ADVERTISEMENT

ರಾಜಕೀಯ ಸೇಡಿನಿಂದ ಬ್ಯಾಂಕ್ ಸೂಪರ್‌ಸೀಡ್: ದೇವೇಗೌಡ ವಿರುದ್ಧ ರಾಜಣ್ಣ ಆರೋಪ

ಒಂದು ವಾರದಲ್ಲಿ ಮತ್ತೆ ಅಧ್ಯಕ್ಷನಾಗುವೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2019, 7:01 IST
Last Updated 21 ಜುಲೈ 2019, 7:01 IST
   

ತುಮಕೂರು: ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಸೋತ ನಂತರನನ್ನ ಮೇಲೆರಾಜಕೀಯವೈಷಮ್ಯ ಸಾಧಿಸುತ್ತಿದ್ದಾರೆ. ಇದೇ ಕಾರಣಕ್ಕೆ ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಮಾಡಲಾಗಿದೆ. ಇಂಥರಾಜಕೀಯ ಪ್ರೇರಿತ ಕ್ರಮಗಳನ್ನು ರಾಜಕೀಯವಾಗಿಯೇ ಎದುರಿಸುತ್ತೇನೆ.ಒಂದು ವಾರದೊಳಗೆ ಮತ್ತೆ ಅಧ್ಯಕ್ಷನಾಗುತ್ತೇನೆ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಬ್ಯಾಂಕ್ ನಲ್ಲಿ ನಾನುಅವ್ಯವಹಾರ ಮಾಡಿಲ್ಲ. ರೈತರಿಗೆ, ಬಡವರಿಗೆ, ಸ್ವಸಹಾಯ ಸಂಘಗಳು, ವ್ಯವಸಾಯ ಸೇವಾ ಸಹಕಾರ ಸಂಸ್ಥೆಗಳಿಗೆ ಸಹಾಯ ಮಾಡಲು ಸ್ವಲ್ಪ ನಿಯಮ ಮೀರಿರಬಹುದು. 2003ರಲ್ಲಿ ನಾನು ಅಧ್ಯಕ್ಷನಾಗಿದ್ದಾಗ ಕೇವಲ ₹3 ಕೋಟಿ ಠೇವಣಿಇತ್ತು. ಈಗ ಸಾವಿರ ಕೋಟಿ ಇದೆ. ಸರ್ಕಾರದ ಒಂದು ನಯಾಪೈಸೆಯೂ ಇಲ್ಲ. ರಾಜಕೀಯವಾಗಿ ನನ್ನ ಎದುರಾಳಿಗಳದವರದ್ದೂ ಇಲ್ಲ’ ಎಂದರು.

ADVERTISEMENT

ಅಧ್ಯಕ್ಷನಾದ ನನ್ನ ಮೇಲೆ ಮತ್ತು ಇತರ ನಿರ್ದೇಶಕರ ಮೇಲೆ ನಂಬಿಕೆ ಇಟ್ಟು ಜನರು ಠೇವಣಿ ಇಟ್ಟಿದ್ದಾರೆ. ಇದನ್ನು ಸಹಿಸದೇ ರಾಜಕೀಯ ವೈಷಮ್ಯಕ್ಕೆ ಡಾ.ಜಿ.ಪರಮೇಶ್ವರ ಮತ್ತುದೇವೇಗೌಡರ ಕುಟುಂಬ ಬ್ಯಾಂಕನ್ನುಸೂಪರ್ ಸೀಡ್ ಮಾಡಿದೆ. ನನಗಾಗಲಿ, ನಿರ್ದೇಶಕರಿಗಾಗಲಿ ಯಾವುದೇ ನೊಟೀಸ್ ಕೊಟ್ಟಿಲ್ಲ.ಬಡಪಾಯಿ ಅಧಿಕಾರಿಗಳಿಂದ ಆದೇಶ ಮಾಡಿಸಿದ್ದಾರೆ. ರಾಜಕೀಯ ಹಗೆತನಕ್ಕೆ ಇದಕ್ಕಿಂತ ಬೇರೆ ಸಾಕ್ಷ್ಯಬೇಕೆ ಎಂದು ಹರಿಹಾಯ್ದರು.

ನಾನು ಬ್ಯಾಂಕಿನ ಅಧ್ಯಕ್ಷನಾಗಿ ಎಂದಿಗೂ ರಾಜಕೀಯ ಮಾಡಿಲ್ಲ. ಜಾತಿ, ಪಕ್ಷದ ಆಧಾರದ ಮೇಲೆ ತಾರತಮ್ಯ ಮಾಡಿಲ್ಲ. ಎಲ್ಲರಿಗೂ ಸಾಲ ಕೊಡಲಾಗಿದೆ. ಪತ್ರಿಕೆಗಳಿಗೆ ಜಾಹೀರಾತು ಹಾಕಿ ಸಾಲ ಪಡೆಯಲು ರೈತರಿಗೆ ಮನವಿ ಮಾಡಿದ್ದೆವು. ‘ಸಾಲ ತೆಗೆದುಕೊಳ್ಳಿ’ ಎಂದು ರೈತರಿಗೆರಾಜ್ಯದ ಯಾವುದೇ ಡಿಸಿಸಿ ಬ್ಯಾಂಕ್ ಮನವಿ ಮಾಡಿರಲಿಲ್ಲ’ ಎಂದರು.

‘ನನ್ನ ಮೇಲಿನ ರಾಜಕೀಯ ದ್ವೇಷದಿಂದ ಇತರ ನಿರ್ದೇಶಕರಿಗೆ ಮತ್ತು ರೈತರಿಗೆ ಸರ್ಕಾರ ತೊಂದರೆ ಕೊಡುತ್ತಿದೆ.ನಾವಿದ್ದರೆ ರೈತರಿಗೆ ಸಾಲ ಕೊಡಬಹುದು.ರೈತರು ಈಗ ಕಷ್ಟದಲ್ಲಿದ್ದಾರೆ. ಸರ್ಕಾರ ಬಂದು ಸಾಲ ಕೊಡುತ್ತದೆಯೇ?’ ಎಂದು ಪ್ರಶ್ನಿಸಿದರು.

ಅಧಿಕಾರಿಗಳಿಗೆ ಸೂಚನೆ: ಬ್ಯಾಂಕಿನ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಜಿಲ್ಲಾಧಿಕಾರಿಗೆ ಎಲ್ಲ ರೀತಿಯ ಸಹಕಾರ ನೀಡಿ ಎಂದು ಹೇಳಿದ್ದೇನೆ. ಈ ಸರ್ಕಾರಸೋಮವಾರ ಹೋದರೆ ಗುರುವಾರದ ಹೊತ್ತಿಗೆಮತ್ತೊಂದು ಆದೇಶ ತಂದು ಮತ್ತೆ ನಾನೇ ಅಧ್ಯಕ್ಷನಾಗುತ್ತೇನೆ ಎಂದು ಆತ್ಮವಿಶ್ವಾಸ ಪ್ರದರ್ಶಿಸಿದರು.

ಬ್ಯಾಂಕಿಂಗ್ ನಿಯಮಾವಳಿ ಪ್ರಕಾರ ಸೂಪರ್‌ಸೂಡ್ ಮಾಡಲು ಸರ್ಕಾರಕ್ಕೆಯಾವುದೇ ಅಧಿಕಾರ ಇಲ್ಲ. ಸರ್ಕಾರದ ಒಂದು ರೂಪಾಯಿ ಠೇವಣಿಯೂ ಬ್ಯಾಂಕಿನಲ್ಲಿ ಇಲ್ಲ.ಕಾನೂನು ರೀತಿ ಹೋರಾಟ ಮಾಡುತ್ತೇನೆ ಎಂದರು.ದೇವೇಗೌಡರ ಸೋಲು ಈ ಆದೇಶಕ್ಕೆ ಕಾರಣ ಎಂಬುದು ಸ್ಪಷ್ಟವಾಗಿದೆ ಎಂದರು.

ನನ್ನ ಬೆಂಬಲಿಗರು, ಅಭಿಮಾನಿಗಳು, ರೈತರು ಬೀದಿಗಿಳಿದು ಪ್ರತಿಭಟನೆ ಮಾಡಬಾರದು.ಬ್ಯಾಂಕಿನ ಸಿಬ್ಬಂದಿ ಒಂದು ಗಂಟೆ ಹೆಚ್ಚು ಕೆಲಸ ಮಾಡಿ ವಿನೂತನ ರೀತಿ ಪ್ರತಿಭಟನೆ ಮಾಡಲಿ ಎಂದು ಮನವಿ ಮಾಡಿದ್ದೇನೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.