ADVERTISEMENT

ತುಮಕೂರು ಡಿಸಿಸಿ ಬ್ಯಾಂಕ್ ಸೂಪರ್ ಸೀಡ್

​ಪ್ರಜಾವಾಣಿ ವಾರ್ತೆ
Published 20 ಜುಲೈ 2019, 19:07 IST
Last Updated 20 ಜುಲೈ 2019, 19:07 IST

ತುಮಕೂರು: ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ (ಡಿಸಿಸಿ) ಅನ್ನು ರಾಜ್ಯ ಸರ್ಕಾರ ಸೂಪರ್ ಸೀಡ್ ಮಾಡಿದೆ. ಬ್ಯಾಂಕಿನ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಅವರು ಶನಿವಾರ ರಾತ್ರಿ ಅಧಿಕಾರ ವಹಿಸಿಕೊಂಡರು.

ಸೂಪರ್ ಸೀಡ್ ಹಿನ್ನೆಲೆಯಲ್ಲಿ ಸಂಜೆ 5ರ ಬಳಿಕ ಬ್ಯಾಂಕಿಗೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಡಿಸಿಸಿ ಬ್ಯಾಂಕ್ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಕುಬೇರ್‌ನಾಯ್ಕ್ ಜಿಲ್ಲಾಧಿಕಾರಿ ಅವರಿಗೆ ಅಧಿಕಾರವಹಿಸಿಕೊಟ್ಟರು.

ರಾಜಕೀಯ ಸೇಡು?: 2003ರಿಂದ ಮಾಜಿ ಶಾಸಕ ಕೆ.ಎನ್.ರಾಜಣ್ಣ ಸತತವಾಗಿ 5 ಬಾರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಆರ್.ಶ್ರೀನಿವಾಸ್ ಉಪಾಧ್ಯಕ್ಷರಾಗಿದ್ದರೂ ರಾಜಣ್ಣ ಬ್ಯಾಂಕ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದಾರೆ. ರಾಜಣ್ಣ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರು ಸಹ ಆಗಿದ್ದಾರೆ.

ADVERTISEMENT

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಸ್ಪರ್ಧೆಗೆ ರಾಜಣ್ಣ ಆರಂಭದಿಂದಲೂ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ರಾಜಣ್ಣ ಪ್ರತಿನಿಧಿಸುತ್ತಿದ್ದ ಮಧುಗಿರಿ ಕ್ಷೇತ್ರದಲ್ಲಿ ಬಿಜೆಪಿಗೆ ಲೀಡ್ ದೊರೆತಿತ್ತು.

ಅಲ್ಲದೆ ಮೈತ್ರಿ ಸರ್ಕಾರದ ವಿರುದ್ಧ ಪದೇ ಪದೇ ಬಹಿರಂಗವಾಗಿ ತೀವ್ರ ಟೀಕಾಪ್ರಹಾರ ನಡೆಸುತ್ತಿದ್ದರು. ಬ್ಯಾಂಕ್ ಸೂಪರ್ ಸೀಡ್ ಮಾಡುವ ಮೂಲಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಂದೆಯ ಸೋಲಿಗೆ ಸೇಡು ತೀರಿಸಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಡಾ.ಪರಮೇಶ್ವರ ಕಾರಣ- ರಾಜಣ್ಣ ಆರೋಪ: 'ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಆಗಿರುವುದಕ್ಕೆ ಡಾ.ಜಿ. ಪರಮೇಶ್ವರ ಕಾರಣವಾಗಿದ್ದು, ಇದೇನು ಹೊಸದಲ್ಲ. 2004ರಲ್ಲೂ ಇದೇ ರೀತಿ ಆಗಿತ್ತು. ಕಾನೂನು ಹೋರಾಟ ಮಾಡಿ ಮತ್ತೆ 15 ದಿನದಲ್ಲಿ ಡಿಸಿಸಿ ಬ್ಯಾಂಕಿಗೆ ನಾನೇ ಅಧ್ಯಕ್ಷನಾಗುತ್ತೇನೆ' ಎಂದು ಬ್ಯಾಂಕಿನ ಅಧ್ಯಕ್ಷ ಕೆ.ಎನ್.ರಾಜಣ್ಣ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

’ಪರಮೇಶ್ವರ ಅವರಿಗೆ ಬ್ಯಾಂಕಿನ ಮೂಲಕ ರೈತರು, ಬಡವರು, ಸ್ವಸಹಾಯ ಸಂಘಗಳಿಗೆ ಅನುಕೂಲ ಮಾಡಿಕೊಡುವುದು ಬೇಕಾಗಿಲ್ಲ. ಎರಡು ದಿನದಲ್ಲಿ ಸರ್ಕಾರವೇ ಬಿದ್ದು ಹೋಗುತ್ತದೆ. ಇಂಥದ್ದರಲ್ಲೂ ರಾಜಕೀಯ ವೈಷಮ್ಯದಿಂದ ಬ್ಯಾಂಕ್ ಸೂಪರ್ ಸೀಡ್‌ಗೆ ಆದೇಶ ಮಾಡಲಾಗಿದೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.