರಡೂ ಕೈ ಇದ್ದರೆ ಚಪ್ಪಾಳೆ. ಇಬ್ಬರೂ ಒಬ್ಬರನ್ನೊಬ್ಬರು ನಂಬಬೇಕು. ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆಯಿಂದ ಜೀವನ ನಡೆಸಬೇಕು’ ಎಂದು ಸಲಹೆ ಮಾಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನೀಸಾ, ‘ಗಂಡ– ಹೆಂಡತಿ ಜೊತೆಯಲ್ಲಿದ್ದರೆ ಅದಕ್ಕೆ ಬೆಲೆ. ಕುಟುಂಬ ಮುಖ್ಯ. ಮತ್ತೆ ಜಗಳ ಮಾಡಿಕೊಂಡು ನ್ಯಾಯಾಲಯಕ್ಕೆ ಬರಬೇಡಿ’ ಎಂದು ಕಿವಿಮಾತಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.