ADVERTISEMENT

ತುಮಕೂರು | ಮಾರುಕಟ್ಟೆ ವಿಶ್ಲೇಷಣೆ: ತರಕಾರಿ, ಅಡುಗೆ ಎಣ್ಣೆ ದುಬಾರಿ

ಗಗನಮುಖಿಯಾದ ಬೆಳ್ಳುಳ್ಳಿ, ಈರುಳ್ಳಿ ಮತ್ತಷ್ಟು ದುಬಾರಿ; ಬೇಳೆ ಬೆಲೆಯೂ ಏರಿಕೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2024, 3:27 IST
Last Updated 15 ಸೆಪ್ಟೆಂಬರ್ 2024, 3:27 IST
ಅಡುಗೆ ಎಣ್ಣೆ
ಅಡುಗೆ ಎಣ್ಣೆ   

ತುಮಕೂರು: ಈ ವಾರ ದಿನ ಬಳಕೆಯ ವಸ್ತುಗಳು ದುಬಾರಿಯಾಗಿವೆ. ತರಕಾರಿ ಬೆಲೆ ಏರಿಕೆಯತ್ತ ಮುಖ ಮಾಡಿದ್ದು, ಬೆಳ್ಳುಳ್ಳಿ, ಈರುಳ್ಳಿ ಗಗನಮುಖಿಯಾಗಿದೆ. ಅಡುಗೆ ಎಣ್ಣೆ, ಬೇಳೆ, ಧಾನ್ಯಗಳ ದರವೂ ಹೆಚ್ಚಳವಾಗಿದೆ.

ಬೆಳ್ಳುಳ್ಳಿ ದುಬಾರಿ: ಕೆಲವು ದಿನಗಳಿಂದ ಏರಿಳಿತ ಕಾಣುತ್ತಲೇ ಸಾಗಿರುವ ಬೆಳ್ಳುಳ್ಳಿ ಈಗ ಮತ್ತಷ್ಟು ದುಬಾರಿಯಾಗಿದ್ದು, ಕೆ.ಜಿ ₹240–250ಕ್ಕೆ ಜಿಗಿದಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ₹300ರ ವರೆಗೂ ಮಾರಾಟ ಮಾಡಲಾಗುತ್ತಿದೆ.

ಈರುಳ್ಳಿ ಸಹ ಇದೇ ದಾರಿಯಲ್ಲಿ ಸಾಗಿದ್ದು, ಕೆ.ಜಿ ₹50–55ಕ್ಕೆ ತಲುಪಿದೆ. ಚಿಲ್ಲರೆಯಾಗಿ ಇನ್ನೂ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ಮಹಾರಾಷ್ಟ್ರದಿಂದ ಆವಕ ಬರಲು ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ದರ ಕಡಿಮೆಯಾಗಬಹುದು ಎಂದು ವರ್ತಕರು ಹೇಳುತ್ತಿದ್ದಾರೆ.

ADVERTISEMENT

ಕೆಲವು ವಾರಗಳಿಂದ ಸ್ಥಿರವಾಗಿದ್ದ ತರಕಾರಿ ದರ ಈಗ ಒಮ್ಮೆಲೆ ಹೆಚ್ಚಳ ದಾಖಲಿಸಿದ್ದು, ಬೀನ್ಸ್ ದರ ದುಪ್ಪಟ್ಟಾಗಿದೆ. ಬೀಟ್ರೂಟ್, ಬೆಂಡೆಕಾಯಿ, ಹಾಗಲಕಾಯಿ, ಹಸಿರು ಮೆಣಸಿನಕಾಯಿ ಬೆಲೆ ಏರಿಕೆಯಾಗಿದ್ದರೆ, ಮೂಲಂಗಿ, ಬದನೆಕಾಯಿ, ಹೂಕೋಸು ಅಲ್ಪ ಇಳಿದಿದೆ. ಇಳಿಕೆ ಕಂಡಿದ್ದ ಟೊಮೆಟೊ ಬೆಲೆ ಚೇತರಿಸಿಕೊಂಡಿದೆ. ಶುಂಠಿ ಸಹ ಅಲ್ಪ ಏರಿಕೆ ದಾಖಲಿಸಿದೆ.

ಸೊಪ್ಪಿನ ಬೆಲೆ ಹೆಚ್ಚಳ: ಸೊಪ್ಪಿನ ಬೆಲೆ ಏರಿಕೆ ಮುಂದುವರಿಸಿದ್ದು, ಸಬ್ಬಕ್ಕಿ ಮತ್ತಷ್ಟು ದುಬಾರಿಯಾಗಿದ್ದರೆ, ಮೆಂತ್ಯ ಸೊಪ್ಪು ಅಲ್ಪ ಕಡಿಮೆಯಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹100–120, ಸಬ್ಬಕ್ಕಿ ಕೆ.ಜಿ ₹80–100, ಮೆಂತ್ಯ ಸೊಪ್ಪು ಕೆ.ಜಿ ₹50–60, ಪಾಲಕ್ ಸೊಪ್ಪು (ಕಟ್ಟು) ₹80ಕ್ಕೆ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕಳೆದ ಮೂರು ವಾರಗಳಿಂದ ಮಳೆ ಇಲ್ಲವಾಗಿದ್ದು, ತರಕಾರಿ, ಸೊಪ್ಪು ಬೆಳೆಯ ಮೇಲೆ ಪರಿಣಾಮ ಬೀರಿದೆ. ಸಾಲುಸಾಲು ಹಬ್ಬಗಳು, ಶುಭ ಕಾರ್ಯಗಳು ಆರಂಭವಾಗಿದ್ದು, ತರಕಾರಿ, ಸೊಪ್ಪು ಬಳಕೆಯೂ ಹೆಚ್ಚಾಗಿದೆ. ಹಾಗಾಗಿ ದರ ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ.

ಸೇಬು ಇಳಿಕೆ: ದುಬಾರಿಯಾಗಿದ್ದ ಸೇಬು ಕೆ.ಜಿಗೆ ₹50 ಕಡಿಮೆಯಾಗಿದ್ದು, ಕೆ.ಜಿ ₹150ಕ್ಕೆ ಇಳಿದಿದೆ. ₹100 ಗಡಿ ದಾಟಿದ್ದ ಏಲಕ್ಕಿ ಬಾಳೆಹಣ್ಣು ಇಳಿಕೆಯತ್ತ ಸಾಗಿದೆ. ಸೀಬೆ ಹಣ್ಣು, ಕರಬೂಜದ ಧಾರಣೆ ಅಲ್ಪ ತಗ್ಗಿದೆ.

ಅಡುಗೆ ಎಣ್ಣೆ ದುಬಾರಿ: ಕೆಲವು ತಿಂಗಳಿಂದ ನಿಯಂತ್ರಣದಲ್ಲಿದ್ದ ಅಡುಗೆ ಎಣ್ಣೆ ಈ ವಾರ ಹೆಚ್ಚಳವಾಗಿದೆ. ಪಾಮಾಯಿಲ್ ಸಹ ₹100ರ ಸನಿಹಕ್ಕೆ ಬಂದಿದೆ. ಗೋಲ್ಡ್‌ವಿನ್ನರ್ ಕೆ.ಜಿ ₹113–115, ಪಾಮಾಯಿಲ್ ಕೆ.ಜಿ ₹98–99, ಕಡಲೆಕಾಯಿ ಎಣ್ಣೆ ಕೆ.ಜಿ ₹155–165ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಬೇಳೆ ಹೆಚ್ಚಳ: ಬೇಳೆ ಕಾಳುಗಳು, ಧಾನ್ಯಗಳ ಧಾರಣೆಯೂ ಏರಿಕೆಯತ್ತ ಮುಖ ಮಾಡಿದ್ದು, ಅವರೆಕಾಳು ಒಮ್ಮೆಲೆ ಕೆ.ಜಿಗೆ ₹20ರಷ್ಟು ದುಬಾರಿಯಾಗಿದೆ. ಹೆಸರು ಬೇಳೆ, ಕಡಲೆಕಾಳು, ಅಲಸಂದೆ, ಬಟಾಣಿ, ಶೇಂಗಾ ದುಬಾರಿಯಾಗಿದೆ. ಆದರೆ ತೊಗರಿ ಬೇಳೆ ಕೆ.ಜಿಗೆ ₹10 ಕಡಿಮೆಯಾಗಿದೆ. ಉದ್ದಿನ ಬೇಳೆ ಕೊಂಚ ತಗ್ಗಿದೆ.

ಮಸಾಲೆ ಪದಾರ್ಥ: ಮೆಣಸು, ಜೀರಿಗೆ, ಚಕ್ಕೆ, ಗಸಗಸೆ, ಬೆಲ್ಲದ ಧಾರಣೆಯೂ ಏರುಮುಖವಾಗಿದೆ. ಬಾದಾಮಿ, ದ್ರಾಕ್ಷಿ ಮತ್ತಷ್ಟು ದುಬಾರಿಯಾಗಿದೆ. ಏಲಕ್ಕಿ, ಹುಣಸೆಹಣ್ಣು ಕೊಂಚ ಕಡಿಮೆಯಾಗಿದೆ.

ಧನ್ಯ ಕೆ.ಜಿ ₹110–140, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹240–260, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹190–200, ಹುಣಸೆಹಣ್ಣು ₹120–150, ಬೆಲ್ಲ ಕೆ.ಜಿ ₹50–60, ಕಾಳುಮೆಣಸು ಕೆ.ಜಿ ₹750–760, ಜೀರಿಗೆ ಕೆ.ಜಿ ₹310–320, ಚಕ್ಕೆ ಕೆ.ಜಿ ₹260–270, ಲವಂಗ ಕೆ.ಜಿ ₹880–920, ಗುಣಮಟ್ಟದ ಗಸಗಸೆ ಕೆ.ಜಿ ₹1,300–1,350, ಏಲಕ್ಕಿ ಕೆ.ಜಿ ₹2,600–2,700, ಬಾದಾಮಿ ಕೆ.ಜಿ ₹660–680, ಗೋಡಂಬಿ ಕೆ.ಜಿ ₹850–900, ಒಣದ್ರಾಕ್ಷಿ ಕೆ.ಜಿ ₹200–220ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ಮಾಂಸದ ಬೆಲೆ ಏರಿಕೆ: ಗಣೇಶ ಚತುರ್ಥಿ ಮುಗಿಯುತ್ತಿದ್ದಂತೆ ಕೋಳಿ ಮಾಂಸದ ಬೆಲೆಯೂ ದುಬಾರಿಯಾಗಿದ್ದು, ಕೆ.ಜಿಗೆ ₹30–40ರ ವರೆಗೂ ಏರಿಕೆಯಾಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹130, ರೆಡಿ ಚಿಕನ್ ಕೆ.ಜಿ ₹200, ಸ್ಕಿನ್‌ಲೆಸ್ ಕೆ.ಜಿ ₹220, ಮೊಟ್ಟೆಕೋಳಿ (ಫಾರಂ) ಕೆ.ಜಿ ₹120ಕ್ಕೆ ಹೆಚ್ಚಳವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.