ತುಮಕೂರು: ಸಂಸದ ಜಿ.ಎಸ್.ಬಸವರಾಜು ಹಾಗೂ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಪರಸ್ಪರ ಏಕ ವಚನದಲ್ಲಿ ನಿಂದಿಸಿಕೊಂಡಿದ್ದಾರೆ. ಛೀ, ಥೂ... ಎಂದು ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಅಯೋಗ್ಯ ಪದವೂ ಧಾರಾಳವಾಗಿ ಬಳಕೆಯಾಗಿದೆ.
ಗುಬ್ಬಿ ತಾಲ್ಲೂಕು ಚೇಳೂರು ಸಮೀಪದ ಸಿ.ನಂದಿಹಳ್ಳಿ ಬಳಿ ಶನಿವಾರ ಕೆಪಿಟಿಸಿಎಲ್ ವಿದ್ಯುತ್ ವಿತರಣಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿದೆ.
‘ಈ ಭಾಗದಲ್ಲಿ ಡ್ಯಾಂ ನಿರ್ಮಿಸಲಾಗುತ್ತದೆ. ರೈತರಿಗೆ ಹೆಚ್ಚಿನ ರೀತಿಯಲ್ಲಿ ಪರಿಹಾರ ಕೊಡಿಸಲಾಗುತ್ತದೆ. ಅದಕ್ಕೆ ಕೇಂದ್ರ ಸರ್ಕಾರ ಹಣ ಕೊಡುತ್ತಿದೆ. ಇಲ್ಲಿನ ಜನರಿಗೆ ಸಹಕಾರಿಯಾಗುತ್ತದೆ’ ಎಂದು ಬಸವರಾಜು ವಿಷಯ ಪ್ರಸ್ತಾಪಿಸುತ್ತಾರೆ. ಪಕ್ಕದಲ್ಲೇ ಕುಳಿತಿದ್ದ ಶ್ರೀನಿವಾಸ್, ತಕ್ಷಣ ಪ್ರತಿಕ್ರಿಯೆ ನೀಡಿ ‘ಈ ರೀತಿ ಸುಳ್ಳು ಹೇಳಬೇಡ. ರೈತರಿಗೆ ಏಕೆ ಸುಳ್ಳು ಹೇಳುತ್ತೀಯಾ. ಇಡೀ ಜೀವನದಲ್ಲಿ ಸುಳ್ಳು ಹೇಳಿಕೊಂಡು ಬಂದಿದ್ದೀಯಾ’ ಎನ್ನುತ್ತಾರೆ. ಅಲ್ಲಿಂದ ಇಬ್ಬರ ನಡುವೆ ಏಕ ವಚನದಲ್ಲಿ ಕಿತ್ತಾಟ ಆರಂಭವಾಗುತ್ತದೆ.
ಇಬ್ಬರ ನಡುವಿನ ಸಂಭಾಷಣೆ:
ಬಸವರಾಜು: ನನ್ನ ಜೀವನದಲ್ಲಿ ಸುಳ್ಳು ಹೇಳಿಲ್ಲ. ನೀನು ಸುಳ್ಳು ಹೇಳುತ್ತಿರುವುದು, ಅಯೋಗ್ಯನ ತಂದು...
ಶ್ರೀನಿವಾಸ್: ನೀನು ಅಯೋಗ್ಯ. ಅಯೋಗ್ಯನ ರೀತಿ ನೀನು ಮಾತನಾಡುತ್ತಿದ್ದೀಯಾ. ಸುಳ್ಳು ಹೇಳುತ್ತಿರುವುದಕ್ಕೆ ನಾಚಿಕೆ ಆಗಬೇಕು. ಛೀ, ಥೂ... ಇಡೀ ಜೀವನದಲ್ಲಿ ಒಂದು ಗಾಡಿ ಸುಳ್ಳು ಹೇಳಿಕೊಂಡು ಬಂದಿದ್ದಿಯಾ? ಈಗ ರೈತರಿಗೆ ಮೋಸ ಮಾಡುತ್ತಿದ್ದೀಯಾ?
ಬಸವರಾಜು: ಹಾಗಾದರೆ ಈಗ ₹550 ಕೋಟಿ ತಂದಿಲ್ಲವೆ. ನೆಟ್ಟಗೆ ಮಾತನಾಡು. ಅಯೋಗ್ಯನ ರೀತಿ ಮಾತನಾಡುತ್ತೀಯಾ?
ಶ್ರೀನಿವಾಸ್: ನಿಮ್ಮ ತಾತನ ಮನೆಯಿಂದ ತಂದಿದ್ದೀಯಾ? ನೀನು ನೆಟ್ಟಗೆ ಮಾತನಾಡು. ನಿನ್ನ ಯೋಗ್ಯತೆಗೆ ಬೆಂಕಿ ಹಾಕ, ಮಾನ ಮರ್ಯಾದೆ ಇಲ್ಲ
ಬಸವರಾಜು: ಇದು ನಿಮ್ಮ ತಾತನ ಮನೆಯ ಹಣವೆ? ನಾನು ಮಾಡಿರುವ ಕೆಲಸಕ್ಕೆ ನನ್ನ ಹೆಸರು ಹೇಳಿಕೊಂಡು ಸಾಯುವವರೆಗೂ ದೀಪ ಹಚ್ಚಬೇಕು
ಶ್ರೀನಿವಾಸ್: ನಾನೇಕೆ ದೀಪ ಹಚ್ಚಲಿ, ನನಗೇನು ತೆವಲು ಹಿಡಿದಿಲ್ಲ. ಇದು ಸುಳ್ಳು ಎಂದು ಚಾಲೆಂಜ್ ಮಾಡುತ್ತೇನೆ.
ಬಸವರಾಜು: ನೀನು ಏನು ಬೇಕಾದರೂ ಮಾಡಿಕೊ ಹೋಗು...
ಕೊನೆಗೆ ಸ್ಥಳದಲ್ಲಿ ಇದ್ದವರು ಇಬ್ಬರನ್ನೂ ಸಮಾಧಾನಪಡಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.