ADVERTISEMENT

ತುಮಕೂರು: ಬೀಳುವ ಸ್ಥಿತಿಯಲ್ಲಿ ಪಾಲಿಟೆಕ್ನಿಕ್‌ ಕಾಲೇಜು ಕಟ್ಟಡ

ಮಳೆ ಬಂದರೆ ಸೋರುವ ಕೊಠಡಿ; ಗುಣಮಟ್ಟದ ಶಿಕ್ಷಣದಿಂದ ವಿದ್ಯಾರ್ಥಿಗಳು ವಂಚಿತ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 6:19 IST
Last Updated 19 ಜುಲೈ 2024, 6:19 IST
ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು
ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು   

ತುಮಕೂರು: ಮಳೆ ಬಂದರೆ ತೊಟ್ಟಿಕ್ಕುವ ಕೊಠಡಿ, ಶಿಥಿಲಾವಸ್ಥೆಗೆ ತಲುಪಿದ ಕಟ್ಟಡ, ಮುರಿದು ಬಿದ್ದ ಬೆಂಚ್‌, ಕಿಟಕಿಗಳು, ಪಾಠಕ್ಕಾಗಿ ವಿದ್ಯಾರ್ಥಿಗಳ ಅಲೆದಾಟ...

ಇದು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಅವ್ಯವಸ್ಥೆ. 1958ರಲ್ಲಿ ಆರಂಭವಾದ ಕಾಲೇಜಿನಲ್ಲಿ ಇದುವರೆಗೆ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿದ್ದಾರೆ. ಇಲ್ಲಿ ಕಲಿತು ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಇಂದಿನ ಪೀಳಿಗೆಗೆ ಕಾಲೇಜಿನಲ್ಲಿ ಅಗತ್ಯ ಸೌಲಭ್ಯಗಳೇ ಸಿಗುತ್ತಿಲ್ಲ. ಹಲವಾರು ಸಮಸ್ಯೆಗಳ ಮಧ್ಯೆ ಶಿಕ್ಷಣ ಮುಂದುವರಿಸಿದ್ದಾರೆ.

7 ದಶಕ ಪೂರ್ಣಗೊಳಿಸಿದ ಕಾಲೇಜಿಗೆ ಅಗತ್ಯ ಕಟ್ಟಡವೇ ಇಲ್ಲ. ಬಿರುಕು ಬಿಟ್ಟ ಮೇಲ್ಛಾವಣಿ, ನೀರು ಹರಿದು ಪಾಚಿ ಕಟ್ಟಿದ ಗೋಡೆಗಳು ಕಟ್ಟಡದ ಗುಣಮಟ್ಟಕ್ಕೆ ಕನ್ನಡಿ ಹಿಡಿದಿದೆ. ವಿದ್ಯಾರ್ಥಿಗಳು ಭಯದಲ್ಲಿಯೇ ತರಗತಿಗಳಲ್ಲಿ ಕೂರುತ್ತಿದ್ದಾರೆ. ಪ್ರತಿ ವರ್ಷ 360 ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯುತ್ತಾರೆ. ಪ್ರಥಮ, ದ್ವಿತೀಯ ಮತ್ತು ಅಂತಿಮ ವರ್ಷ ಸೇರಿ ಪ್ರತಿ ದಿನ 1 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಾರೆ. ಇಷ್ಟು ಜನರಿಗೆ ಬೇಕಾದ ಕೊಠಡಿಗಳು ಲಭ್ಯವಿಲ್ಲ. ಇರುವ ಕೊಠಡಿಗಳಲ್ಲಿ ಹಲವು ಸೋರುತ್ತಿದ್ದು, ಕಲಿಕೆಗೆ ಅಡ್ಡಿಯಾಗಿದೆ.

ADVERTISEMENT

ಸಿವಿಲ್‌ ಎಂಜಿನಿಯರಿಂಗ್‌, ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌, ಮೆಕಾನಿಕಲ್‌ ಎಂಜಿನಿಯರಿಂಗ್‌, ಆಟೊಮೊಬೈಲ್‌ ಎಂಜಿನಿಯರಿಂಗ್‌, ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯೂನಿಕೇಷನ್‌ ಎಂಜಿನಿಯರಿಂಗ್‌, ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್‌ ಒಳಗೊಂಡಂತೆ ಆರು ಕೋರ್ಸ್‌ಗಳಿವೆ. ಪ್ರಥಮ ವರ್ಷದಲ್ಲಿ ಪ್ರತಿ ವಿಭಾಗಕ್ಕೆ 60 ಜನರನ್ನು ದಾಖಲು ಮಾಡಿಕೊಳ್ಳಲಾಗುತ್ತಿದೆ.

ಈ ಎಲ್ಲ ವಿಭಾಗಗಳಿಗೆ ಕಡ್ಡಾಯವಾಗಿ ಪ್ರಯೋಗಾಲಯದ ಸೌಲಭ್ಯ ಕಲ್ಪಿಸಬೇಕು. ಆದರೆ, ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಲ್ಯಾಬ್‌ ಇಲ್ಲ. ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳಿಗೆ ಪ್ರಯೋಗಾಲಯ ಅತ್ಯಂತ ಅಗತ್ಯ. ತರಗತಿಗಿಂತ ಹೆಚ್ಚಾಗಿ ಪ್ರಯೋಗಾಲಯದಲ್ಲಿ ಕಲಿಯುವುದು ಹೆಚ್ಚಿರುತ್ತದೆ. ಲ್ಯಾಬ್‌ ಸೌಲಭ್ಯ ಕಲ್ಪಿಸುವಲ್ಲಿ ಕಾಲೇಜಿನ ಆಡಳಿತ ಮಂಡಳಿ ಹಿಂದೆ ಬಿದ್ದಿದೆ ಎಂಬ ಆರೋಪ ಸಾಮಾನ್ಯವಾಗಿದೆ.

‘ಕಂಪ್ಯೂಟರ್‌ ಇದ್ದರೂ ಎಲ್ಲವನ್ನೂ ಬಳಸಲು ಸಾಧ್ಯವಾಗುತ್ತಿಲ್ಲ. ಕೇವಲ ನೋಡಲಷ್ಟೇ ಇವೆ. ಬೆರಳೆಣಿಕೆಯಷ್ಟು ಮಾತ್ರ ಬಳಸಲು ಯೋಗ್ಯವಾಗಿವೆ. ಹಲವು ಕಂಪ್ಯೂಟರ್‌ಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿಲ್ಲ. ಇದರಿಂದ ಲ್ಯಾಬ್‌ ಉಪಯೋಗಿಸುವುದು ಕಷ್ಟವಾಗುತ್ತಿದೆ’ ಎಂದು ಕಾಲೇಜಿನ ವಿದ್ಯಾರ್ಥಿಗಳು ದೂರುತ್ತಿದ್ದಾರೆ.

ಕಾಲೇಜಿನ ಆವರಣದಲ್ಲಿರುವ ಬ್ಯಾಸ್ಕೆಟ್‌ಬಾಲ್‌ ಅಂಕಣ ಕೆರೆಯಂತಾಗಿದೆ. ಮಳೆ ಬಂದರೆ ನೀರು ನಿಲ್ಲುತ್ತಿದ್ದು, ಅಂಕಣದ ಬಳಕೆಯೂ ಸಾಧ್ಯವಾಗುತ್ತಿಲ್ಲ. ಹಾಳಾಗಿ ಹಲವು ವರ್ಷ ಕಳೆದರೂ ಸರಿಪಡಿಸುವ ಕೆಲಸವಾಗಿಲ್ಲ. ಆವರಣದಲ್ಲಿ ಸ್ವಚ್ಛತೆಯೂ ಮರೀಚಿಕೆಯಾಗಿದೆ. ಎಲ್ಲೆಂದರಲ್ಲಿ ಕಸ, ತ್ಯಾಜ್ಯವೇ ತುಂಬಿಕೊಂಡಿದೆ.

‘ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ‘ಪ್ರತಿಷ್ಠಿತ’ ಎಂಬ ಬಿರುದು ಇತ್ತು. ಆದರೆ ನಂತರದ ದಿನಗಳಲ್ಲಿ ಅಂತಹ ‘ಪ್ರತಿಷ್ಠೆ’ ಕಾಣುತ್ತಿಲ್ಲ. ಒಂದು ಕಡೆ ಕಟ್ಟಡದ ಸಮಸ್ಯೆಯಾದರೆ ಮತ್ತೊಂದೆಡೆ ಬೋಧನೆಯ ಗುಣಮಟ್ಟವೂ ಸುಧಾರಿಸುತ್ತಿಲ್ಲ. ತಾಂತ್ರಿಕ ಕಾಲೇಜಿನಲ್ಲಿ ಬೋಧಿಸಬೇಕಾದವರು ಕಾಲಕ್ಕೆ ತಕ್ಕಕ್ಕೆ ಅಪ್‌ಡೇಟ್ ಆಗುತ್ತಿಲ್ಲ. ಈಗಿನ ಕಾಲದ ವಿದ್ಯಾರ್ಥಿಗಳಿಗೆ ಏನು ಬೇಕು? ಉದ್ಯೋಗ ಪಡೆದುಕೊಳ್ಳಲು ಎಂತಹ ತಾಂತ್ರಿಕ ನೈಪುಣ್ಯತೆ ಕಲಿಸಬೇಕು? ಎಂಬ ಬಗ್ಗೆ ಚಿಂತಿಸುವುದಿಲ್ಲ. ಪಠ್ಯದಷ್ಟು ಬೋಧಿಸಿ ಸುಮ್ಮನಾಗುತ್ತಾರೆ. ಇದರಿಂದ ಡಿಪ್ಲೊಮಾ ಕೋರ್ಸ್ ಮುಗಿಸಿ ಹೊರಗೆ ಬಂದರೆ ಉದ್ಯೋಗ ಪಡೆದುಕೊಳ್ಳಲು ಪರದಾಡಬೇಕಿದೆ’ ಎಂದು ಅಂತಿಮ ವರ್ಷದ ವಿದ್ಯಾರ್ಥಿಯೊಬ್ಬರು ಪ್ರತಿಕ್ರಿಯಿಸಿದರು.

ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಬಿರುಕು ಬಿಟ್ಟ ಮೇಲ್ಛಾವಣಿ
ಕಾಲೇಜಿನಲ್ಲಿ ಮುರಿದ ಬೆಂಚ್‌

ವಿದ್ಯಾರ್ಥಿಗಳಿಗೆ ಪ್ರಯೋಗಾಲಯದ ಕೊರತೆ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಸಿಗದ ಸೌಲಭ್ಯ ಪಾಠಕ್ಕಾಗಿ ವಿದ್ಯಾರ್ಥಿಗಳ ಪರದಾಟ

ಏನೂ ಕೇಳಬೇಡಿ: ಪ್ರಾಂಶುಪಾಲ

‘ಕಾಲೇಜಿನಲ್ಲಿ ಎಷ್ಟು ಪ್ರಯೋಗಾಲಯ ಇದೆ? ಕೊಠಡಿಗಳ ಸ್ಥಿತಿ ಹೇಗಿದೆ? ದಾಖಲಾತಿ ಹೇಗೆ ನಡೆಯುತ್ತಿದೆ? ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ಸಿಗುತ್ತಿದೆಯೇ?’ ಎಂದು ಕೇಳಿದರೆ ಪಾಲಿಟೆಕ್ನಿಕ್‌ ಕಾಲೇಜು ಪ್ರಾಂಶುಪಾಲ ಚಂದ್ರಶೇಖರ್‌ ಉತ್ತರಿಸುವುದೇ ಇಲ್ಲ. ‘ನಮ್ಮನ್ನೇನು ಕೇಳಬೇಡಿ. ನಮಗೆ ಹೇಳುವ ಅಧಿಕಾರ ಇಲ್ಲ. ಕಾಲೇಜಿನ ಸ್ಥಿತಿಗತಿಯ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ’ ಎಂದು ಜಾರಿಕೊಂಡರು.

ಗುಣಮಟ್ಟ ಕೊರತೆ

‘ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಬಳ ತೆಗೆದುಕೊಳ್ಳುವ ಪ್ರಾಧ್ಯಾಪಕರು ಪ್ರಾಂಶುಪಾಲರಿಗೆ ವಿದ್ಯಾರ್ಥಿಗಳ ತೊಂದರೆ ಅರ್ಥವಾಗುತ್ತಿಲ್ಲ. ದಿನ ಹಲವು ಕಿಲೊ ಮೀಟರ್‌ ದೂರದಿಂದ ಕಾಲೇಜಿಗಾಗಿ ಬರುತ್ತೇವೆ. ಬೆಳಗ್ಗೆ ಸೂರ್ಯ ಉದಯಕ್ಕೂ ಮುನ್ನವೇ ಬಸ್‌ ಹತ್ತಿಕೊಂಡು ಬಂದರೆ ಮತ್ತೆ ಮನೆ ತಲುಪಲು ಸಂಜೆಯಾಗುತ್ತದೆ. ಆದರೆ ಕಾಲೇಜಿನಲ್ಲಿ ಸರಿಯಾದ ಶಿಕ್ಷಣ ಸಿಗುತ್ತಿಲ್ಲ’ ಎಂದು ಪಾವಗಡ ಭಾಗದ ವಿದ್ಯಾರ್ಥಿ ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.