ADVERTISEMENT

ತುಮಕೂರು: ಇದ್ದೂ ಇಲ್ಲದಂತಾದ ಅಂಬೇಡ್ಕರ್ ಭವನ

ಹೆಬ್ಬೂರಿನ ಭವನದ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ನಿರ್ಲಕ್ಷ್ಯ, ಗ್ರಾಮಸ್ಥರ ಆಕ್ರೋಶ

ಅನಿಲ್ ಕುಮಾರ್ ಜಿ
Published 29 ಜನವರಿ 2020, 19:45 IST
Last Updated 29 ಜನವರಿ 2020, 19:45 IST
ತುಮಕೂರು ಗ್ರಾಮಾಂತರ ಹೆಬ್ಬೂರಿನಲ್ಲಿ ನಿರ್ಮಿಸಿರುವ ಅಂಬೇಡ್ಕರ್ ಭವನದ ಮುಂದೆ ಬೆಳೆದಿರುವ ಗಿಡಗಂಟಿಗಳು.
ತುಮಕೂರು ಗ್ರಾಮಾಂತರ ಹೆಬ್ಬೂರಿನಲ್ಲಿ ನಿರ್ಮಿಸಿರುವ ಅಂಬೇಡ್ಕರ್ ಭವನದ ಮುಂದೆ ಬೆಳೆದಿರುವ ಗಿಡಗಂಟಿಗಳು.   

ತುಮಕೂರು: ತುಮಕೂರು ಗ್ರಾಮಾಂತರ ಹೆಬ್ಬೂರು ಹೃದಯಭಾಗದಲ್ಲಿ ನಿರ್ಮಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನವೀಗ ನಿರ್ಲಕ್ಷಕ್ಕೆ ಒಳಗಾಗಿದ್ದು, ಇದ್ದೂ ಇಲ್ಲದಂತಾಗಿದೆ.

ಕಳೆದ ಇಪ್ಪತ್ತು ವರ್ಷಗಳ ನಿರಂತರ ಪ್ರಯತ್ನ, ಮನವಿ, ಪ್ರತಿಭಟನೆಯ ಫಲವಾಗಿ ಸಮಾಜ ಕಲ್ಯಾಣ ಇಲಾಖೆಯು ಹೆಬ್ಬೂರಿನಲ್ಲಿ ಅಂಬೇಡ್ಕರ್ ಭವನ ನಿರ್ಮಿಸಿದೆ. ಇದರಿಂದ ಈ ಭಾಗದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ನಂತರದ ದಿನಗಳಲ್ಲಿ ಇಲಾಖೆ, ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ ಹಿನ್ನೆಲೆಯಲ್ಲಿ ಹಾಳುಕೊಂಪೆಯಾಗಿದ್ದು, ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ಉದ್ಘಾಟನೆಗೆ ಸೀಮಿತ: ಈ ಭವನದಲ್ಲಿ ಶೌಚಾಲಯ, ಆಸನ, ಕುಡಿಯುವ ನೀರು, ಆವರಣದಲ್ಲಿ ಬೆಳಕಿನ ವ್ಯವಸ್ಥೆ ಸೇರಿದಂತೆ ಇತರೆ ಮೂಲ ಸೌಲಭ್ಯ ಕಲ್ಪಿಸುವ ಮೊದಲೇ ತರಾತುರಿಯಲ್ಲಿ 2018ರ ಮಾರ್ಚ್‌ 12 ರಂದು ಈ ಭವನವನ್ನು ಉದ್ಘಾಟಿಸಲಾಯಿತು. ಅನಂತರವೂ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಹಾಗಾಗಿ ಭವನ ಉದ್ಘಾಟನೆಯಾಗಿ ಒಂದು ವರ್ಷವಾಗುತ್ತಾ ಬಂದರೂ, ಉದ್ಘಾಟನೆ ಕಾರ್ಯಕ್ರಮ ಹೊರತುಪಡಿಸಿ ಇದುವರೆಗೆ ಯಾವುದೇ ಒಂದು ಕಾರ್ಯಕ್ರಮವೂ ನಡೆದಿಲ್ಲ. ಅಂದಿನಿಂದ ಈವರೆಗೆ ಬಾಗಿಲು ಮುಚ್ಚಿದೆ.

ADVERTISEMENT

ಆರಂಭದಿಂದಲೂ ವಿಘ್ನ: ಈ ಭವನ ಆರಂಭದಿಂದಲೂ ಹಲವು ವಿಘ್ನಗಳನ್ನು ಎದುರಿಸುತ್ತಿದೆ. ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಕೆಲವು ಕಿಡಿಗೇಡಿಗಳು ಶಂಕುಸ್ಥಾಪನೆ ಕಲ್ಲನ್ನು ಮುರಿದು ಹೋಗಿದ್ದರು. ನಂತರ ಭಗೀರಥ ಪ್ರಯತ್ನದಿಂದಾಗಿ ಭವನ ಆಮೆಗತಿಯಲ್ಲಿ ನಿರ್ಮಾಣವಾಯಿತು. ಇದೀಗ ಬಲಾಢ್ಯರು ಭವನದ ಸುತ್ತಲೂ ಅಂಗಡಿಮುಂಗಟ್ಟುಗಳನ್ನು ತೆರೆದಿದ್ದು, ಭವನ ಕಾಣದಂತಾಗಿದೆ.

ಅನೈತಿಕ ತಾಣ: ಸಾರ್ವಜನಿಕರ ಅನುಕೂಲಕ್ಕೆ ಬಳಕೆಯಾಗಬೇಕಿದ್ದ ಭವನ, ಇದೀಗ ಪುಂಡಪೋಕರಿಗಳ ದುರ್ಬಳಕೆಗೆ ಕಾರಣವಾಗಿದೆ. ಆವರಣದೊಳಗೆ ಹೆಜ್ಜೆ ಇಟ್ಟರೇ ಯಾವುದೋ ಹಾಳುಕೊಂಪೆಗೆ ಬಂದಂತೆ ಭಾಸವಾಗುತ್ತದೆ. ಎಲ್ಲೆಂದರಲ್ಲಿ ಬಿದ್ದಿರುವ ಬೀಡಿ, ಸಿಗರೇಟು, ಮದ್ಯದ ಬಾಟಲಿ, ದುರ್ವಾಸನೆ, ಗಿಡಗಂಟಿಗಳು ಬಂದವರನ್ನು ಸ್ವಾಗತಿಸುತ್ತಿವೆ.

ರಾತ್ರಿ ವೇಳೆ ಆವರಣದಲ್ಲಿ ಅನೈತಿಕೆ ಚಟುವಟಿಕೆಗಳು ನಡೆಯುತ್ತಿವೆ. ಹಗಲಲ್ಲಿ ಮೂತ್ರವಿಸರ್ಜನೆ, ಮದ್ಯಪಾನಕ್ಕೆ ಬಳಕೆಯಾಗುತ್ತಿದೆ. ಅಂಗಡಿಮುಂಗಟ್ಟುಗಳ ಮಾಲೀಕರು ಅಕ್ಕಪಕ್ಕದ ಮನೆಯವರು ಅನುಪಯುಕ್ತ ವಸ್ತುಗಳನ್ನು ಭವನದ ಆವರಣದೊಳಗೆ ಬಿಸಾಡುತ್ತಿದ್ದಾರೆ. ಇದರಿಂದ ಭವನದ ಇಡೀ ಆವರಣ ಹಾಳಾಗಿದೆ.

ಮೂಲ ಸೌಲಭ್ಯದ ಕೊರತೆ: ಇಲ್ಲಿ ಕೇವಲ ಹೆಸರಿಗಷ್ಟೇ ಕಟ್ಟಡವಿದೆ. ಆದರೆ, ಭವನದಲ್ಲಿ ಪೀಠೋಪಕರಣ, ಶೌಚಾಲಯ, ಪಾರ್ಕಿಂಗ್ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಸೆಕ್ಯೂರಿಟಿ ವ್ಯವಸ್ಥೆ, ಬೆಳಕಿನ ವ್ಯವಸ್ಥೆ ಇಲ್ಲ. ಇವುಗಳ ವ್ಯವಸ್ಥೆ ಕಲ್ಪಿಸಬೇಕಾದ ಸಮಾಜ ಕಲ್ಯಾಣ ಇಲಾಖೆ ಹಾಗೂ ಜನಪ್ರತಿನಿಧಿಗಳು ಮೌನ ವಹಿಸಿದ್ದಾರೆ.

ಸಮನ್ವಯದ ಕೊರತೆ: ಅಂಬೇಡ್ಕರ್ ಭವನವನ್ನು ಗ್ರಾಮ ಪಂಚಾಯಿತಿಗೆ ಒಪ್ಪಿಸಿದರೇ ಅದನ್ನು ನಿರ್ವಹಿಸಲು ಪಂಚಾಯಿತಿ ಸಿದ್ಧವಿದೆ. ಅದರೆ, ಸಮಾಜ ಕಲ್ಯಾಣ ಇಲಾಖೆ ಈ ಬಗ್ಗೆ ಮೀನಾಮೇಷ ಎಣಿಸುತ್ತಿದೆ. ಮೂಲ ಸೌಲಭ್ಯದ ನೆಪವೊಡ್ಡಿ ಹಿಂದೇಟು ಹಾಕುತ್ತಿದೆ.

ಈ ಬಗ್ಗೆ ಸ್ಥಳೀಯ ಪಂಚಾಯಿತಿಯ ಪಿಡಿಒ ಜಯಂತಿಪ್ರತಿಕ್ರಿಯಿಸಿ, ‘ನಾವು ಈಗಾಗಲೇ ಸಮಾಜ ಕಲ್ಯಾಣ ಇಲಾಖೆಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ, ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲವೆಂದು ಇಲಾಖೆ ನಮ್ಮ ಪಂಚಾಯಿತಿ ವ್ಯಾಪ್ತಿಗೆ ವಹಿಸುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

*
ಅಂಬೇಡ್ಕರ್‌ ಭವನಕ್ಕೆ ಶೀಘ್ರವೇ ಮೂಲ ಸೌಲಭ್ಯ ಕಲ್ಪಿಸಿ ಪ್ರತಿನಿತ್ಯ ಕಾರ್ಯ ನಿರ್ವಹಿಸುವಂತೆ ಕ್ರಮ ವಹಿಸಬೇಕು. ಭವನದಲ್ಲಿ ಗ್ರಂಥಾಲಯದ ತೆರೆದು ಓದುಗರಿಗೆ ಅನುಕೂಲ ಕಲ್ಪಿಸಬೇಕು.
–ಗೋಪಾಲಯ್ಯ, ಗ್ರಾ.ಪಂ ಮಾಜಿ ಸದಸ್ಯ.

*
ಭವನದ ದುಸ್ಥಿತಿಗೆ ಸಮಾಜ ಕಲ್ಯಾಣ ಇಲಾಖೆಯ ನಿರ್ಲಕ್ಷ್ಯವೇ ಕಾರಣ. ಅಧಿಕಾರಿಗಳು ಈ ಬಗ್ಗೆ ಕ್ರಮವಹಿಸಬೇಕು. ಸಾರ್ವಜನಿಕರ ಅನುಕೂಲಕ್ಕಾಗಿ ಭವನ ಶೀಘ್ರವೇ ಕೈಗೆಟುಕುವಂತೆ ಮಾಡಬೇಕು.
–ಶ್ರೀನಿವಾಸ್, ಹೋರಾಟಗಾರ.

*
ಭವನ ನನ್ನ ವಾರ್ಡ್‌ನಲ್ಲೇ ಬರುತ್ತದೆ. ಈಗಾಗಲೇ ನಮ್ಮ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಪಿಡಿಒ ಈಗಾಗಲೇ ಹಲವು ಬಾರಿ ಲಿಖಿತವಾಗಿ, ಮೌಖಿಕವಾಗಿ ಸಮಾಜ ಕಲ್ಯಾಣ ಇಲಾಖೆಗೆ ಮನವಿ ಮಾಡಿದ್ದೇವೆ. ಆದರೂ ಇಲಾಖೆ ಈ ಬಗ್ಗೆ ಮೌನ ವಹಿಸಿದೆ.
–ರಾಘವೇಂದ್ರ, ಗ್ರಾ.ಪಂ ಸದಸ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.