ತುಮಕೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸ್ಪರ್ಧೆಯಿಂದಾಗಿ ತುಮಕೂರು ಲೋಕಸಭಾ ಕ್ಷೇತ್ರ ಗಮನ ಸೆಳೆದಿದೆ. ಮೈತ್ರಿ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ಸೆಣಸಾಟ ಏರ್ಪಟ್ಟಿದೆ. ಸೋಲು ಗೆಲುವಿನ ನಿರ್ಧಾರ ದಲ್ಲಿ ಮಿಕ್ಕೆಲ್ಲ ಅಂಶಗಳಿಗಿಂತ ಜಾತಿ ಸಮೀಕರಣವೇ ನಿರ್ಣಾಯಕ ಎಂಬ ಚಿತ್ರಣ ಆಖಾಡದಲ್ಲಿ ಕಾಣಿಸುತ್ತಿದೆ.
ಕಾಂಗ್ರೆಸ್‌ನಿಂದ ಮೂರು ಬಾರಿ, ಬಿಜೆಪಿಯಿಂದ ಒಂದು ಬಾರಿ ಸಂಸದ ರಾಗಿದ್ದ 77ರ ಹರೆಯದ ಜಿ.ಎಸ್.ಬಸವರಾಜು ಬಿಜೆಪಿ ಅಭ್ಯರ್ಥಿ. 86ರ ಹರೆಯದ ಎಚ್.ಡಿ.ದೇವೇಗೌಡ ಅವರು ಇದೇ ಮೊದಲ ಬಾರಿಗೆ ಈ ಕ್ಷೇತ್ರದಿಂದ ಜೆಡಿಎಸ್– ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಕಣದಲ್ಲಿ ಇದ್ದಾರೆ.
ಅಳೆದು ತೂಗಿ ಕೊನೆ ಕ್ಷಣದಲ್ಲಿ ತುಮಕೂರನ್ನು ಆಯ್ಕೆ ಮಾಡಿಕೊಂಡ ದೇವೇಗೌಡ ಅವರಿಗೆ ಆರಂಭದಲ್ಲಿ ಕೆಲ ಮುಖಂಡರಿಂದ ಎದುರಾಗಿದ್ದ ವಿರೋಧ ಕಡಿಮೆಯಾಗಿದೆ. ಕ್ರಿಯಾಶೀಲ ಸಂಸದರಾಗಿದ್ದರೂ ಮೈತ್ರಿ ನೆಪ ಹೇಳಿ ಟಿಕೆಟ್ ತಪ್ಪಿಸಲಾಯಿತೆಂದು ಮುನಿಸಿಕೊಂಡಿದ್ದ ಎಸ್.ಪಿ.ಮುದ್ದಹನುಮೇಗೌಡ ಅವರು ಕೊನೆ ದಿನ ನಾಮಪತ್ರ ವಾಪಸ್ ತೆಗೆದು ಕೊಂಡರು. ತಡವಾಗಿಯಾದರೂ ಜಂಟಿ ಪ್ರಚಾರ ಸಭೆಯಲ್ಲಿಯೂ ಕಾಣಿಸಿಕೊಂಡು ಗೌಡರ ಪರ ಮತ ಯಾಚಿಸಿದ್ದಾರೆ.
ಇನ್ನು ಮುದ್ದಹನುಮೇಗೌಡರನ್ನು ಬೆಂಬಲಿಸುವ ನೆಪದಲ್ಲಿ ದೇವೇಗೌಡರನ್ನು ಹಿಗ್ಗಾಮುಗ್ಗಾ ಟೀಕಿಸಿದ್ದ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರೂ ಹೈಕಮಾಂಡ್ ಸೂಚನೆಯಂತೆ ಗೌಡರನ್ನು ಗೆಲ್ಲಿಸಬೇಕೆಂದು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ. ಅಷ್ಟರ ಮಟ್ಟಿಗೆ ಮೈತ್ರಿ ಪಕ್ಷಗಳ ಮುಖಂಡರು ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಗೌಡರನ್ನು ಪೂರ್ಣ ಪ್ರಮಾಣದಲ್ಲಿ ಬೆಂಬಲಿಸುವರೇ ಎಂಬ ಪ್ರಶ್ನೆಗೆ ಫಲಿತಾಂಶ ಬರುವವರೆಗೆ ಕಾಯಬೇಕು.
ಟಿಕೆಟ್ ಘೋಷಣೆವರೆಗೂ ಒಡೆದ ಮನೆಯಾಗಿದ್ದ ಬಿಜೆಪಿ ಪಾಳಯದಲ್ಲಿ ಆಶ್ಚರ್ಯಕರ ರೀತಿಯಲ್ಲಿ ಎಲ್ಲ ಬಣಗಳು ಒಂದಾಗಿವೆ. ಜಿ.ಎಸ್.ಬಸವರಾಜು ಅವರನ್ನು ಬಹಿರಂಗವಾಗಿಯೇ ಟೀಕಿ ಸುತ್ತಿದ್ದ ಸೊಗಡು ಶಿವಣ್ಣ, ಟಿಕೆಟ್ ಆಕಾಂಕ್ಷಿಯಾಗಿದ್ದ ಬಿ.ಸುರೇಶಗೌಡ ಅವರೂ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ರಾಷ್ಟ್ರೀಯ ವಿಚಾರಗಳಿರಲಿ, ಜಿಲ್ಲೆಯ ಜ್ವಲಂತ ಸಮಸ್ಯೆಗಳೂ ಸಹ ಚರ್ಚೆಯಾಗುತ್ತಿಲ್ಲ. ದೇವೇಗೌಡರು ಜಿಲ್ಲೆಗೆ ಹೇಮಾವತಿ ನದಿ ನೀರು ಹಂಚಿಕೆಗೆ ವಿರೋಧಿಸಿದ್ದರು, ಅತಿಯಾದ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ, ಅವರು ಸ್ಥಳೀಯರಲ್ಲ– ಇವು ಬಿಜೆಪಿ ಪ್ರಚಾರದ ಬತ್ತಳಿಕೆಯಿಂದ ಪದೇ ಪದೇ ಪ್ರಯೋಗಿಸುತ್ತಿರುವ ಬಾಣಗಳು. ಬಿಜೆಪಿ ಆರೋಪವನ್ನು ಅಲ್ಲಗೆಳೆಯುತ್ತಿರುವ ಜೆಡಿಎಸ್– ಕಾಂಗ್ರೆಸ್ ಮುಖಂಡರು ಕೋಮು ಸಾಮರಸ್ಯ ಮತ್ತು ಸಮಗ್ರ ಅಭಿವೃದ್ಧಿಗಾಗಿ ಗೌಡರನ್ನು ಬೆಂಬಲಿಸಬೇಕು ಎಂದು ಮನವಿ ಮಾಡುತ್ತಿದ್ದಾರೆ.
ಬಿಜೆಪಿ ಬೆಂಬಲಿಗರು ಸಾಮಾಜಿಕ ಜಾಲ ತಾಣಗಳಲ್ಲಿ ದೇವೇಗೌಡರ ವಿರುದ್ಧ ಆಕ್ರಮಣಕಾರಿಯಾಗಿ ದಾಳಿಗೆ ಇಳಿದಿದ್ದಾರೆ. ಫೇಸ್‌ಬುಕ್, ವಾಟ್ಸ್ ಆ್ಯಪ್‌ಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳಲ್ಲಿ ಸತ್ಯಾಂಶ ಇದೆಯೋ? ಇಲ್ಲವೋ? ಪರಿಶೀಲಿಸಿ ತಿಳಿಸುವವರು ಯಾರೂ ಇಲ್ಲ. ಆದರೆ ಅಂತಹ ಸುದ್ದಿಗಳನ್ನು ಮತದಾರರು ಎಷ್ಟರ ಮಟ್ಟಿಗೆ ನಂಬುತ್ತಾರೋ ಅಷ್ಟರ ಮಟ್ಟಿಗೆ ಫಲಿತಾಂಶದ ಮೇಲೆ ಅದರ ಪರಿಣಾಮ ಇದ್ದೇ ಇರುತ್ತದೆ.
ಮೈತ್ರಿ ಪಕ್ಷಗಳ ಜಂಟಿ ಪ್ರಚಾರದ ನೇತೃತ್ವವನ್ನು ವಹಿಸಿಕೊಂಡಿರುವ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಕ್ಷೇತ್ರದಾದ್ಯಂತ ಅವಿರತವಾಗಿ ಸಂಚರಿಸಿ, ದೇವೇಗೌಡರ ಪರವಾಗಿ ಮತ ಯಾಚಿಸುತ್ತಿದ್ದಾರೆ. ಅವರು ತಮ್ಮ ಚುನಾವಣೆಗೂ ಇಷ್ಟು ಮುತುವರ್ಜಿ ವಹಿಸಿರಲಿಲ್ಲ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದರು. ಪರಮೇಶ್ವರ ಜತೆಗೆ ಸಚಿವ ಎಸ್.ಆರ್.ಶ್ರೀನಿವಾಸ್ ಹೆಗಲು ಕೊಟ್ಟಿದ್ದಾರೆ. ಬಿಜೆಪಿ ಪಾಳಯದಲ್ಲಿ ಚುನಾವಣೆ ಉಸ್ತುವಾರಿ ವಹಿಸಿಕೊಂಡಿರುವ ಮಾಜಿ ಸಚಿವ ವಿ.ಸೋಮಣ್ಣ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.
ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್– ಮೂರು ಪಕ್ಷಗಳು ತಮ್ಮದೇ ಆದ ನೆಲೆ ಹೊಂದಿವೆ. ಇದುವರೆಗೆ 16 ಚುನಾವಣೆಗಳು ನಡೆದಿದ್ದು ಕಾಂಗ್ರೆಸ್ 10 ಮತ್ತು ಬಿಜೆಪಿ 4 ಬಾರಿ ಗೆದ್ದಿವೆ. 1996ರಲ್ಲಿ ಜನತಾ ದಳ ಅಭ್ಯರ್ಥಿ ಗೆದ್ದಿದ್ದರು. ಕಳೆದ ಎರಡು ದಶಕಗಳಲ್ಲಿ ಜೆಡಿಎಸ್ ಮುಂಚೂಣಿ ಪಕ್ಷವಾಗಿ ಹೊರಹೊಮ್ಮಿದೆ. ಆದರೂ ಲೋಕಸಭಾ ಕ್ಷೇತ್ರ ಗೆಲ್ಲಲು ಅದಕ್ಕೆ ಸಾಧ್ಯವಾಗಿಲ್ಲ.
ವಿಧಾನಸಭಾ ಕ್ಷೇತ್ರವಾರು ನೋಡುವುದಾದರೆ ತಿಪಟೂರು ಹೊರತು ಪಡಿಸಿ ಉಳಿದ ಏಳೂ ಕ್ಷೇತ್ರಗಳಲ್ಲಿ ಜೆಡಿಎಸ್ ಪ್ರಬಲವಾಗಿದೆ. ಅದಕ್ಕೆ ಆರು ಕ್ಷೇತ್ರಗಳಲ್ಲಿ ಬಿಜೆಪಿಯೇ ಪ್ರಮುಖ ಎದುರಾಳಿ. ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗಟ್ಟಿಯಾದ ನೆಲೆ ಹೊಂದಿದೆ.
ವರ್ಷದ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ 8 ಕ್ಷೇತ್ರಗಳ ಪೈಕಿ ಬಿಜೆಪಿ 4, ಜೆಡಿಎಸ್ 3 ಮತ್ತು ಕಾಂಗ್ರೆಸ್ 1 ಸ್ಥಾನಗಳನ್ನು ಗೆದ್ದುಕೊಂಡಿದ್ದವು. ಆದರೆ ಒಟ್ಟು ಮತ ಗಳಿಕೆಯಲ್ಲಿ ಜೆಡಿಎಸ್ ಮೊದಲ ಸ್ಥಾನದಲ್ಲಿದೆ (4.90 ಲಕ್ಷ). ಬಿಜೆಪಿ ಎರಡನೇ (3.90 ಲಕ್ಷ) ಮತ್ತು ಕಾಂಗ್ರೆಸ್ ಮೂರನೇ ಸ್ಥಾನದಲ್ಲಿವೆ. (3.30 ಲಕ್ಷ). ಈ ಲೆಕ್ಕದ ಪ್ರಕಾರ ಹೋದರೆ ಜೆಡಿಎಸ್ ಅನಾಯಸವಾಗಿ ಗೆಲ್ಲಬೇಕು. ಈ ಅಂಕಿ ಅಂಶವೇ ತುಮಕೂರನ್ನು ಆಯ್ಕೆ ಮಾಡಲು ದೇವೇಗೌಡ ರನ್ನು ಪ್ರೇರೆಪಿಸಿರಬೇಕು. ಆದರೆ ಪ್ರತಿ ಚುನಾವಣೆಯೂ ಭಿನ್ನ, ಮತದಾನದ ವಿನ್ಯಾಸವೂ ಭಿನ್ನ.
ಪಕ್ಷಗಳ ಬಲಾಬಲ ಏನೇ ಇದ್ದರೂ ಅಂತಿಮವಾಗಿ ನಿರ್ಣಾಯಕ ಆಗುವುದು ಜಾತಿ ರಾಜಕಾರಣವೇ. ಕ್ಷೇತ್ರದಲ್ಲಿ ಲಿಂಗಾಯಿತರು ಮತ್ತು ಒಕ್ಕಲಿಗರು ಹೆಚ್ಚು ಕಡಿಮೆ ಸಮ ಸಂಖ್ಯೆಯಲ್ಲಿದ್ದಾರೆ. ಈ ಎರಡೂ ಸಮುದಾಯದವರು ಒಂದೊಂದು ಪಕ್ಷದ ಜತೆ ಗುರುತಿಸಿಕೊಂಡಿರುವುದು ಗುಟ್ಟಾಗಿ ಉಳಿದಿಲ್ಲ. ಈ ಸಮುದಾಯಗಳ ನಂತರ ಗಣನೀಯ ಸಂಖ್ಯೆಯಲ್ಲಿರುವ ಮುಸ್ಲಿಮರು, ಪರಿಶಿಷ್ಟರು, ಕುರುಬರು, ಯಾದವರು (ಗೊಲ್ಲರು) ಮತ್ತು ಇತರ ಹಿಂದುಳಿದ ಜಾತಿಗಳ ಮತದಾರರ ಬೆಂಬಲವನ್ನು ಯಾರು ಹೆಚ್ಚಿನ ಪ್ರಮಾಣದಲ್ಲಿ ಪಡೆಯುವರೋ ಅವರಿಗೇ ಗೆಲುವು.
ಇದನ್ನು ಅರಿತಿರುವ ಬಿಜೆಪಿ, ಮೈತ್ರಿ ಮುಖಂಡರು ಹಿಂದುಳಿದ ವರ್ಗಗಳ ಮನವೊಲಿಕೆಗೆ ಪ್ರಯತ್ನ ನಡೆಸಿದ್ದಾರೆ. ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಜಾತಿವಾರು ಸಭೆಗಳನ್ನು ನಡೆಸಿ ಬೆಂಬಲ ಖಾತರಿ ಮಾಡಿಕೊಳ್ಳುವ ಯತ್ನ ಸತತವಾಗಿ ಸಾಗಿವೆ.
* ಚುನಾವಣಾ ರಾಜಕೀಯದಿಂದ ದೂರವಿರಬೇಕೆಂದಿದ್ದೆ. ಜಿಲ್ಲೆಯ ಮೈತ್ರಿ ಪಕ್ಷಗಳ ಮುಖಂಡರ ಅಭಿಮಾನದ ಕರೆ ಮೇರೆಗೆ ನಾನಿಲ್ಲಿ ಸ್ಪರ್ಧಿಸಿದ್ದೇನೆ
– ಎಚ್.ಡಿ.ದೇವೇಗೌಡ, ಜೆಡಿಎಸ್ ಅಭ್ಯರ್ಥಿ
*ಇದು ನನ್ನ ಕೊನೆ ಚುನಾವಣೆ. ಹಿಂದೆ ಮಂಜೂರು ಮಾಡಿಸಿದ ಯೋಜನೆ ಗಳನ್ನು ಕಾರ್ಯಗತಗೊಳಿಸಿ ಆಧುನಿಕ ತುಮಕೂರನ್ನು ನಿರ್ಮಿಸುವುದು ನನ್ನ ಗುರಿ
– ಜಿ.ಎಸ್.ಬಸವರಾಜು, ಬಿಜೆಪಿ ಅಭ್ಯರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.