ADVERTISEMENT

'ಎತ್ತಿನಹೊಳೆ: ರೈತರ ಹಿತ ಕಾಪಾಡಲು ಆಗ್ರಹ'

ಬೈರಗೊಂಡ್ಲು ಬಳಿ ಡ್ಯಾಂ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 4:08 IST
Last Updated 26 ನವೆಂಬರ್ 2024, 4:08 IST

ಕೊರಟಗೆರೆ: ಎತ್ತಿನಹೊಳೆ ಯೋಜನೆಯಡಿ ತಾಲ್ಲೂಕಿನ ಬೈರಗೊಂಡ್ಲು ಬಳಿ ಬಫರ್ ಡ್ಯಾಂ ನಿರ್ಮಾಣ ಮಾಡುವ ಸರ್ಕಾರದ ಉದ್ದೇಶ ಮತ್ತೆ ಮುನ್ನೆಲೆಗೆ ಬಂದಿರುವುದು ಸ್ವಾಗತಾರ್ಹ. ಯೋಜನೆ ಅನುಷ್ಠಾನಗೊಳಿಸುವಾಗ ತಾಲ್ಲೂಕಿನ ರೈತರಿಗೆ ಅನ್ಯಾಯವಾಗದಂತೆ ಎಚ್ಚರ ವಹಿಸಬೇಕು ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೋಡ್ಲಹಳ್ಳಿ ಸಿದ್ದರಾಜು ಆಗ್ರಹಿಸಿದರು.

ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡ್ಯಾಂ ನಿರ್ಮಾಣದಲ್ಲಿ ದೊಡ್ಡಬಳ್ಳಾಪುರ ಹಾಗೂ ಕೊರಟಗೆರೆ ತಾಲ್ಲೂಕಿನ ರೈತರಿಗೆ ನೀಡುವ ಪರಿಹಾರ ಹಣದಲ್ಲಿ ತಾರತಮ್ಯ ಉಂಟಾದ ಕಾರಣಕ್ಕೆ ಕೇವಲ 7 ಟಿಎಂಸಿ ನೀರು ಸಂಗ್ರಹ ಕಡಿಮೆ ಮಾಡಿ 2 ಟಿಎಂಸಿಗೆ ಇಳಿಸಿ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಡ್ಯಾಂ ನಿರ್ಮಾಣಕ್ಕೆ ನಿರ್ಧಾರ ಮಾಡಲಾಗಿತ್ತು. ಆದರೆ, ಈಚೆಗೆ ಉದ್ದೇಶಿತ ಸ್ಥಳವಾದ ಬೈರಗೊಂಡ್ಲು ಬಳಿ ಡ್ಯಾಂ ನಿರ್ಮಾಣ ಮಾಡಬೇಕು ಎಂದು ಗೃಹ ಸಚಿವ ಪರಮೆಶ್ವರ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತೀರ್ಮಾನ ಸಂತೋಷದ ವಿಚಾರ ಎಂದರು. 

ನಿಗದಿತ ಸ್ಥಳದಲ್ಲೇ ಡ್ಯಾಂ ನಿರ್ಮಾಣ ಮಾಡಬೇಕು ಎಂಬುದು ಒತ್ತಾಯವಾಗಿದೆ. ಆದರೆ, ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ತಾಲ್ಲೂಕಿನ ರೈತರ ಹಿತದೃಷ್ಟಿಯಿಂದ ದೊಡ್ಡಬಳ್ಳಾಪುರ ತಾಲ್ಲೂಕಿನ ರೈತರಿಗೆ ನೀಡುವ ಪರಿಹಾರವನ್ನೇ ನೀಡುವ ಮೂಲಕ ತಾರತಮ್ಯ ಹೋಗಲಾಡಿಸಬೇಕು ಎಂದು ಹೇಳಿದರು. 

ADVERTISEMENT

ಡ್ಯಾಂ ನಿರ್ಮಾಣ ವಿಚಾರದಲ್ಲಿ ರೈತ ಸಂಘ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಲಿದೆ. ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಜತೆಯಲ್ಲಿ ಪ್ರತಿ ಹಳ್ಳಿಗೂ ನಾವು ಭೇಟಿ ನೀಡಿ ಅವರ ಮನವೊಲಿಸವ ಪ್ರಯತ್ನ ಮಾಡಲಾಗಿತ್ತು. ಕೆಲವು ರೈತರು ವಿರೋಧ ವ್ಯಕ್ತಪಡಿಸಿದರೆ, ಕೆಲವು ರೈತರು ಸೂಕ್ತ ಪರಿಹಾರ ನೀಡಿದರೆ ಜಮೀನು ಬಿಟ್ಟುಕೊಡುವುದಾಗಿ ಜಿಲ್ಲಾಧಿಕಾರಿ ಸಮ್ಮುಖದಲ್ಲೇ ರೈತರು ಹೇಳಿದ್ದರು. ಅದರಂತೆ ಸರ್ಕಾರ ಈಗ ಅದನ್ನು ಸೂಕ್ಷ್ಮವಾಗಿ ಗಮನಿಸಿ ಸೂಕ್ತ ಕ್ರಮಕೈಗೊಂಡರೆ ಉತ್ತಮ ಎಂದರು.

ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಅಲಪನಹಳ್ಳಿ ಪುಟ್ಟರಾಜು ಮಾತನಾಡಿದರು. ರೈತ ಮುಖಂಡರಾದ ಲೋಕೇಶ್, ಪ್ರಸನ್ನಕುಮಾರ್, ವೀರಣ್ಣ, ಮಲ್ಲೇಶ್, ಕೆಂಪರಾಜು, ರಾಮಚಂದ್ರಪ್ಪ, ಶಿವಣ್ಣ, ಲಚ್ಮನಾಯ್ಕ, ಚೇತನ್ ಕುಮಾರ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.