ತುಮಕೂರು: ನಗರದಲ್ಲಿ ಡ್ರಗ್ಸ್ ಜಾಲ ಮತ್ತಷ್ಟು ವ್ಯಾಪಿಸಿದ್ದು, ರೈಲಿನ ಮೂಲಕ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ರೈಲು ನಿಲ್ದಾಣದಲ್ಲಿ ₹5.50 ಲಕ್ಷ ಮೌಲ್ಯದ 55 ಗ್ರಾಂ ಎಂಡಿಎಂಎ ಡ್ರಗ್ಸ್ ಜಪ್ತಿ ಮಾಡಿ, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ನಗರದ ಗುಬ್ಬಿ ಗೇಟ್‌ನ ಹಿಫಾಝ್ ಸಾದಿಕ್, ಪಿ.ಎಚ್.ಕಾಲೊನಿಯ ಸೈಯದ್ ಫರೀದ್ ಬಂಧಿತರು. ಇಬ್ಬರು ಎಸಿ, ಫ್ರಿಡ್ಜ್, ವಾಷಿಂಗ್ ಮಷಿನ್ ರಿಪೇರಿ ಕೆಲಸ ಮಾಡಿಕೊಂಡಿದ್ದರು. ಯಾರಿಗೂ ಅನುಮಾನ ಬಾರದಿರಲಿ ಎಂದು ಡ್ರಗ್ಸ್ ತರಲು ರೈಲು ಪ್ರಯಾಣ ಮಾಡುತ್ತಿದ್ದರು.
ಯಶವಂತಪುರ– ತುಮಕೂರು ರೈಲಿನಲ್ಲಿ ಎಂಡಿಎಂಎ ಮಾದಕ ವಸ್ತು ತರುತ್ತಿದ್ದರು. ಬೆಂಗಳೂರಿನಿಂದ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದರು. ಸೈಬರ್ ಠಾಣೆಯ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
‘ನಗರ ಸೇರಿದಂತೆ ಜಿಲ್ಲೆಯಾದ್ಯಂತ ಡ್ರಗ್ಸ್ ಬಳಕೆ ಹೆಚ್ಚಾಗಿದೆ. ಹಾದಿ–ಬೀದಿಯಲ್ಲಿ ಗಾಂಜಾ ಸಿಗುತ್ತಿದೆ. ಡ್ರಗ್ಸ್ ಮಾರಾಟ ಮತ್ತು ಬಳಕೆಗೆ ಕಡಿವಾಣ ಬೀಳುತ್ತಿಲ್ಲ. ವಿದ್ಯಾರ್ಥಿಗಳಿಗೆ ಅಮಲು ಬರಿಸುವ ಮಾತ್ರೆ ಮಾರಾಟ ಮಾಡುತ್ತಿದ್ದ ಮೆಡಿಕಲ್ ಸ್ಟೋರ್ ಮಾಲೀಕರನ್ನು ಕಳೆದ ವಾರವಷ್ಟೇ ಬಂಧಿಸಲಾಗಿತ್ತು. ಇದೀಗ ಮತ್ತಿಬ್ಬರ ಬಂಧನವಾಗಿದೆ. ಮಾದಕ ವಸ್ತುಗಳ ಬಳಕೆ ತಡೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಮತ್ತಷ್ಟು ಯುವಕರು ಹಾದಿ ತಪ್ಪುತ್ತಾರೆ’ ಎಂದು ನಗರದ ಬಾಲಚಂದ್ರಪ್ಪ ಆತಂಕ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.