ADVERTISEMENT

ತುಮಕೂರು: ಮಕ್ಕಳ ಮಾರಾಟ ಜಾಲ ಪತ್ತೆ– ಏಳು ಮಂದಿ ಬಂಧನ

ಐದು ಮಕ್ಕಳ ರಕ್ಷಣೆ; ಏಳು ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 20:29 IST
Last Updated 27 ಜೂನ್ 2024, 20:29 IST
ಮಕ್ಕಳ ಮಾರಾಟ ಜಾಲದ ಬಂಧಿತ ಆರೋಪಿಗಳು, ಕೃತ್ಯಕ್ಕೆ ಬಳಸಿದ ಕಾರು
ಮಕ್ಕಳ ಮಾರಾಟ ಜಾಲದ ಬಂಧಿತ ಆರೋಪಿಗಳು, ಕೃತ್ಯಕ್ಕೆ ಬಳಸಿದ ಕಾರು   

ತುಮಕೂರು: ಜಿಲ್ಲೆಯಲ್ಲಿ ಸಕ್ರಿಯವಾಗಿದ್ದ ಮಕ್ಕಳ ಮಾರಾಟ ಜಾಲವನ್ನು ಭೇದಿಸಿರುವ ಪೊಲೀಸರು ಐವರು ಮಕ್ಕಳನ್ನು ರಕ್ಷಿಸಿದ್ದಾರೆ. ಆರೋಗ್ಯ ಇಲಾಖೆ ಫಾರ್ಮಾಸಿಸ್ಟ್‌, ಇಬ್ಬರು ಸ್ಟಾಫ್ ನರ್ಸ್ ಸೇರಿದಂತೆ ಮಕ್ಕಳ ಮಾರಾಟ ಜಾಲದ ಏಳು ಮಂದಿಯನ್ನು ಬಂಧಿಸಿದ್ದಾರೆ.

ಮಕ್ಕಳ ಮಾರಾಟ ಜಾಲ ಇನ್ನಷ್ಟು ವಿಸ್ತರಿಸಿರುವ ಸಾಧ್ಯತೆಗಳಿದ್ದು, ಈವರೆಗೆ ಮಾರಾಟ ಮಾಡಿದ್ದ ಒಂಬತ್ತು ಮಕ್ಕಳಲ್ಲಿ ಐವರು 
ಮಕ್ಕಳನ್ನು ರಕ್ಷಿಸಲಾಗಿದೆ. ಉಳಿದ ಮಕ್ಕಳ ಪತ್ತೆಗೆ ಪ್ರಯತ್ನ ಮುಂದುವರಿದಿದೆ.

ಅವಿವಾಹಿತ ಮಹಿಳೆಗೆ ಜನಿಸಿದ ಮಗುವನ್ನು ಪಡೆದುಕೊಂಡು ಅದನ್ನು ಮಧ್ಯವರ್ತಿಗಳ ಮೂಲಕ
₹2 ಲಕ್ಷದಿಂದ ₹3 ಲಕ್ಷದ ವರೆಗೂ ಮಾರಾಟ ಮಾಡುವ ದಂಧೆಯಲ್ಲಿ ಈ ತಂಡ ತೊಡಗಿತ್ತು.

ADVERTISEMENT

ಆರೋಗ್ಯ ಇಲಾಖೆ ಸಿಬ್ಬಂದಿ ಜತೆಗೆ ಸೇರಿಕೊಂಡು ಈ ತಂಡ ದೊಡ್ಡ ಜಾಲವನ್ನೇ ನಿರ್ಮಿಸಿಕೊಂಡು ಮಕ್ಕಳ ಮಾರಾಟದಲ್ಲಿ ಸಕ್ರಿಯವಾಗಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

ಮದುವೆಗೆ ಮುನ್ನ ಹಾಗೂ ಅಕ್ರಮ ಸಂಬಂಧದಿಂದ ಗರ್ಭಿಣಿಯಾದ ಮಹಿಳೆ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗುವ ಸಮಯ ನೋಡಿಕೊಂಡು ಮಗು ಅಗತ್ಯವಿದ್ದ ಮಹಿಳೆಯನ್ನು ಕರೆತಂದು ಅದೇ ಆಸ್ಪತ್ರೆಗೆ ದಾಖಲಿಸಿ
ಕೊಳ್ಳುತ್ತಿದ್ದರು.

ಆ ಮಹಿಳೆಗೆ ಮಗು ಜನಿಸಿದೆ ಎಂಬಂತೆ ಆಸ್ಪತ್ರೆಯಲ್ಲಿ ದಾಖಲೆ ಸೃಷ್ಟಿಸಿ ಅವರ ಹೆಸರಿನಲ್ಲೇ ಜನನ ಪ್ರಮಾಣ ಪತ್ರ ಪಡೆದುಕೊಳ್ಳಲು ನೆರವಾಗುತ್ತಿದ್ದರು. ಮಗು ಪಡೆದುಕೊಂಡ ಪೋಷಕರಿಂದ ಲಕ್ಷಾಂತರ ರೂಪಾಯಿ ಪಡೆದು
ಕೊಳ್ಳುತ್ತಿದ್ದರು.

ಪ್ರಕರಣ ಪತ್ತೆಯಾಗಿದ್ದು ಬಂದದ್ದು ಹೇಗೆ?

ಗುಬ್ಬಿ ಚನ್ನಬಸವೇಶ್ವರ ದೇವಸ್ಥಾನದ ಬಳಿ ಮಹಾದೇವಿ ಎಂಬುವರು ತಮ್ಮ ಕುಟುಂಬದವರ ಜತೆ ಮಲಗಿದ್ದ ಸಮಯದಲ್ಲಿ ಜೂನ್ 9ರಂದು 11 ತಿಂಗಳ ಗಂಡು ಮಗುವನ್ನು ಅಪಹರಿಸಲಾಗಿತ್ತು. ತನಿಖಾ ತಂಡ ಬೆನ್ನು ಹತ್ತಿದ ಸಮಯದಲ್ಲಿ ಕೆ.ಎನ್.ರಾಮಕೃಷ್ಣ ಹನುಮಂತರಾಜು ಸಿಕ್ಕಿ ಬಿದ್ದರು. ಈ ಇಬ್ಬರು ಆರೋಪಿಗಳನ್ನು ವಿಚಾರಣೆ ಮಾಡಿದ ಸಮಯದಲ್ಲಿ ಸತ್ಯಾಂಶ ಬೆಳಕಿಗೆ ಬಂದಿದೆ. ಇದಕ್ಕೆ ಮಧ್ಯವರ್ತಿಯಾಗಿ ತುಮಕೂರಿನ ಯು.ಡಿ.ಮಹೇಶ ಕೆಲಸ ಮಾಡುತ್ತಿದ್ದು ಹುಳಿಯಾರಿನ ಫಾರ್ಮಸಿಸ್ಟ್ ಮಹಬೂಬ್ ಷರೀಫ್ ಸಹಕರಿಸುತ್ತಿದ್ದ. ಷರೀಫ್ ತನ್ನ ಪತ್ನಿ ಹೆಸರಿನಲ್ಲಿ ಹುಳಿಯಾರಿನಲ್ಲಿ ಖಾಸಗಿ ಆಸ್ಪತ್ರೆ ನಡೆಸುತ್ತಿದ್ದಾರೆ. ಅಲ್ಲೇ ಹೆರಿಗೆ ಮಾಡಿಸಿ ಮಕ್ಕಳನ್ನು ಮಾರಾಟ ಮಾಡಲಾಗುತಿತ್ತು. ಬೆಳ್ಳೂರು ಕ್ರಾಸ್ ಹುಳಿಯಾರು ಹಾಸನ ಜಿಲ್ಲೆ ಸಾಣೆಹಳ್ಳಿ ಬೆಂಗಳೂರಿನ ಸಿಂಗಾಪುರ ಲೇಔಟ್ ಮಧುಗಿರಿ ತಾಲ್ಲೂಕು ಎಸ್.ಎಂ.ಗೊಲ್ಲಹಳ್ಳಿಯ ಜನರಿಗೆ ಮಕ್ಕಳನ್ನು ಮಾರಾಟ ಮಾಡಿದ್ದರು.

ಬಂಧಿತ ಆರೋಪಿಗಳು

ನಗರದ ಶೆಟ್ಟಿಹಳ್ಳಿಗೇಟ್‌ನಲ್ಲಿರುವ ನರ್ಸಿಂಗ್ ಕಾಲೇಜು ವ್ಯವಸ್ಥಾಪಕ (ಕುಣಿಗಲ್ ತಾಲ್ಲೂಕು ಉಜ್ಜನಿ ಗ್ರಾಮ) ಯು.ಡಿ.ಮಹೇಶ (39) ಚಿಕ್ಕನಾಯಕನಹಳ್ಳಿ ತಾಲ್ಲೂಕು ಗೂಬೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಫಾರ್ಮಾ ಸಿಸ್ಟ್ ಹುಳಿಯಾರಿನ ಮಹಬೂಬ್ ಷರೀಫ್ (52) ಮಧುಗಿರಿ ತಾಲ್ಲೂಕು ದೊಡ್ಡೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಗುತ್ತಿಗೆ ಸ್ಟಾಫ್ ನರ್ಸ್ ಪೂರ್ಣಿಮಾ (39) ಶಿರಾ ಆಸ್ಪತ್ರೆ ಗುತ್ತಿಗೆ ಸ್ಟಾಫ್ ನರ್ಸ್ ಸೌಜನ್ಯ (48) ಅವರನ್ನು ಬಂಧಿಸಲಾಗಿದೆ. ಜಾತ್ರೆಗಳಲ್ಲಿ ಟ್ಯಾಟೂ ಬರೆಯುವ ಗುಬ್ಬಿ ತಾಲ್ಲೂಕು ಬಿಕ್ಕೇಗುಡ್ಡ ಗ್ರಾಮದ ಕೆ.ಎನ್.ರಾಮಕೃಷ್ಣಪ್ಪ (53) ತುಮಕೂರಿನ ಭಾರತಿನಗರದ ಹನುಮಂತರಾಜು (45) ಮಗು ಖರೀದಿಸಿದ್ದ ನಾಗಮಂಗಲ ತಾಲ್ಲೂಕು ಬೆಳ್ಳೂರು ಕ್ರಾಸ್ ಆಟೊ ಚಾಲಕ ಮುಬಾರಕ್ ಪಾಷಾ (44) ಅವರನ್ನೂ ಪೊಲೀಸರು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.