ADVERTISEMENT

ತುಮಕೂರು: ಇನ್ನೂ ತಣ್ಣಗಾಗದ ಮಾಧುಸ್ವಾಮಿ ಮುನಿಸು

ಟಿಕೆಟ್ ಸಿಗದೆ ಅಸಮಾಧಾನಗೊಂಡಿರುವ ಮಾಜಿ ಸಚಿವ, ಬಿಜೆಪಿ ನಾಯಕ ಜೆ.ಸಿ. ಮಾಧುಸ್ವಾಮಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 12:29 IST
Last Updated 13 ಏಪ್ರಿಲ್ 2024, 12:29 IST
ಮಾಧುಸ್ವಾಮಿ
ಮಾಧುಸ್ವಾಮಿ    

ತುಮಕೂರು: ಟಿಕೆಟ್ ಸಿಗದೆ ಅಸಮಾಧಾನಗೊಂಡಿರುವ ಮಾಜಿ ಸಚಿವ, ಬಿಜೆಪಿ ನಾಯಕ ಜೆ.ಸಿ. ಮಾಧುಸ್ವಾಮಿ ಅವರು ತಮ್ಮ ಸ್ವಕ್ಷೇತ್ರದಲ್ಲಿ ಶನಿವಾರ ಪಕ್ಷದ ನಾಯಕರು ಹಮ್ಮಿಕೊಂಡಿದ್ದ ಪ್ರಚಾರ ಸಭೆಯಿಂದಲೂ ದೂರ ಉಳಿದರು.

ಚಿಕ್ಕನಾಯಕನಹಳ್ಳಿಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಪರ ಪ್ರಚಾರ ಸಭೆ ಹಮ್ಮಿಕೊಳ್ಳಲಾಗಿತ್ತು. ತಮ್ಮ ಪಕ್ಷದ ಅಧ್ಯಕ್ಷರು ಬಂದಿದ್ದರೂ ಅತ್ತ ತಿರುಗಿಯೂ ನೋಡಲಿಲ್ಲ. ಅವರ ಬೆಂಬಲಿಗರೂ ಭಾಗವಹಿಸಲಿಲ್ಲ.

ಮಾಧುಸ್ವಾಮಿ ಅವರಿಗೆ ಆಹ್ವಾನ ನೀಡಲಾಗಿತ್ತು. ಬರುವ ನಿರೀಕ್ಷೆ ಇತ್ತು. ಆದರೂ ಪ್ರಚಾರ ಸಭೆಯಲ್ಲಿ ಭಾಗವಹಿಸಲಿಲ್ಲ ಎಂದು ಪಕ್ಷದ ಮುಖಂಡರೊಬ್ಬರು ಸ್ಪಷ್ಟಪಡಿಸಿದರು.

ADVERTISEMENT

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದ ಕಾರಣಕ್ಕೆ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಸೋಮಣ್ಣ ಅವರಿಗೆ ಟಿಕೆಟ್ ನೀಡುವುದನ್ನು ವಿರೋಧಿಸಿದ್ದರು. ‘ಹೊರಗಿನಿಂದ ಬಂದವರಿಗೆ ಟಿಕೆಟ್ ಕೊಡಬಾರದು. ಹೊರಗಿನವರು ಕ್ಷೇತ್ರದಲ್ಲಿ ಗೆದ್ದ ಉದಾಹರಣೆ ಇಲ್ಲ’ ಎಂದು ಕೋಪ ಹೊರ ಹಾಕಿದ್ದರು. ಸೋಮಣ್ಣ ಪರ ಪ್ರಚಾರ ಮಾಡುವುದಿಲ್ಲ ಎಂದು ಹೇಳಿದ್ದರು.

ಒಂದು ಹಂತದಲ್ಲಿ ಪಕ್ಷ ತೊರೆದು ಕಾಂಗ್ರೆಸ್ ಸೇರಲು ಮುಂದಾಗಿದ್ದರು. ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಭೇಟಿಮಾಡಿ ಸಮಾಧಾನಪಡಿಸಿ, ಪಕ್ಷದಲ್ಲೇ ಉಳಿಯುವಂತೆ ಮಾಡಿದ್ದರು. ‘ಪಕ್ಷದಲ್ಲಿ ಇರುತ್ತೇನೆ. ಆದರೆ ಸೋಮಣ್ಣ ಪರ ಪ್ರಚಾರ ಮಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದರು. ಕೋಪ ತಣ್ಣಗಾದ ನಂತರ ಪ್ರಚಾರದಲ್ಲಿ ಭಾಗವಹಿಸಬಹುದು ಎಂದು ಪಕ್ಷದ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಈಗ ಪಕ್ಷದ ಅಧ್ಯಕ್ಷರು ಬಂದರೂ ಪ್ರಚಾರದಿಂದ ದೂರವೇ ಉಳಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.