ADVERTISEMENT

ತೋವಿನಕೆರೆ: ಕೊಳವೆಬಾವಿಯೊಂದಿಗೆ ರೈತರ ಸಂಘರ್ಷ

ತೋವಿನಕೆರೆ: ಪ್ರತಿವರ್ಷ ಹೆಚ್ಚುತ್ತಿದೆ ಕೊಳವೆಬಾವಿಗಳ ಸಂಖ್ಯೆ: ನೀರು ಸಿಕ್ಕಿರುವುದು ನಗಣ್ಯ

ಎಚ್.ಜೆ.ಪದ್ಮರಾಜು
Published 23 ಮೇ 2024, 4:24 IST
Last Updated 23 ಮೇ 2024, 4:24 IST
ತೋವಿನಕೆರೆ: ಪಂಚಾಯಿತಿ ವ್ಯಾಪ್ತಿಯ ಚಿಕ್ಕಣ್ಣನಹಳ್ಳಿಯ ಅಡಿಕೆ ತೋಟ
ತೋವಿನಕೆರೆ: ಪಂಚಾಯಿತಿ ವ್ಯಾಪ್ತಿಯ ಚಿಕ್ಕಣ್ಣನಹಳ್ಳಿಯ ಅಡಿಕೆ ತೋಟ    

ತೋವಿನಕೆರೆ: ಪಂಚಾಯಿತಿ ವ್ಯಾಪ್ತಿಯ ಚಿಕ್ಕಣ್ಣನಹಳ್ಳಿ ಜಮೀನಿನಲ್ಲಿ ಕೇವಲ ಹತ್ತು ದಿನಗಳ ಅಂತರದಲ್ಲಿ ಎರಡು ಕೊಳವೆಬಾವಿ ಕೊರಸಿ ನೀರು ಸಿಗದೆ  ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೋಬಳಿಯ ರೈತರು ನೀರಿಗಾಗಿ ಕೊಳವೆಬಾವಿಯೊಂದಿಗೆ ನಡೆಸುವ ಸಂಘರ್ಷವನ್ನು ತೆರೆದಿಟ್ಟಿದೆ.

ಆತ್ಮಹತ್ಯೆ ಮಾಡಿಕೊಂಡ ರೈತ ರಾಜಣ್ಣ ತಮ್ಮ ಜಮೀನಿನಲ್ಲಿ ಕೇವಲ ಆರು ವರ್ಷಗಳಲ್ಲಿ ಒಟ್ಟು ಎಂಟು ಕೊಳವೆ ಬಾವಿಗಳನ್ನು ಕೊರೆಸಿದ್ದರು! ಆದಾಗ್ಯೂ ಅವರ 1.7 ಎಕರೆ ಜಮೀನಿನಲ್ಲಿದ್ದ ಅಡಿಕೆ ಸಸಿಗಳಿಗೆ ನೀರುಣಿಸಲು ಸಾಧ್ಯವಾಗಿರಲಿಲ್ಲ. ಅಡಿಕೆ ಸಸಿ ನೆಟ್ಟು ಕೇವಲ ಆರು ವರ್ಷವಾಗಿದೆ. ಈ ಕಡಿಮೆ ಅವಧಿಯಲ್ಲಿ ಅವರು ಎಂಟು ಕೊಳವೆ ಬಾವಿ ಕೊರೆಸಿ ಕೈ ಸುಟ್ಟುಕೊಂಡಿದ್ದರು.

ರಾಜಣ್ಣ ಪ್ರಾರಂಭದಲ್ಲಿ ಮಳೆ ಆಶ್ರಿತ ಬೆಳೆಗಳನ್ನು ಆಶ್ರಯಿಸಿದ್ದರು. ರಾಗಿ, ಶೇಂಗಾ, ದೊಡ್ಡಿ ಭತ್ತ, ಅವರೆಕಾಯಿ ಸೇರಿದಂತೆ ದ್ವಿದಳ ಧಾನ್ಯಗಳು ಅವರಿಗೆ ಆಸರೆಯಾಗಿತ್ತು. ಆನಂತರ ಅನಿಶ್ಚಿತ ಮಳೆಯಿಂದಾಗಿ ಕೃಷಿಯಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚಾಯಿತು. ಹೀಗಾಗಿ ಕೊಳವೆ ಬಾವಿ ಕಡೆ ಮನಸ್ಸು ಹೊರಳಿತು.

ADVERTISEMENT

ಕೊಳವೆ ಬಾವಿ ಕೊರಸಿ ಸಿಕ್ಕಿದ ನೀರಿನಲ್ಲಿ ಕಾಕಡ ಹೂವಿನ ಗಿಡಗಳನ್ನು ನೆಟ್ಟರು. ಹೈನುಗಾರಿಕೆ, ಕುರಿ, ಮೇಕೆ ಸಾಕಾಣಿಕೆ ಮಾಡಿಕೊಂಡು ಕಾಕಡ ಹೂವನ್ನು ಮಾರಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಕ್ರಮೇಣ ಕೊಳವೆ ಬಾವಿಯಲ್ಲಿ ನೀರು ಕಡಿಮೆಯಾಯಿತು. ಮತ್ತೆ ಬದುಕು ಅತಂತ್ರದತ್ತ ವಾಲಲು ಆರಂಭಿಸಿತು.

ಜೀವನ ನಿರ್ವಹಣೆಗೆ ಸಾಲದ ಮೊರೆ ಹೋಗುವುದು ಅನಿವಾರ್ಯವಾಯಿತು. ಆಗ ಅವರ ಗಮನಕ್ಕೆ ಬಂದದ್ದೆ ಉತ್ತಮ ಆದಾಯ ತರುವ ಅಡಿಕೆ ಕೃಷಿ. ಅಡಿಕೆ ಸಸಿಗಳನ್ನು ನಾಟಿ ಮಾಡಿ ಮದ್ಯದಲ್ಲಿ ಮೆಡಿಸಿನ್ ಸೌತೆ ಬೆಳೆದು ಅಲ್ಪಸ್ವಲ್ಪ ಹಣ ನೋಡಿದರು. ಹುಣಸೆ ಬೆಳೆ ಗುತ್ತಿಗೆ ಪಡೆದು, ಶುಚಿಗೊಳಿಸಿ ಮಾರಾಟ ಮಾಡಲು ಪ್ರಾರಂಭಿಸಿದರು. ಬೆಲೆ ಕುಸಿತವಾಗಿ ಅದೂ ನಷ್ಟವಾಯಿತು. ಕೊಳವೆ ಬಾವಿಯಲ್ಲಿ ಬರುತ್ತಿದ್ದ ನೀರೂ ಸ್ಥಗಿತವಾಯಿತು.

ರಾಜಣ್ಣ ಮತ್ತು ಕೊಳವೆ ಬಾವಿಯ ನಡುವಿನ ಹೋರಾಟ ಪ್ರಾರಂಭವಾಯಿತು. ಮೈಕ್ರೋ ಫೈನಾನ್ಸ, ಕೈಸಾಲ ಹೀಗೆ ಸಾಲು ಸಾಲು ಸಾಲಗಳು, ಬಡ್ಡಿಯ ನಡುವೆ ರೈತ ರಾಜಣ್ಣ ಹೈರಾಣಾದರು.

ಅಡಿಕೆ ಇಳುವರಿ ಬರುವ ಸಂದರ್ಭದಲ್ಲಿ ಕೊಳವೆ ಬಾವಿಯಲ್ಲಿ ನೀರು ಸ್ಥಗಿತವಾಯಿತು. ನಿರಂತರವಾಗಿ ವರ್ಷಕ್ಕೆ ಒಂದರಂತೆ 6 ಕೊಳವೆ ಬಾವಿ ಕೊರೆಸಿದರೂ ಯಾವುದರಲ್ಲೂ ಉತ್ತಮ ನೀರು ಸಿಗಲಿಲ್ಲ. ಮತ್ತೆ ಸಾಲ ಮಾಡಿ ಕೊಳವೆಬಾವಿ ಕೊರೆಸಿದರು. ಹತ್ತು ದಿನದ ಅಂತರದಲ್ಲಿ ಎರಡು ಕೊಳವೆ ಬಾವಿ ಕೊರೆಸಿದ್ದರು.

ಹೊಸದಾಗಿ ಕೊರೆದ ಕೊಳವೆ ಬಾವಿಗೆ ಮೋಟಾರು ಪಂಪ್ ಬಿಟ್ಟಿರುವುದು ಲಾರಿ ಬಂದಾಗ ಕೊಂಬೆ ತಡೆಯುತ್ತದೆ ಎಂದು ಕಡಿದ ಹುಣಸೆ ಮರದ ಕೊಂಬೆಗೆ ರಾಜಣ್ಣ ನೇಣು ಹಾಕಿಕೊಂಡ ಸ್ಥಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.