ತಿಪಟೂರು: ಉಪನ್ಯಾಸಕರು ಶ್ರದ್ದೆ, ಬದ್ಧತೆ ಹಾಗೂ ಪರಿಶ್ರಮದಿಂದ ಬೋಧನೆ ಮಾಡುವುದರ ಮೂಲಕ ಮುಂದಿನ ವರ್ಷದ ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶ ಹೆಚ್ಚಿಸಬೇಕೆಂದು ತುಮಕೂರು ಜಿಲ್ಲೆ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಉಪನಿರ್ದೇಶಕ ಡಾ.ಬಾಲಗುರುಮೂರ್ತಿ ಸಲಹೆ ನೀಡಿದರು.
ನಗರದ ಕಲ್ಪತರು ಸಂಸ್ಥೆ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಎಲ್ಲ ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಕಾಲೇಜು ಉಪನ್ಯಾಸಕರ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಉಪನ್ಯಾಸಕರು ವಾರ್ಷಿಕ ಪಟ್ಟಿ ಯೋಜನೆಯಂತೆ ಪ್ರತಿದಿನ ಲಘು ಟಿಪ್ಪಣಿ ತಯಾರಿಕೆಯೊಂದಿಗೆ ಮಕ್ಕಳಿಗೆ ಮನಮುಟ್ಟುವಂತೆ ತರಗತಿ ತೆಗೆದುಕೊಳ್ಳಬೇಕು ಎಂದರು.
ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಪರಿಹಾರ ಬೋಧನಾ ಘಟಕ ಪರೀಕ್ಷೆಯನ್ನು ಮಾಡುವ ಮೂಲಕ ಉತ್ತಮ ಫಲಿತಾಂಶ ಬರಲು ಯತ್ನಿಸಬೇಕು. ಕಾಲೇಜುಗಳಲ್ಲಿ ಕನ್ನಡ ಕ್ಲಬ್, ಇತಿಹಾಸ, ವಿಜ್ಞಾನ ಕ್ಲಬ್ ಮೂಲಕ ವಿವಿಧ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸಬೇಕಾಗಿದೆ. ಮಕ್ಕಳಿಗೆ ಪಾಠದ ಜತೆ ಕಲಿಕೆಯಲ್ಲಿ ಹೆಚ್ಚು ಸಹಕರಿಸಬೇಕು. ಅಂಬೇಡ್ಕರ್, ಗಾಂಧೀಜಿ, ಕುವೆಂಪು, ಅಬ್ರಾಹಂ ಲಿಂಕನ್ ಮೊದಲಾದವರ ಪ್ರಮುಖ ದಾರ್ಶನಿಕರ ವಿಚಾರ ಮಾತನಾಡುವ ವಿಡಿಯೊ ಮಕ್ಕಳಿಗೆ ಪರದೆ ಮೇಲೆ ತೋರಿಸುತ್ತಾ ಕಲಿಕೆಯಲ್ಲಿ ಹೆಚ್ಚು ಆಸಕ್ತಿ ವಹಿಸುವಂತೆ ನಿಗಾ ವಹಿಸಬೇಕು ಎಂದರು.
ಪ್ರಾಂಶುಪಾಲ ಹಾಗೂ ನೋಡಲ್ ಅಧಿಕಾರಿ ಎಂ.ಡಿ.ಶಿವಕುಮಾರ್ ಮಾತನಾಡಿ, ತಿಪಟೂರು ಜಿಲ್ಲಾ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ, ತಾಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಆಯೋಜಿಸಿ ಯಶಸ್ಸು ಕಂಡಿದ್ದೇವೆ. ಉಪನಿರ್ದೇಶಕರ ಆದೇಶದಂತೆ ಫಲಿತಾಂಶದಲ್ಲಿ ಕಳೆದ ಬಾರಿ 24ನೇ ಸ್ಥಾನದಲ್ಲಿರುವ ಜಿಲ್ಲೆಯನ್ನು ಈ ಬಾರಿ 10ರೊಳಗಡೆ ಬರುವಂತೆ ಉಪನ್ಯಾಸಕರು ಶ್ರಮವಹಿಸಬೇಕು. ಶೈಕ್ಷಣಿಕ ಕಾರ್ಯಾಗಾರದಿಂದ ನೆಮ್ಮೆಲ್ಲರ ಜವಾಬ್ದಾರಿ ಹೆಚ್ಚಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಾಚಾರ್ಯ ಸಂಘದ ಅಧ್ಯಕ್ಷ ಪ್ರಭಾಕರ್‌ರೆಡ್ಡಿ, ಪ್ರಾಚಾರ್ಯರಾದ ಗುಂಡಪ್ಪ, ಪ್ರದೀಪ್, ನಾಗರಾಜು, ರಘು, ಮಹೇಶಯ್ಯ, ನಿವೃತ್ತ ಪ್ರಾಂಶುಪಾಲ ಬಿ.ನಾಗರಾಜು, ಉಪನಿದೇಶಕರ ಕಚೇರಿಯ ರಾಜಣ್ಣ, ಉಪನ್ಯಾಸಕ ಷಡಕ್ಷರಪ್ಪ, ಪ್ರಾಂಶುಪಾಲ ರಘು ಸೇರಿದಂತೆ ತಾಲೂಕಿನ 21 ಪಿಯು ಕಾಲೇಜುಗಳ ಪ್ರಾಚಾರ್ಯರು ಹಾಗೂ ಉಪನ್ಯಾಸಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.