ADVERTISEMENT

ತುಮಕೂರು: ರೈಲು ನಿಲ್ದಾಣದಲ್ಲಿ ನವಜಾತ ಶಿಶು ಎಸೆದು ಹೋದ ಅಜ್ಜಿ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 20:31 IST
Last Updated 27 ಜೂನ್ 2024, 20:31 IST
ನವಜಾತ ಶಿಶು ಸಾವು (ಸಾಂದರ್ಭಿಕ ಚಿತ್ರ)
ನವಜಾತ ಶಿಶು ಸಾವು (ಸಾಂದರ್ಭಿಕ ಚಿತ್ರ)   

ತುಮಕೂರು: ಅನಾರೋಗ್ಯದಿಂದ ಬುಧವಾರ ರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟ ನವಜಾತ ಶಿಶುವಿನ ಶವವನ್ನು ಊರಿಗೆ ಸಾಗಿಸಲು ಹಣವಿಲ್ಲದೆ ಶವವನ್ನು ನಗರದ ರೈಲು ನಿಲ್ದಾಣದಲ್ಲಿ ಎಸೆದು ಹೋಗಿದ್ದಾರೆ. 

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕುಂದರ್ತಿ ಮಂಡಲದ ನಿವಾಸಿ ಅಂಬಿಕಾ ಎಂಬುವರಿಗೆ ಜೂನ್‌ 24ರಂದು ಪಾವಗಡದ ಖಾಸಗಿ ಆಸ್ಪತ್ರೆಯಲ್ಲಿ ಸಿಸೇರಿಯನ್‌ ಹೆರಿಗೆಯಾಗಿತ್ತು. ಹೆರಿಗೆ ನಂತರ ಮಗುವಿನ ಉಸಿರಾಟದಲ್ಲಿ ತೊಂದರೆಯಾಗಿ ಬುಧವಾರ ಜಿಲ್ಲಾ ಆಸ್ಪತ್ರೆಗೆ ಕರೆ ತರಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮಗು ಸಾವನ್ನಪ್ಪಿದೆ.

ಹಣ ತೆಗೆದುಕೊಂಡು ಬರುತ್ತೇನೆ ಎಂದು ಅಂಬಿಕಾ ಪತಿ ಹನುಮಂತ ಬೆಂಗಳೂರಿಗೆ ಹೋಗಿದ್ದರು. ಅವರು ವಾಪಸ್‌ ಬರುವ ಹೊತ್ತಿಗೆ ಶಿಶು ಸಾವನ್ನಪ್ಪಿದೆ. ಶಿಶುವಿನ ಜತೆ ಬಂದಿದ್ದ ಅಂಬಿಕಾ ಅತ್ತೆ ಲಕ್ಷ್ಮಕ್ಕ ಅವರಿಗೆ ಮೃತದೇಹ ಹಸ್ತಾಂತರಿಸಲಾಗಿತ್ತು. ಶವವನ್ನು ಊರಿಗೆ ತೆಗೆದುಕೊಂಡು ಹೋಗಲು ಹಣವಿಲ್ಲದ ಕಾರಣ ಅವರು ರೈಲು ನಿಲ್ದಾಣದಲ್ಲಿಯೇ ಎಸೆದು ಹೋಗಿದ್ದಾರೆ.

ADVERTISEMENT

ಸ್ಥಳದಲ್ಲಿ ಇದ್ದವರು ಶವ ಕಂಡು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಶವವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಯಿತು. ನಂತರ ಪೋಷಕರನ್ನು ಪತ್ತೆಹಚ್ಚಿ ಶವ ಹಸ್ತಾಂತರಿಸಲಾಯಿತು. ತಿಲಕ್‌ ಪಾರ್ಕ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂಬಿಕಾ ಮತ್ತು ಹನುಮಂತ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಖಾಸಗಿ ಆಸ್ಪತ್ರೆಯಿಂದ ಆಂಬುಲೆನ್ಸ್‌ ಮೂಲಕ ಶಿಶುವನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿತ್ತು.

ಶಿಶುವಿನ ಕೈಗೆ ಹಾಕಿದ್ದ ಟ್ಯಾಗ್‌ ಆಸ್ಪತ್ರೆಯ ಸುಳಿವು ನೀಡಿತ್ತು. ಟ್ಯಾಗ್‌ನಲ್ಲಿ ಪೋಷಕರ ಹೆಸರು, ವಿಳಾಸ ಇತ್ತು. ಇದರ ಆಧಾರದ ಮೇಲೆ ಆಸ್ಪತ್ರೆಯಲ್ಲಿ ವಿಚಾರಿಸಿದಾಗ ಪೋಷಕರ ಮಾಹಿತಿ ಗೊತ್ತಾಗಿದೆ.

‘ಆಸ್ಪತ್ರೆಯಿಂದ ಬಿಡುಗಡೆ ಮಾಡುವಾಗ ಎಲ್ಲ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು. ಶಿಶುವಿನ ಕೈಗೆ ಹಾಕಿದ್ದ ಟ್ಯಾಗ್‌ ಸಹ ತೆಗೆಯದೆ ಆಸ್ಪತ್ರೆಯಿಂದ ಹೊರಗಡೆ ಕಳುಹಿಸಲಾಗಿದೆ. ಇದರಲ್ಲಿ ಇಲ್ಲಿನ ಸಿಬ್ಬಂದಿಯ ನಿರ್ಲಕ್ಷ್ಯ, ಬೇಜವಾಬ್ದಾರಿತನ ಕಾಣುತ್ತಿದೆ’ ಎಂದು ರೈಲು ನಿಲ್ದಾಣದಲ್ಲಿದ್ದ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.