ತುಮಕೂರು: ನಗರದ ಕ್ಯಾತ್ಸಂದ್ರ ಬಳಿ ವಸತಿಗೃಹವೊಂದರಲ್ಲಿ ದೊಡ್ಡ ಮಟ್ಟದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ಬೆಳಕಿಗೆ ಬಂದ ನಂತರ ತುಮಕೂರು ನಗರವೇಶ್ಯಾವಾಟಿಕೆಯ ಕೇಂದ್ರ ಸ್ಥಾನವಾಗಿ ಪರಿವರ್ತನೆಯಾಗುತ್ತಿಯೆ? ಅಕ್ರಮ ಚಟುವಟಿಕೆಗಳು ಹೆಚ್ಚುತ್ತಿವೆಯೆ? ಎಂಬ ಆತಂಕ ಜನರನ್ನು ಕಾಡಲಾರಂಭಿಸಿದೆ.
ಈಗ ಬೆಳಕಿಗೆ ಬಂದಿರುವುದು ಇದೊಂದು ಪ್ರಕರಣ ಮಾತ್ರ. ಹಲವೆಡೆ ವೇಶ್ಯಾವಾಟಿಕೆ ನಡೆಯುತ್ತಿದ್ದರೂ ಕ್ರಮ ಕೈಗೊಳ್ಳುವ ಮನಸ್ಸು ಮಾಡುತ್ತಿಲ್ಲ. ಮೈಸೂರಿನ ಒಡನಾಡಿ ಸಂಸ್ಥೆಯವರು ದೂರು ನೀಡಿ ಒತ್ತಡ ಹಾಕಿದ
ಪರಿಣಾಮವಾಗಿ ದಾಳಿ ನಡೆದಿದೆ. ಇಲ್ಲವಾಗಿದ್ದರೆಹತ್ತರಲ್ಲಿ ಹನ್ನೊಂದನೆಯದಾಗಿ ಯಾರ ಗಮನಕ್ಕೂ ಬರುತ್ತಿರಲಿಲ್ಲ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಹೇಳುತ್ತಾರೆ.
ನಗರ ಹಾಗೂ ನಗರಕ್ಕೆ ಹೊಂದಿಕೊಂಡಿರುವ ವಸತಿ ಗೃಹಗಳಷ್ಟೇ ಅಲ್ಲ, ಮನೆಗಳಲ್ಲೂ ಸಾಕಷ್ಟು ಪ್ರಮಾಣದಲ್ಲಿ ದಂಧೆ ನಡೆಯುತ್ತಿದೆ. ಕೆಲವು ಕಡೆಗಳಲ್ಲಿ ಮನೆಗಳನ್ನು ಬಾಡಿಗೆಗೆ ಪಡೆದುಕೊಂಡು ಸಂಸಾರಸ್ಥರೆಂದು ಹೇಳಿಕೊಂಡು ದಂಧೆ ನಡೆಸುತ್ತಿದ್ದಾರೆ. ಮೇಲುನೋಟಕ್ಕೆ ವಸತಿ ಪ್ರದೇಶ, ಇಲ್ಲವೆ ಕುಟುಂಬಸ್ಥರು ವಾಸವಾಗಿದ್ದಾರೆ ಎಂಬಂತೆ ಬಿಂಬಿಸಲಾಗುತ್ತದೆ. ಆದರೆ ಹಗಲು, ರಾತ್ರಿ ಚಟುವಟಿಕೆಗಳು ನಡೆಯುತ್ತಿರುತ್ತವೆ ಎಂಬ ಆರೋಪಗಳು ಕೇಳಿಬಂದಿವೆ.
ಇಂತಹ ವಿಚಾರಗಳು ಪೊಲೀಸರಿಗೆ ತಿಳಿದಿಲ್ಲ ಎನ್ನುವಂತಿಲ್ಲ. ಎಲ್ಲವೂ ಅವರ ಮೂಗಿನ ನೇರದಲ್ಲೇ ಸಾಗುತ್ತವೆ. ಹಲವೆಡೆ ರಕ್ಷಕರ ಬೆಂಬಲದಿಂದಲೇ ನಡೆಯುತ್ತಿವೆ. ಪೊಲೀಸರ ಕಣ್ಣು ತಪ್ಪಿಸಿ ದಂಧೆ ನಡೆಸಲು ಸಾಧ್ಯವೇ ಇಲ್ಲ ಎಂದು ಪೊಲೀಸ್ ಮಾಹಿತಿದಾರರೂ ಆದ ಸಾಮಾಜಿಕ ಕಾರ್ಯಕರ್ತ ರಾಜ್‌ಕುಮಾರ್ ಹೇಳುತ್ತಾರೆ.
ಠಾಣೆ ವ್ಯಾಪ್ತಿಯಲ್ಲಿ ಏನೆಲ್ಲ ಚಟುವಟಿಕೆಗಳು ನಡೆಯುತ್ತಿರುತ್ತವೆ ಎಂಬ ಕನಿಷ್ಠ ಮಾಹಿತಿ ಇದ್ದೇ ಇರುತ್ತದೆ. ಒಂದೆರಡು ಬಾರಿ ಕದ್ದುಮುಚ್ಚಿ ದಂಧೆ ನಡೆಸಬಹುದು. ಸದಾ ಪೊಲೀಸರ ಕಣ್ಣು ತಪ್ಪಿಸಲು ಸಾಧ್ಯವೇ ಇಲ್ಲ. ಇಂತಹ ವಿಚಾರದಲ್ಲಿ ಪೊಲೀಸರು ಕಂಡುಕಾಣದಂತೆ ಇದ್ದರೂ ಸಾರ್ವಜನಿಕರು, ಅಕ್ಕಪಕ್ಕದವರು ಒಂದಲ್ಲ ಒಂದು ಸಲ ಗಮನಕ್ಕೆ ತಂದಿರುತ್ತಾರೆ. ಕೆಲವೊಮ್ಮೆ ದೂರು ನೀಡಿರುತ್ತಾರೆ. ದೂರು ಬಂದ ಸಮಯದಲ್ಲಿ ಪರಿಶೀಲನೆಯ ಶಾಸ್ತ್ರ ಮುಗಿಸುತ್ತಾರೆ. ಕೊನೆಗೆ ದೂರು ಹೆಚ್ಚಾಗಿದೆ ಎಂದು ‘ಆದಾಯ’ ಹೆಚ್ಚಿಸಿಕೊಂಡು ಸುಮ್ಮನಾಗುತ್ತಾರೆ. ಮತ್ತೆ ದೂರು ಬಂದಾಗ ಇಲ್ಲವೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ ಸಮಯದಲ್ಲಿ ದಾಳಿ ನಡೆಸಿ ಒಬ್ಬಿಬ್ಬರನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡು ಸುಮ್ಮನಾಗುತ್ತಾರೆ. ಇಂತಹ ವ್ಯವಸ್ಥೆಯಿಂದಾಗಿ ನಗರದಲ್ಲಿ ವೇಶ್ಯಾವಾಟಿಕೆ ಹೆಚ್ಚಲುಕಾರಣವಾಗಿದೆ ಎಂದು ಸಾರ್ವಜನಿಕರು ದೂರುತ್ತಾರೆ.
ಕೇಂದ್ರ ಸ್ಥಾನ: ಎಲ್ಲಾ ಚಟುವಟಿಕೆಗಳಿಗೂ ತುಮಕೂರು ಒಂದು ರೀತಿಯಲ್ಲಿ ಕೇಂದ್ರ ಸ್ಥಾನ. ಎರಡು ಹೆದ್ದಾರಿಗಳು ನಗರವನ್ನು ಹಾದು ಹೋಗುತ್ತವೆ. ಶಿವಮೊಗ್ಗ ಹಾಗೂ ಕಾರವಾರದಂತಹ ಕರಾವಳಿಗೆ ಸಂಪರ್ಕ ಬೆಸೆಯುತ್ತದೆ. ರಾಜ್ಯದ ಅರ್ಧದಷ್ಟು ಜಿಲ್ಲೆಗಳಿಗೆ ಇದೇ ಸಂಪರ್ಕ ಮಾರ್ಗ. ಮುಂಬೈ, ಪುಣೆಯಂತಹ ವಾಣಿಜ್ಯ ನಗರ, ಉತ್ತರ ಭಾರತದ ಹಲವು ರಾಜ್ಯಗಳಿಗೆ ಇದೇ ದಾರಿಯಲ್ಲಿ ಸಾಗಬೇಕು. ಹಾಗಾಗಿ ವೇಶ್ಯಾವಾಟಿಕೆ ಸೇರಿದಂತೆ ಹಲವು ದಂಧೆ ನಡೆಸುವವರು ತುಮಕೂರು ನಗರವನ್ನು ಕೇಂದ್ರವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ದಂಧೆಯಷ್ಟೇ ಅಲ್ಲದೆ ಇತರ ಅಕ್ರಮ ಚಟುವಟಿಕೆಗಳು ವಿಸ್ತರಿಸುತ್ತಿರುವ ಕಾರಣಕ್ಕೆ ನಗರದ ಹೊರ ವಲಯಗಳಲ್ಲಿ, ಹೆದ್ದಾರಿಗಳು ಹಾದುಹೋಗಿರುವ ಮಾರ್ಗಗಳಲ್ಲಿ ವಸತಿ ಗೃಹಗಳು, ಡಾಬಾಗಳು ತಲೆಎತ್ತುತ್ತಿವೆ.
ಸಾಕಷ್ಟು ವಸತಿ ಗೃಹಗಳು ನೆಪಮಾತ್ರಕ್ಕೆ ವಾಸ್ತವ್ಯ ಸೌಲಭ್ಯ ಕಲ್ಪಿಸಿರುವಂತೆ ತೋರಿಸಿಕೊಳ್ಳುತ್ತಿವೆ. ಆದರೆ ಅಲ್ಲಿ ಬೇರೆಯದೇ ಚಟುವಟಿಕೆಗಳು ನಡೆಯುತ್ತಿರುತ್ತವೆ. ಪೊಲೀಸರ ನಿಯಂತ್ರಣ ಇಲ್ಲದಿರುವುದೇ ಅಕ್ರಮಗಳಿಗೆ ದಾರಿಮಾಡಿಕೊಟ್ಟಿದೆ ಎಂಬ ಆರೋಪಗಳು ಕೇಳಿಬಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.