ಕೊಡಿಗೇನಹಳ್ಳಿ: ರಾಯದುರ್ಗದಿಂದ ಪಾವಗಡದವರೆಗೆ ರೈಲ್ವೆ ಕಾಮಗಾರಿ ಪೂರ್ಣಗೊಂಡಿದ್ದು, ರೈಲು ಸಂಚಾರ ಪರೀಕ್ಷೆಯೂ ನಡೆದಿದೆ. ಆದರೆ ಮಧುಗಿರಿ– ಕೊರಟಗೆರೆ ಭಾಗದಲ್ಲಿ ಇದೇ ಕಾಮಗಾರಿ ನಿಂತು ಈಗಾಗಲೇ ಐದು ವರ್ಷ ಕಳೆದಿವೆ. ಇಲ್ಲಿ ಭೂಸ್ವಾಧೀನ ಮುಗಿದು ರೈಲು ಸಂಚಾರ ಆರಂಭವಾಗುವುದು ಯಾವಾಗ ಎನ್ನುವುದು ಜನರ ಪ್ರಶ್ನೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ತುಮಕೂರು- ರಾಯದುರ್ಗಕ್ಕೆ 206 ಕಿ.ಮೀ ಉದ್ದದ ರೈಲ್ವೆ ಯೋಜನೆ ಕಾಮಗಾರಿಗೆ 2012ರಲ್ಲೇ ಚಾಲನೆ ನೀಡಿತ್ತು. ಕಾಮಗಾರಿ ಆರಂಭಗೊಂಡು 12 ವರ್ಷ ಕಳೆದರೂ ಕೆಲವೆಡೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದರೆ, ಮತ್ತೆ ಕೆಲವೆಡೆ ನನೆಗುದಿಗೆ ಬಿದ್ದಿದೆ. ರೈಲ್ವೆ ಕಾಮಗಾರಿ ಪೂರ್ಣಗೊಂಡು, ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಆದರೆ ಇಲ್ಲಿ ವ್ಯಾಪಾರ ವಹಿವಾಟು ಚುರುಕುಗೊಂಡು ಉದ್ಯೋಗಗಳು ಸೃಷ್ಠಿಯಾಗಲಿವೆ ಎನ್ನುವುದು ಜನರ ಆಶಯ.
90 ಭಾಗ ಭೂಸ್ವಾಧೀನ ಪೂರ್ಣ: 123 ಕಿ.ಮೀ ವ್ಯಾಪ್ತಿಯ 1,394 ಎಕರೆಯಲ್ಲಿ 1,298 ಎಕರೆ ಭೂಸ್ವಾಧೀನವಾಗಿದೆ. ಉಳಿದ 96 ಎಕರೆ ಭೂಸ್ವಾಧೀನ ವಿವಿಧ ಹಂತದಲ್ಲಿದ್ದು, ಶೇ 90ರಷ್ಟು ಭೂಸ್ವಾಧೀನ ಪೂರ್ಣಗೊಳಿಸಲಾಗಿದೆ. ಈ ಯೋಜನೆ ಒಟ್ಟು ಐದು ಹಂತಗಳಲ್ಲಿ ನಡೆಯುತ್ತಿದ್ದು, 1ನೇ ಹಂತದಲ್ಲಿ ಕೊನೆ ಹಂತದ ಕಾಮಗಾರಿ ಪ್ರಾರಂಭವಾಗಿದೆ. 2ನೇ ಹಂತದಲ್ಲಿ ಕಾಮಗಾರಿ ಟೆಂಡರ್ ಕರೆಯಲಾಗಿದೆ. 3 ಮತ್ತು 4ನೇ ಹಂತದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ತಯಾರಿಸಲಾಗಿದೆ. 5ನೇ ಹಂತ ಮಡಕಶಿರಾದಿಂದ ದೊಡ್ಡಹಳ್ಳಿವರೆಗೂ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ರಾಜ್ಯದ 8 ಕಿ.ಮೀ ದೂರದವರೆಗೆ ರೈಲು ಹಳಿ ಹಾಕಲಾಗಿದೆ.
ಮಧುಗಿರಿ-ಕೊರಟಗೆರೆಯಲ್ಲಿ 220 ಎಕರೆ ಭೂಸ್ವಾಧೀನವಾಗಿದೆ. ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ ಭೂಸ್ವಾಧೀನ ಪ್ರಕ್ರಿಯೆ ಮುಗಿಯಲಿದ್ದು, ಅದರೊಳಗೆ ಟೆಂಡರ್ ಕಾಮಗಾರಿಗೂ ಚಾಲನೆ ಸಿಗುವ ಭರವಸೆ ಇದೆ.
ರೈಲು ನಿಲ್ದಾಣ: ಟೆಂಡರ್ ಪೂರ್ಣಗೊಂಡ ಮೇಲೆ ಕನಿಷ್ಠ ಮೂರು ತಿಂಗಳ ಒಳಗೆ ರೈಲ್ವೆ ನಿಲ್ದಾಣ ಕಾಮಗಾರಿ ಆರಂಭಗೊಳ್ಳಲಿದೆ. ರೈತರಿಗೆ ಭೂಸ್ವಾಧೀನ ಪರಿಹಾರ ವಿತರಿಸಲಾಗಿದೆ. ಮಧುಗಿರಿ-ಕೊರಟಗೆರೆ ತಾಲ್ಲೂಕಿನಲ್ಲಿ ಸಮಸ್ಯೆ ಇರುವ ಪ್ರದೇಶಗಳಲ್ಲಿ ರೈತರು ಕಾಮಗಾರಿಗೆ ಸ್ವಇಚ್ಛೆಯಿಂದ ಭೂಮಿ ನೀಡಲು ಒಪ್ಪಿಗೆ ಸೂಚಿಸಿದ್ದಾರೆ. ಹಾಗಾಗಿ ಈ ಭಾಗದ ಜನರ ಬಹು ದಿನದ ಕನಸು ಈಡೇರಿಸುವ ಯೋಜನೆಗೆ ಶೀಘ್ರ ಚಾಲನೆ ಸಿಗಲಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮಧುಗಿರಿ ಹಿಂದುಳಿದ ಪ್ರದೇಶವಾಗಿದ್ದು ಇಲ್ಲಿ ರೈಲ್ವೆ ಯೋಜನೆ ಆರಂಭದ ಜೊತೆಗೆ ರೋಪ್ ವೇ ಮಧುಗಿರಿ-ಹಿಂದೂಪುರದ ದ್ವಿಪಥ ಮಕ್ಕಳ ಆಸ್ಪತ್ರೆ ಕೈಗಾರಿಕೆ ಆರಂಭದೊಂದಿಗೆ ತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಅಧಿಕಾರಿಗಳು ಜನಪ್ರತಿನಿಧಿಗಳು ಶ್ರಮಿಸುವುದು ಅನಿವಾರ್ಯಮರಿಬಸಪ್ಪ ನಿವೃತ್ತ ಪ್ರಾಂಶುಪಾಲ
2027ರ ಗಡುವು
ಹಿಂದೆ ಮಧುಗಿರಿಯಲ್ಲಿ ರೈಲು ನಿಲ್ದಾಣ ನಿರ್ಮಿಸುವ ಸ್ಥಳದ ಭೂಸ್ವಾಧೀನ ಪ್ರಕ್ರಿಯೆ ಸಮಸ್ಯೆಯಾಗಿದ್ದರಿಂದ ಕೆಲಸ ನಿಲ್ಲಿಸಲಾಗಿತ್ತು. ಈಗ ಹೊಸದಾಗಿ ಅದಕ್ಕೆ ಟೆಂಡರ್ ಕರೆಯಲಾಗಿದೆ. ಮೂರು ತಿಂಗಳೊಳಗೆ ಕಾಮಗಾರಿ ಪ್ರಾರಂಭಿಸಲಾಗುವುದು. ರಾಜ್ಯ ರೈಲ್ವೆ ಹಾಗೂ ಜಲಶಕ್ತಿ ಸಚಿವ ವಿ. ಸೋಮಣ್ಣ 2027ರೊಳಗೆ ಕಾಮಗಾರಿ ಮುಗಿಸಲು ಗುರಿ ನೀಡಿರುವುದರಿಂದ ಶೀಘ್ರ ಕಾಮಗಾರಿ ಆರಂಭವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.