ADVERTISEMENT

ತುಮಕೂರು | ‘ಐಸಿಯು’ನಲ್ಲಿ ಜಿಲ್ಲಾ ಆಸ್ಪತ್ರೆ! ಸಾರ್ವಜನಿಕರಿಗೆ ಸಿಗದ ಆರೋಗ್ಯ ಸೇವೆ

ದೊಡ್ಡಾಸ್ಪತ್ರೆಗೆ ಬೇಕಿದೆ ತುರ್ತು ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2024, 6:59 IST
Last Updated 6 ಏಪ್ರಿಲ್ 2024, 6:59 IST
ತುಮಕೂರು ಜಿಲ್ಲಾ ಆಸ್ಪತ್ರೆ
ತುಮಕೂರು ಜಿಲ್ಲಾ ಆಸ್ಪತ್ರೆ   

ತುಮಕೂರು: ಏ. 3ರಂದು ಸಂಜೆ 5 ಗಂಟೆಗೆ ರಂಗನಾಥಪ್ಪ ಎಂಬುವರನ್ನು ಖಾಸಗಿ ಆಸ್ಪತ್ರೆಯಿಂದ ಜಿಲ್ಲಾ ಆಸ್ಪತ್ರೆಯ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿತ್ತು. ಅದೇ ದಿನ ಅವರನ್ನು ಅಲ್ಲಿಂದ 200 ಮೀಟರ್‌ ದೂರದಲ್ಲಿರುವ ಜನರಲ್‌ ವಾರ್ಡ್‌ಗೆ ಶಿಫ್ಟ್ ಮಾಡಲು ಆಂಬುಲೆನ್ಸ್‌ ಇರಲಿಲ್ಲ. ಖಾಸಗಿ ಆಂಬುಲೆನ್ಸ್‌ಗೆ ₹300 ಕೊಟ್ಟು ವಾರ್ಡ್‌ಗೆ ಸ್ಥಳಾಂತರಿಸಿದರು.

ವೈದ್ಯರು ಅವರನ್ನು ಪರೀಕ್ಷಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದರು. ಆಗಲೂ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಹಿತ ಆಂಬುಲೆನ್ಸ್‌ ಸಿಗಲಿಲ್ಲ. ರಾತ್ರಿ 8 ಗಂಟೆಯಾದರೂ ಆಂಬುಲೆನ್ಸ್‌ ಬರಲಿಲ್ಲ. ಕೊನೆಗೆ ₹6 ಸಾವಿರ ಕೊಟ್ಟು ಖಾಸಗಿ ಆಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗಲಾಯಿತು.

ಫೆ. 5ರಂದು ಶಿರಾ ತಾಲ್ಲೂಕಿನ ಗೋಪಿಕುಂಟೆ ಗ್ರಾಮದ ನಿವಾಸಿ ರಾಜಣ್ಣ (37) ತಮ್ಮ ಮನೆಯಲ್ಲಿ ಬಿದ್ದು, ಗಾಯಗೊಂಡಿದ್ದರು. ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆತರಲಾಗಿತ್ತು. ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗುವಾಗ ನಗರದ ಬಿಜಿಎಸ್ ವೃತ್ತದಲ್ಲಿ ಆಂಬುಲೆನ್ಸ್ ಅಪಘಾತವಾಗಿ ರಾಜಣ್ಣ ಮೃತಪಟ್ಟರು.

ADVERTISEMENT

ಜಿಲ್ಲಾ ಆಸ್ಪತ್ರೆಯಲ್ಲಿ ಇಂತಹ ಘಟನೆಗಳು ದಿನಕ್ಕೆ ಹತ್ತಾರು ನಡೆಯುತ್ತವೆ. ಆಸ್ಪತ್ರೆಯ ದುಸ್ಥಿತಿಗೆ ಇವೆರಡು ಇತ್ತೀಚೆಗಿನ ನಿದರ್ಶನಗಳು. ದೊಡ್ಡಾಸ್ಪತ್ರೆಯಲ್ಲಿ ಒಳ್ಳೆಯ ವೈದ್ಯರು ಇರುತ್ತಾರೆ. ಗುಣಮಟ್ಟದ ಚಿಕಿತ್ಸೆ ದೊರೆಯುತ್ತದೆ ಎಂದು ಇಲ್ಲಿಗೆ ಬಂದವರು ‘ಬಂದ ದಾರಿಗೆ ಸುಂಕವಿಲ್ಲ’ ಎಂಬಂತೆ ಬೆಂಗಳೂರಿನ ಕಡೆ ಹೋಗುತ್ತಿದ್ದಾರೆ. ಜಿಲ್ಲಾ ಆಸ್ಪತ್ರೆ ಒಂದು ರೀತಿಯಲ್ಲಿ ‘ಅಂಚೆ ಕಚೇರಿ’ಯಂತಾಗಿದೆ.

ಚಿಕಿತ್ಸೆಗೆ ಬಂದವರನ್ನು‌ ಮುಂದಿನ ಆಸ್ಪತ್ರೆಗೆ ಕಳುಹಿಸುವುದೇ ಇಲ್ಲಿನ ವೈದ್ಯರ ನಿತ್ಯ ಕಾಯಕವಾಗಿದೆ. ತುರ್ತು ಸಮಯಕ್ಕೆ ಚಿಕಿತ್ಸೆ ಸಿಗದೆ ಮಾರ್ಗ ಮಧ್ಯೆ ಹಲವಾರು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಜಿಲ್ಲಾ ಕೇಂದ್ರದಲ್ಲಿರುವ ಆಸ್ಪತ್ರೆಯೇ ಹೀಗಾದರೆ, ತಾಲ್ಲೂಕು, ಗ್ರಾಮಾಂತರ ಭಾಗದಲ್ಲಿರುವ ಆಸ್ಪತ್ರೆಗಳ ಕಥೆ ಹೇಗಾಗಿರಬೇಡ ಎಂದು ಒಮ್ಮೆ ಯೋಚಿಸಬೇಕಿದೆ.

‘ಜಿಲ್ಲಾ ಆಸ್ಪತ್ರೆಯಲ್ಲಿ ರಾತ್ರಿ 7 ಗಂಟೆಯಾದರೆ ವೈದ್ಯರು ಇರುವುದಿಲ್ಲ, ಬೆಳಗ್ಗೆ 11 ಗಂಟೆಯಾದರೂ ವೈದ್ಯರು ಬರುವುದಿಲ್ಲ. ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯಗಳಿಲ್ಲ. ಇಂತಹ ದುಃಸ್ಥಿತಿಯಲ್ಲಿ ಆಸ್ಪತ್ರೆ ನಡೆಯುತ್ತಿದೆ. ರಾತ್ರಿಯಾದರೆ ವೈದ್ಯರೇ ಸಿಗಲ್ಲ. ಹೊತ್ತಿಲ್ಲದ ಹೊತ್ತಿನಲ್ಲಿ ಆಸ್ಪತ್ರೆಗೆ ಬಂದರೆ ದೇವರೇ ಗತಿ’ ಎನ್ನುತ್ತಾರೆ ತುರುವೇಕೆರೆ ರಮೇಶ್‌.

ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ಅರ್ಧದಷ್ಟು ಹುದ್ದೆಗಳು ಖಾಲಿ ಇವೆ. ನುರಿತ ವೈದ್ಯರು, ಫಾರ್ಮಾಸಿಸ್ಟ್‌, ಶುಶ್ರೂಷಕಿ, ಗ್ರೂಪ್‌ ಡಿ ಸೇರಿದಂತೆ ಹಲವಾರು ಹುದ್ದೆಗಳು ಭರ್ತಿಯಾಗಬೇಕಿದೆ. ಆಸ್ಪತ್ರೆಯಲ್ಲಿ ಹಲವಾರು ಕಟ್ಟಡಗಳು ತಲೆ‌ ಎತ್ತುತ್ತಿವೆ. ಆದರೆ ಅವುಗಳಲ್ಲಿ ಕೆಲಸ ಮಾಡಲು ಬೇಕಾದ ಸಿಬ್ಬಂದಿ ನೇಮಿಸಿಲ್ಲ. ನೇಮಕಗೊಂಡವರು ಕೆಲಸ ಮಾಡುತ್ತಿಲ್ಲ. ಕೊನೆಗೆ ರೋಗಿಗಳಿಗೆ ಚಿಕಿತ್ಸೆ ಸಿಗದೆ ಖಾಸಗಿ ಆಸ್ಪತ್ರೆ ಕಡೆಗೆ ಹೋಗುವುದು ತಪ್ಪಿಲ್ಲ. ಆರೋಗ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ಆಸ್ಪತ್ರೆ ‘ಉದ್ಧಾರ’ದ ಮಾತುಗಳನ್ನು ಆಡುತ್ತಲೇ ಇರುತ್ತಾರೆ. ವಾಸ್ತವ ಮಾತ್ರ ಅರಿವೆ ಬರುವುದಿಲ್ಲ. ಜಿಲ್ಲಾಧಿಕಾರಿ ಉಸ್ತುವಾರಿಯಲ್ಲೇ ಜಿಲ್ಲಾ ಆಸ್ಪತ್ರೆ ನಡೆಯುತ್ತಿದ್ದರೂ ಅವರು ಅತ್ತ ತಿರುಗಿಯೂ ನೋಡುವುದಿಲ್ಲ.

‘ಜನಪ್ರತಿನಿಧಿಗಳಿಗೆ ತಮ್ಮ ಮಾಲೀಕತ್ವದ ಖಾಸಗಿ ಆಸ್ಪತ್ರೆಗಳ ಮೇಲೆ ಮೋಹ. ವೈದ್ಯರಿಗೆ ತಮ್ಮ ಕ್ಲಿನಿಕ್‌, ಖಾಸಗಿ ಆಸ್ಪತ್ರೆಗಳದ್ದೇ ಚಿಂತೆ. ಇದರ ಮಧ್ಯೆ ಬಡ ಜನರು ಹೆಚ್ಚಾಗಿ ಬರುವ ಜಿಲ್ಲಾ ಆಸ್ಪತ್ರೆ ಯಾರಿಗೂ ಬೇಡವಾಗಿದೆ’ ಎಂದು ನಗರದ ನಿವಾಸಿ ರಾಮಚಂದ್ರ ಅಸಮಾಧಾನ ವ್ಯಕ್ತಪಡಿಸಿದರು.

ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿರುವ ಅಪಘಾತ ಚಿಕಿತ್ಸಾ ಕೇಂದ್ರ (ಟ್ರಾಮಾ ಸೆಂಟರ್‌)
ಟ್ರಾಮಾ ಸೆಂಟರ್‌ನ ಶೌಚಾಲಯಕ್ಕೆ ಬೀಗ ಹಾಕಿರುವುದು
‘ಹೊರಗೆ ತಳಕು ಒಳಗೆ ಹುಳುಕು’
ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ಅಪಘಾತ ಚಿಕಿತ್ಸಾ ಕೇಂದ್ರವನ್ನು (ಟ್ರಾಮಾ ಸೆಂಟರ್‌) ಈವರೆಗೆ ಪೂರ್ತಿಯಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ನೆಲಮಹಡಿ ಬಿಟ್ಟರೆ ಉಳಿದ ಎರಡು ಮಹಡಿಗಳಲ್ಲಿ ಅಷ್ಟಾಗಿ ಕೆಲಸ ನಡೆಯುತ್ತಿಲ್ಲ. ಉದ್ಘಾಟನೆಯಾಗಿ ವರ್ಷ ಕಳೆದರೂ ಇನ್ನೂ ಸುಧಾರಣೆ ಕಂಡಿಲ್ಲ. ವೈದ್ಯರ ಕೊಠಡಿಗಳು ಶೌಚಾಲಯಗಳಿಗೆ ಹಾಕಿರುವ ಬೀಗ ತೆಗೆದಿಲ್ಲ. ನೆಲಮಹಡಿಯಲ್ಲಿ ಒಂದೇ ಒಂದು ಶೌಚಾಲಯ ಇದ್ದು ಎಲ್ಲರೂ ಅದನ್ನೇ ಬಳಸುತ್ತಿದ್ದಾರೆ. ಶೌಚಾಲಯಕ್ಕೆ ಎರಡನೇ ಮಹಡಿಯಿಂದ ಕೆಳಗಡೆಗೆ ಬರಬೇಕಿದೆ. ಇದರಿಂದ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಆಯಾ ಮಹಡಿಯಲ್ಲಿಯೇ ಶೌಚಾಲಯಗಳು ಇದ್ದರೂ ಅವುಗಳಿಗೆ ಬೀಗ ಜಡಿಯಲಾಗಿದೆ. ಟ್ರಾಮಾ ಸೆಂಟರ್‌ಗೆ ದಿನಕ್ಕೆ ನೂರಾರು ರೋಗಿಗಳು ಬರುತ್ತಿದ್ದಾರೆ. ತುರ್ತು ಸಮಯದಲ್ಲಿ ಅಗತ್ಯ ಚಿಕಿತ್ಸೆ ನೀಡುವ ಉದ್ದೇಶದಿಂದ ಚಿಕಿತ್ಸಾ ಕೇಂದ್ರ ಆರಂಭಿಸಲಾಗಿತ್ತು. ಪ್ರಸ್ತುತ ಕೇಂದ್ರದಲ್ಲಿ ಚಿಕಿತ್ಸೆ ನೀಡುವ ಬದಲಾಗಿ ಗಾಯಾಳುಗಳಿಗೆ ಬ್ಯಾಂಡೇಜ್‌ ಹಾಕಿ ಮುಂದಿನ ಆಸ್ಪತ್ರೆ ಕಳುಹಿಸುತ್ತಿದ್ದಾರೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಟ್ರಾಮಾ ಸೆಂಟರ್ ಜಿಲ್ಲೆಯ ಜನರ ನೆರವಿಗೆ ಬರುತ್ತಿಲ್ಲ. ಚಿಕಿತ್ಸೆ ಕೊಡಲು ಸಾಧ್ಯವಾಗದಿದ್ದರೆ ಇಷ್ಟೊಂದು ಹಣ ವೆಚ್ಚ ಮಾಡುವ ಅಗತ್ಯವೇನಿತ್ತು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಖಾಸಗಿ ಆಸ್ಪತ್ರೆ ‘ಕಾಸಿಗಾಗಿ’

‘ಸಾರ್ವಜನಿಕರಿಗೆ ಉಚಿತವಾಗಿ ಆರೋಗ್ಯ ಸೇವೆ ನೀಡುತ್ತೇವೆ’ ಎಂಬ ಮುಖವಾಡ ಧರಿಸಿ ಬರುವ ಎಲ್ಲ ಆಸ್ಪತ್ರೆಗಳು ರೋಗಿಗಳಿಂದ ಹಣ ಪೀಕುತ್ತಿವೆ. ಆಕ್ಸಿಜನ್ ರಕ್ತ ವೆಂಟಿಲೇಟರ್ ಐಸಿಯು ವಾರ್ಡ್ ಹೆಸರಿನಲ್ಲಿ ಲಕ್ಷ‌ ಲಕ್ಷ ಹಣ ಕೀಳುತ್ತಿವೆ. ಖಾಸಗಿ ಆಸ್ಪತ್ರೆಗೆ ದಾಖಲಾಗಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡು ಜೀವ ಉಳಿಸಿಕೊಳ್ಳಲು ಆಗದೆ ಬರಿಗೈನಲ್ಲಿ ವಾಪಸ್ಸಾದ ಹಲವು ಉದಾಹರಣೆಗಳು ನಮ್ಮ ಮುಂದಿವೆ. ಖಾಸಗಿ ಆಸ್ಪತ್ರೆಗೆ ಹೋಗಲು ಆರ್ಥಿಕವಾಗಿ ಶಕ್ತಿ ಇಲ್ಲದವರು ಸರ್ಕಾರಿ ಆಸ್ಪತ್ರೆಗಳಿಗೆ ಬರುತ್ತಾರೆ. ಅಲ್ಲಿಯೂ ಸರಿಯಾದ ಚಿಕಿತ್ಸೆ ಸಿಗದಿದ್ದರೆ ಇನ್ನೆಲ್ಲಿಗೆ ಹೋಗಬೇಕು? ಎಂದು ಮಧುಗಿರಿಯ ರಾಜಪ್ಪ ಪ್ರಶ್ನಿಸಿದರು.

ಆಂಬುಲೆನ್ಸ್ ದಂಧೆ
‘ಜಿಲ್ಲೆಗೆ ಅಗತ್ಯವಾಗಿ ಬೇಕಾದ‌ ಆಂಬುಲೆನ್ಸ್‌ಗಳಿವೆ. ಯಾವುದೇ ತೊಂದರೆ ಇಲ್ಲ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಡಿ.ಎನ್.ಮಂಜುನಾಥ್ ಹೇಳುತ್ತಾರೆ. ವಾಸ್ತವದ ಚಿತ್ರಣ ಅವರ ಗಮನಕ್ಕೆ ಬಂದಂತೆ ಕಾಣುತ್ತಿಲ್ಲ. ಕನಿಷ್ಠ ಮೃತದೇಹ ಸಾಗಿಸಲು ಆಂಬುಲೆನ್ಸ್‌ ಸಿಗದೆ ಖಾಸಗಿ ಆಂಬುಲೆನ್ಸ್ ಮೊರೆ ಹೋಗುತ್ತಿದ್ದಾರೆ. ಖಾಸಗಿ ಆಂಬುಲೆನ್ಸ್‌ಗಳು ಜಿಲ್ಲಾ ಆಸ್ಪತ್ರೆಯ ಆವರಣವನ್ನು ಅಡ್ಡಾ ಮಾಡಿಕೊಂಡಿವೆ. ಇವುಗಳಿಗೆ ಯಾವುದೇ ದರ ನಿಗದಿಪಡಿಸಿಲ್ಲ. ಆಸ್ಪತ್ರೆಯಲ್ಲಿ ಆಂಬುಲೆನ್ಸ್‌ ಇಲ್ಲದಿರುವುದನ್ನು ಬಂಡವಾಳ ಮಾಡಿಕೊಂಡ ಆಂಬುಲೆನ್ಸ್‌ ಮಾಲೀಕರು ಬೇಕಾಬಿಟ್ಟಿಯಾಗಿ ಹಣ ವಸೂಲಿ ಮಾಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.