ತುಮಕೂರು: ಅಧಿಕಾರಿಗಳು ಕೆಲಸ ಮಾಡುತ್ತಾರೆ ಎನ್ನುವ ಭರವಸೆ ಕಾರಣ ಪ್ರಗತಿ ಪರಿಶೀಲನಾ ಸಭೆಗೆ (ಕೆಡಿಪಿ) ಬರುವುದಿಲ್ಲ. ಆದರೆ ಅದು ದುರುಪಯೋಗ ಆಗುವುದು ಬೇಡ. ಸಾರ್ವಜನಿಕರ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿಕೊಂಡು ಹೋಗಿ ಎಂದು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ ಅವರು, ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಕೊಳವೆಬಾವಿ ಕೊರೆಯಬೇಕು. ಶಾಸಕರ ಅನುದಾನದಲ್ಲಿ ಪ್ರತಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂರು ಕೊಳವೆ ಬಾವಿ ಕೊರೆಯುವಂತೆ ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಶೀಘ್ರ ಬಗರ್ ಹುಕುಂ ಸಮಿತಿ ರಚಿಸಬೇಕು. ಸರ್ಕಾರ ಮರು ಅರ್ಜಿ ಸಲ್ಲಿಸಲು ಅವಕಾಶ ನೀಡಿರುವುದರಿಂದ ಬಗರ್ ಹುಕುಂ ಸಮಿತಿ ರಚನೆಯಾದ ನಂತರವೇ ತೀರ್ಮಾನ ಕೈಗೊಳ್ಳಬೇಕು. ಸ್ಥಳ ಪರಿಶೀಲಿಸಿದ ನಂತರವೇ ಮಂಜೂರಾತಿ ನೀಡಬೇಕು ಎಂದು ತಹಶೀಲ್ದಾರ್ ಮೋಹನ್ ಕುಮಾರ್ ಅವರಿಗೆ ಸೂಚಿಸಿದರು.
ಈಗಾಗಲೇ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಭೂಮಿ ಪರಿಶೀಲಿಸಿ ನಕ್ಷೆ ಸಿದ್ಧಪಡಿಸಲಾಗಿದೆ. ಅನುಮೋದನೆ ಪಡೆದ ನಂತರ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ತಹಶೀಲ್ದಾರ್ ಮಾಹಿತಿ ನೀಡಿದರು.
ಕ್ಷೇತ್ರ ವ್ಯಾಪ್ತಿಯಲ್ಲಿ 26 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಆಯಾ ಗ್ರಾ.ಪಂ ವ್ಯಾಪ್ತಿಯವರನ್ನು ಅಲ್ಲಿಯೇ ಕ್ವಾರಂಟೈನ್ ಮಾಡಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಜೈಪಾಲ್ ಮಾಹಿತಿ ನೀಡಿದರು.
ಬಾಳೆ ಹಾಗೂ ತೆಂಗು ಬೆಳೆ ಹಾನಿಗೆ ಸಂಬಂಧಿಸಿದಂತೆ ರೈತರಿಗೆ ಅನುಕೂಲ ಮಾಡಿಕೊಡಿ ಎಂದು ಶಾಸಕರು ನಿರ್ದೇಶನ ನೀಡಿದರು.
ಹೂ ಬೆಳೆಗಾರರಿಗೆ ನೀಡುವ ಪರಿಹಾರಕ್ಕೆ ಸ್ಥಳ ಪರಿಶೀಲಿಸುವುದು ಅವಶ್ಯ. ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಂಟಿ ಪರಿಶೀಲನೆ ನಡೆಸಬೇಕಾಗಿದೆ. ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಪರಿಹಾರ ವರ್ಗಾವಣೆ ಮಾಡಲಾಗುವುದು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಬಿ.ರಘು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.