ADVERTISEMENT

ತುಮಕೂರು ಬಿಜೆಪಿಯಲ್ಲಿ ಲಿಂಗಾಯತರಿಗೆ ಮಣೆ: ಆಂತರಿಕ ಬೇಗುದಿ

ಬಿಜೆಪಿಯ ಪರಿಶಿಷ್ಟರು ಹಾಗೂ ಇತರೆ ಹಿಂದುಳಿದ ವರ್ಗಗಳಲ್ಲಿ ಆಕ್ರೋಶ

ಡಿ.ಎಂ.ಕುರ್ಕೆ ಪ್ರಶಾಂತ
Published 29 ಆಗಸ್ಟ್ 2020, 4:00 IST
Last Updated 29 ಆಗಸ್ಟ್ 2020, 4:00 IST
   

ತುಮಕೂರು: ಜಿಲ್ಲಾ ಬಿಜೆಪಿಯಲ್ಲಿ ಲಿಂಗಾಯತ ರಾಜಕಾರಣ ಹೆಚ್ಚಿದಂತೆ ಪಕ್ಷದ ಪರಿಶಿಷ್ಟರು ಹಾಗೂ ಇತರೆ ಹಿಂದುಳಿದ ವರ್ಗಗಳಲ್ಲಿ ಆಂತರಿಕ ಬೇಗುದಿ ಹೆಚ್ಚುತ್ತಿದೆ.

ಬಿಜೆಪಿಯಲ್ಲಿ ಪ್ರಮುಖ ಆಯಕಟ್ಟಿನ ಹುದ್ದೆಗಳು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಪಾಲಾಗಿವೆ. ಪಕ್ಷದಲ್ಲಿ ಪರಿಶಿಷ್ಟರು ಸೇರಿದಂತೆ ಇತರೆ ಸಮುದಾಯಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಇದು ಬಿಜೆಪಿ ಆಂತರಿಕ ವಲಯದಲ್ಲಿ ಚರ್ಚೆಯ ವಸ್ತುವಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಸಂಸದ ಜಿ.ಎಸ್.ಬಸವರಾಜು, ಟೂಡಾ ಅಧ್ಯಕ್ಷ ಬಿ.ಎಸ್.ನಾಗೇಶ್, ತುಮಕೂರು ಜಿಲ್ಲಾ ಕೇಂದ್ರದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸಂತೋಷ್‌ ಲಿಂಗಾಯತ ಸಮುದಾಯದವರು. ಜಿಲ್ಲೆಯಲ್ಲಿ ಒಕ್ಕಲಿಗ, ಬ್ರಾಹ್ಮಣ ಸಮುದಾಯದ ಬಿಜೆಪಿ ಶಾಸಕರು ಇದ್ದಾರೆ. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸುರೇಶ್ ಗೌಡ ಒಕ್ಕಲಿಗರು. ಹೀಗೆ ಜಿಲ್ಲಾ ಬಿಜೆಪಿಯಲ್ಲಿ ನೀತಿ ನಿರ್ಣಯಗಳನ್ನು ಕೈಗೊಳ್ಳುವ ಎಲ್ಲ ಹಂತಗಳಲ್ಲಿಯೂ ಪ್ರಬಲ ಸಮುದಾಯಗಳೇ ಅಗ್ರಗಣ್ಯವಾಗಿವೆ.

ADVERTISEMENT

ರಾಜ್ಯ ಮಟ್ಟದಲ್ಲಿ ಪರಿಶಿಷ್ಟರ ಎಡಗೈ ಸಮುದಾಯದ ಹಲವು ಶಾಸಕರು ಬಿಜೆಪಿಯಲ್ಲಿ ಇದ್ದಾರೆ. ಎಡಗೈ ಸಮುದಾಯ ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಇದೆ. ಆದರೆ ಈ ಸಮುದಾಯದ ಮುಖಂಡರಿಗೂ ಬಿಜೆಪಿ ‘ಶಕ್ತಿ ಕೇಂದ್ರ’ದಲ್ಲಿ ಹೇಳಿಕೊಳ್ಳುವ ಸ್ಥಾನಗಳು ದೊರೆತಿಲ್ಲ. ಟೂಡಾ ಅಧ್ಯಕ್ಷ ಸ್ಥಾನ ನೀಡುವಂತೆ ಎಡಗೈ ಸಮುದಾಯ, ನೇಕಾರ ಸಮುದಾಯ ಸೇರಿದಂತೆ ಇತರೆ ಹಿಂದುಳಿದ ವರ್ಗಗಳು ಆಗ್ರಹಿಸಿದ್ದವು.

ಇತ್ತೀಚೆಗೆ ಜಿಲ್ಲಾ ಮಟ್ಟದಲ್ಲಿ ಬಿಜೆಪಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಲ್ಲಿಯೂ ಸಾಮಾಜಿಕ ನ್ಯಾಯ ಪಾಲಿಸಿಲ್ಲ. ಕೆಲವೇ ಸಮುದಾಯಗಳ ಪ್ರಾಬಲ್ಯ ಹೆಚ್ಚಿದೆ. ಹೊಸಮುಖಗಳಿಗೆ ಅವಕಾಶ ನೀಡಿದ್ದರೂ ಒಂದೇ ಸಮುದಾಯಕ್ಕೆ ಹೆಚ್ಚಿನ ಸ್ಥಾನ ದೊರೆತಿದೆ ಎನ್ನುವ ಆರೋಪ ಇದೆ.

‘ನಮ್ಮ ಸಮುದಾಯವೂ ಜಿಲ್ಲೆಯಲ್ಲಿ ಪ್ರಮುಖವಾಗಿದೆ. ಸಮುದಾಯದ ರಾಮಕೃಷ್ಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಕೆಂಚಮಾರಯ್ಯ ಅವರನ್ನೂ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಬಹುಸಂಖ್ಯಾತ ಸಮುದಾಯವಾದ ಪರಿಶಿಷ್ಟರನ್ನು ಕಡೆಗಣಿಸಿರುವುದು ನಿಜಕ್ಕೂ ಬೇಸರ ತರಿಸಿದೆ’ ಎಂದು ಪರಿಶಿಷ್ಟ ಸಮುದಾಯದ ಬಿಜೆಪಿ ಮುಖಂಡರೊಬ್ಬರು ಅಸಮಾಧಾನ ವ್ಯಕ್ತಪಡಿಸುವರು.

‘ಮುಂದೆ ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗಳು ಇವೆ. ನಮಗೂ ಅಧಿಕಾರ ಕೊಟ್ಟರೆ ಸಮುದಾಯದ ನೌಕರರು, ಅಧಿಕಾರಿಗಳು, ಯುವಕರನ್ನು ಸಂಘಟಿಸಿ ಪಕ್ಷಕ್ಕೆ ಮತಗಳನ್ನು ತರಬಹುದು. ಆದರೆ ಅಧಿಕಾರ ನೀಡದಿದ್ದರೆ ಹೇಗೆ’ ಎಂದು ಪ್ರಶ್ನಿಸಿದರು.

‘ಲಿಂಗಾಯತರು ಬಿಜೆಪಿಯ ಪರಂಪರಾಗತ ಬೆಂಬಲಿಗರು. ಜಿಲ್ಲೆಯಲ್ಲಿ ಪಕ್ಷ ಸದೃಢವಾಗಲು ಈ ಸಮುದಾಯ ಪ್ರಮುಖ ಕಾರಣ. ಅಂದ ಮಾತ್ರಕ್ಕೆ ಒಂದೇ ಸಮುದಾಯವನ್ನು ನೆಚ್ಚಿಕೊಂಡು ರಾಜಕಾರಣ ಮಾಡಲು ಸಾಧ್ಯವಿಲ್ಲ. ಇನ್ನಾದರೂ ಸಾಮಾಜಿಕ ನ್ಯಾಯ ಪಾಲಿಸಬೇಕಾಗಿದೆ. ಎಲ್ಲರನ್ನೂ ಒಗ್ಗಟ್ಟಾಗಿ ಕರೆದುಕೊಂಡು ಹೋಗುವ ಕೆಲಸವನ್ನು ಜಿಲ್ಲಾ ಮಟ್ಟದ ಮುಖಂಡರು ಮಾಡಬೇಕು’ ಎನ್ನುತ್ತಾರೆ ಪಕ್ಷದ ಹಿಂದುಳಿದ ವರ್ಗಗಳ ಮುಖಂಡರೊಬ್ಬರು.

‘ಮುಂದೆ ನಿಗಮ, ಮಂಡಳಿಗಳ ನೇಮಕದಲ್ಲಾದರೂ ಜಿಲ್ಲೆಯ ಹಿಂದುಳಿದ ವರ್ಗಗಳ ನಾಯಕರನ್ನು ಪರಿಗಣಿಸಬೇಕು’ ಎನ್ನುತ್ತಾರೆ.

ತಲುಪದ ಯಾದವರ ಕೂಗು: ಜಿಲ್ಲಾ ಪಂಚಾಯಿತಿಯಲ್ಲಿ ಜೆಡಿಎಸ್, ಬಿಜೆಪಿ ಅಧಿಕಾರ ಹಂಚಿಕೊಂಡಿವೆ. ಆ ಒಪ್ಪಂದದ ಪ್ರಕಾರ ಈಗ
ಬಿಜೆಪಿಗೆ ಅಧ್ಯಕ್ಷ ಸ್ಥಾನ ದೊರೆಯಬೇಕಾಗಿದೆ.

ಬಿಜೆಪಿಯ ಯಾದವ ಸಮುದಾಯದ ಜಿಲ್ಲಾ ಪಂಚಾಯಿತಿ ಸದಸ್ಯರು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಅಧ್ಯಕ್ಷ ಸ್ಥಾನ ಪಡೆಯುವ ವಿಚಾರದಲ್ಲಿ ಬಿಜೆಪಿ ಪ್ರಮುಖ ನಾಯಕರು ಮೌನವಾಗಿದ್ದಾರೆ. ಯಾದವ ಸಮುದಾಯದವರು ಪದೇ ಪದೇ ಸುದ್ದಿಗೋಷ್ಠಿ ಕರೆದು ಅಧ್ಯಕ್ಷ ಸ್ಥಾನಕ್ಕೆ ಆಗ್ರಹಿಸುತ್ತಿದ್ದಾರೆ. ಜಿ.ಪಂ ಅವಧಿಯೇ ಮುಗಿಯುತ್ತ ಬಂದರೂ ಬಿಜೆಪಿ ನಾಯಕರು ಅಧ್ಯಕ್ಷ
ಸ್ಥಾನ ಪಡೆಯುವ ಬಗ್ಗೆ ಮೌನವಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.