ತುಮಕೂರು: ಮುಂದಿನ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸಂಸದ ಜಿ.ಎಸ್. ಬಸವರಾಜು ಘೋಷಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನನಗೆ ಈಗ 84 ವರ್ಷ ವಯಸ್ಸಾಗಿದ್ದು, ವಯಸ್ಸಿನ ಲೆಕ್ಕಾಚಾರದಲ್ಲೂ ಪಕ್ಷದಿಂದ ಟಿಕೆಟ್ ಕೊಡುವುದಿಲ್ಲ. ಹಾಗಾಗಿ ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ’ ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತುಮಕೂರಿನಿಂದಲೇ ಲೋಕಸಭೆಗೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಒಂದು ವೇಳೆ ಅವರು ಸ್ಪರ್ಧೆ ಮಾಡಿದರೆ ನಾನು ಮತ್ತೆ ಸ್ಪರ್ಧಿಸುತ್ತೇನೆ. ಪಕ್ಷದಿಂದ ಟಿಕೆಟ್ ಕೊಡದಿದ್ದರೂ ಪಕ್ಷೇತರನಾಗಿ ಕಣಕ್ಕಿಳಿಯುತ್ತೇನೆ ಎಂದು ಹೇಳಿದರು.
‘ಬಿಜೆಪಿ ಮುಖಂಡ ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ ‘ನಾನು ಮಾಜಿ ಸಂಸದನಾಗಿದ್ದಾಗ ದಿನಾಲೂ ಯಾರಾದರೂ ಬಂದು ನನಗೆ ಮುತ್ತು ಕೊಡುತ್ತಿದ್ದರಾ? ಅದೇ ರೀತಿ ಯಡಿಯೂರಪ್ಪ ಅವರಿಗೆ ಎಷ್ಟು ಗೌರವ ಕೊಡಬೇಕು ಅಷ್ಟು ಕೊಡುತ್ತಿದ್ದಾರೆ. ಪಕ್ಷದಲ್ಲಿ ತೆರೆಮರೆಗೆ ಸರಿಸಿಲ್ಲ‘ ಎಂದು ಸಮರ್ಥಿಸಿಕೊಂಡರು.
ಯಡಿಯೂರಪ್ಪ ರಾಜಕೀಯ ನಿವೃತ್ತಿ ಘೋಷಣೆ ಮಾಡಿಲ್ಲ. ರಾಜಕೀಯದಲ್ಲಿ ಸಕ್ರಿಯವಾಗಿ ಇರುತ್ತಾರೆ. ಬದುಕಿರುವವರೆಗೂ ಹೋರಾಟ ಮಾಡುತ್ತಾರೆ. ಅವರು ಇಲ್ಲವಾದರೆ ಬಿಜೆಪಿಗೂ ಕಷ್ಟವಾಗುತ್ತದೆ. ಪಕ್ಷ ಬಿಟ್ಟು ಹೊರಗೆ ಹೋದರೆ ಅವರಿಗೂ ನಷ್ಟವಾಗುತ್ತದೆ. ಯಡಿಯೂರಪ್ಪ- ಸಿದ್ದರಾಮಯ್ಯ ಸೇರಿ ಹೊಸ ಪಕ್ಷ ಕಟ್ಟುತ್ತಾರೆ ಎಂಬ ಮಾತು ಸುಳ್ಳು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.