ತುಮಕೂರು: ಕಾನೂನು, ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ವಿರುದ್ಧತುಮಕೂರು ಬಿಜೆಪಿ ಸಂಸದ ಜಿ.ಎಸ್.ಬಸವರಾಜು ಏಕ ವಚನದಲ್ಲೇ ಅಸಮಾಧಾನವನ್ನು ಹೊರ ಹಾಕಿದ್ದಾರೆ.
‘ಈ ನನ್‌ಮಗ ನಮ್ಮ ಮಂತ್ರಿ ಹೆಂಗೆ ಗೊತ್ತಾ... ದಕ್ಷಿಣ ಕೊರಿಯಾದ ಕಿಂಗ್‌ಪಿನ್ ಇದ್ದಾನಲ್ಲ ಅವನಂತೆ. ನಮ್ಮ ಜಿಲ್ಲೆಯನ್ನು ಹಾಳು ಮಾಡಿದ್ದಾನೆ. ಜಿಲ್ಲೆಯಲ್ಲಿ ಮುಂದೆ ಒಂದು ಸೀಟೂ ಬರಲ್ಲ’... ಎಂದು ಟೀಕಿಸಿದ್ದಾರೆ.
ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಗುರುವಾರ ನಗರಕ್ಕೆ ಬಂದಿದ್ದರು. ಕಾರ್ಯಕ್ರಮಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ವೇದಿಕೆಯಲ್ಲಿ ಬೈರತಿ ಹಾಗೂ ಸಂಸದ ಬಸವರಾಜು ಅಕ್ಕಪಕ್ಕದಲ್ಲಿ ಕುಳಿತಿದ್ದರು. ಗೋಷ್ಠಿ ಆರಂಭಕ್ಕೂ ಮೊದಲು ಬೈರತಿ ಹಾಗೂ ಸಂಸದರ ನಡುವೆ ನಡೆದಿರುವ ಚುಟುಕು ಸಂಭಾಷಣೆ ಟಿ.ವಿ ಮಾಧ್ಯಮದವರ ಕ್ಯಾಮೆರಾದಲ್ಲಿ ದಾಖಲಾಗಿದೆ.
‘ಮಂತ್ರಿ ಮಾತೆತ್ತಿದರೆ ಹೊಡಿ, ಕಡಿ ಅಂತಾನೆ. ಎಂಜಿನಿಯರ್‌ಗೆ ಹೆಂಡತಿ ಸೀರೆ ಸೆಣೆಯಲು ಲಾಯಕ್ಕು ಎನ್ನುತ್ತಾನೆ. ಸಭೆಯಿಂದ ನಡಿ ಆಚೆ ಎನ್ನುತ್ತಾನೆ’ (ಹಿಂದಿನ ವರ್ಷ ಕೆಡಿಪಿ ಸಭೆಯಲ್ಲಿ ಕೆಲಸ ಮಾಡದ ಎಂಜಿನಿಯರನ್ನು ಮಾಧುಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದರು) ಎಂದು ಅಸಮಾಧಾನ ತೋಡಿಕೊಳ್ಳುತ್ತಾರೆ. ಆ ಸಮಯದಲ್ಲಿ ಬೈರತಿ ಅವರು ಜಿ.ಎಸ್.ಬಸವರಾಜು ಅವರನ್ನು ಸುಮ್ಮನಿರಿಸುವ ಪ್ರಯತ್ನ ಮಾಡುತ್ತಲೇ ನಮ್ಮ ಎಂಜಿನಿಯರ್‌ಗಾ ಎಂದು ಕೇಳುತ್ತಾರೆ. ಆ ಮೇಲೆ ಮಾತನಾಡೋಣ ಎನ್ನುತ್ತಾರೆ.
ನಂತರ ಮಾತು ಮುಂದುವರೆಸಿದ ಜಿ.ಎಸ್.ಬಸವರಾಜು, ‘ಅವನ್ಯಾರನ್ನೋ ನಮ್ಮ ತಾಲ್ಲೂಕಿಗೆ ಕರೆದುಕೊಂಡು ಬಂದ. ಅವನು ಬರುವಾಗಲೇ ಒಂದು ಸಾವಿರ ಕೋಟಿ ಡಿಕ್ಲೇರ್ ಮಾಡಿಕೊಂಡು ಬಂದಿದ್ದಾನೆ (ವಿಧಾನ ಪರಿಷತ್ ಅಭ್ಯರ್ಥಿಯಾಗಿದ್ದ ಲೋಕೇಶ್‌ಗೌಡ ಕುರಿತು). ಅವನು ನಮ್ಮನ್ನು ಕರೆಯಲಿಲ್ಲ, ಮಾತನಾಡಿಸಲೂ ಇಲ್ಲ’ ಎನ್ನುತಾರೆ (ಸಚಿವ ಮಾಧುಸ್ವಾಮಿ ಅವರು ಲೋಕೇಶ್‌ಗೌಡ ಅವರನ್ನು ಕರೆತಂದಿದ್ದರು ಎಂಬ ಕಾರಣಕ್ಕೆ ಈ ವಿಚಾರ ಪ್ರಸ್ತಾಪವಾಗಿದೆ).
ಇದೆಲ್ಲವನ್ನೂ ಕಿವಿಯಲ್ಲಿ ಕೇಳಿಸಿಕೊಂಡ ಬೈರತಿ ಅವರು ಸಾಕು, ಎನ್ನುತ್ತಲೇ ಪತ್ರಿಕಾಗೋಷ್ಠಿ ಆರಂಭಿಸಲೇ ಎನ್ನುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.