ADVERTISEMENT

ತುಮಕೂರು | 15 ದಿನದಲ್ಲಿ 183 ಮಂದಿಗೆ ಡೆಂಗಿ

ದುಪ್ಪಟ್ಟಾದ ಡೆಂಗಿ ಪ್ರಕರಣಗಳ ಸಂಖ್ಯೆ; ಜಿಲ್ಲೆಯಲ್ಲಿ ಮೊದಲ ಸಾವು

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 14:41 IST
Last Updated 22 ಜುಲೈ 2024, 14:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ಜಿಲ್ಲೆಯಲ್ಲಿ ಡೆಂಗಿ ಸೋಂಕಿಗೆ ಮೊದಲ ಸಾವು ಸಂಭವಿಸಿದ್ದು, ಗುಣಶ್ರೀ (18) ಎಂಬ ಯುವತಿ ಭಾನುವಾರ ಮೃತಪಟ್ಟಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.

ಈ ವರ್ಷ ಡೆಂಗಿ ಪ್ರಕರಣಗಳ ಸಂಖ್ಯೆ 365ಕ್ಕೆ ಏರಿಕೆಯಾಗಿದ್ದು, 2023ರಲ್ಲಿ ಒಟ್ಟು 361 ಮಂದಿಗೆ ಕಾಣಿಸಿಕೊಂಡಿತ್ತು. ಈ ವರ್ಷ 7 ತಿಂಗಳು ಕಳೆಯುವ ಮುನ್ನವೇ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಜುಲೈ ಪ್ರಾರಂಭದಿಂದಲೇ ಡೆಂಗಿ ಮತ್ತಷ್ಟು ಉಲ್ಬಣಗೊಂಡಿದ್ದು, ಜನವರಿ 1ರಿಂದ ಜುಲೈ 5ರ ವರೆಗೆ 182 ಪ್ರಕರಣಗಳು ದಾಖಲಾಗಿದ್ದವು. ಹದಿನೈದು ದಿನದಲ್ಲಿ ಈ ಸಂಖ್ಯೆ ದುಪ್ಪಟ್ಟಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಜಾಸ್ತಿಯಾಗಿದೆ. ಕಳೆದ ವಾರ 15 ಸಕ್ರಿಯ ಪ್ರಕರಣಗಳಿದ್ದವು. ಈಗ ಇದು 103ಕ್ಕೆ ಏರಿಕೆ ಕಂಡಿದೆ. ಆಸ್ಪತ್ರೆಯಲ್ಲಿ 11 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ನಗರ ಪ್ರದೇಶಗಳಲ್ಲಿ ಡೆಂಗಿ ಪ್ರಕರಣಗಳು ಹೆಚ್ಚಾಗುತ್ತಿವೆ. ತುಮಕೂರು, ಶಿರಾ ನಗರದಲ್ಲಿ ಡೆಂಗಿ ಹರಡುವಿಕೆ ವೇಗ ಪಡೆದುಕೊಂಡಿದೆ. ಸ್ಮಾರ್ಟ್‌ ಸಿಟಿಯಲ್ಲಿ ಚರಂಡಿ, ರಾಜ ಕಾಲುವೆ, ಖಾಲಿ ಜಾಗಗಳು ಸ್ವಚ್ಛವಾಗಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಕಸದ ರಾಶಿಯೇ ಬಿದ್ದಿರುತ್ತದೆ. ಚರಂಡಿ, ಯುಜಿಡಿ ನೀರು ನಿಂತಲ್ಲೇ ನಿಂತು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದೆ. ಹೆಚ್ಚಿನ ಜನ ಸೇರುವ ಪ್ರದೇಶಗಳು ಅನೈರ್ಮಲ್ಯದಿಂದ ಕೂಡಿವೆ.

ಡೆಂಗಿ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ಹಲವು ಕಡೆಗಳಲ್ಲಿ ಫಾಗಿಂಗ್‌ ಯಂತ್ರಗಳು ಕೆಟ್ಟು ಮೂಲೆ ಸೇರಿವೆ. ಈಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ‘ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಫಾಗಿಂಗ್‌ ಯಂತ್ರ ಸರಬರಾಜು ಮಾಡುವಂತೆ’ ಸೂಚಿಸಿದ್ದರು. ಸಿದ್ಧತೆ ಮಾಡಿಕೊಳ್ಳದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಸಚಿವರ ಸೂಚನೆ ನಂತರವೂ ಅಂತಹ ಬೆಳವಣಿಗೆಗಳು ಕಾಣಿಸುತ್ತಿಲ್ಲ ಎಂಬುದು ಜನರ ಆರೋಪವಾಗಿದೆ.

‘ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದ ಕಾರಣಕ್ಕೆ ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿವೆ. ಸ್ಥಳೀಯ ಸಂಸ್ಥೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಮಧ್ಯೆ ಸಮನ್ವಯದ ಕೊರತೆಯಿಂದ ಡೆಂಗಿ ತಡೆಯ ಕೆಲಸ ಪರಿಣಾಮಕಾರಿಯಾಗಿ ಆಗುತ್ತಿಲ್ಲ. ಡೆಂಗಿ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿಲ್ಲ’ ಎಂದು ನಗರದ ನಂಜುಂಡಸ್ವಾಮಿ ಆರೋಪಿಸುತ್ತಾರೆ.

ಜಿಲ್ಲಾಧಿಕಾರಿ ಸಲಹೆ ಕೊಡುತ್ತಿದ್ದಾರೆ. ಅದು ಕಾರ್ಯರೂಪಕ್ಕೆ ಬಂದಿದೆಯೇ? ಎಂಬುದನ್ನು ಗಮನಿಸುತ್ತಿಲ್ಲ. ಸೂಚನೆ ಪಾಲಿಸದವರ ಮೇಲೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕ್ರಮ ಕೈಗೊಂಡು ಚುರುಕು ಮುಟ್ಟಿಸಿದರಷ್ಟೇ ವ್ಯವಸ್ಥೆ ಸರಿಪಡಿಸಲು ಸಾಧ್ಯವಾಗಲಿದೆ’ ಎಂದು ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

ಕಳೆದ ಐದು ವರ್ಷದಲ್ಲಿ ದಾಖಲಾದ ಡೆಂಗಿ ಪ್ರಕರಣ

2020;30

2021;181

2022;187

2023;361

2024;365

ಒಟ್ಟು;1,124

365ಕ್ಕೆ ಏರಿಕೆ ಕಂಡ ಡೆಂಗಿ ಶಿರಾ, ತುಮಕೂರಿನಲ್ಲಿ ಹೆಚ್ಚಳ 103 ಸಕ್ರಿಯ ಪ್ರಕರಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.