ADVERTISEMENT

Tumkur University convocation: ಬರದ ನಾಡಿಗೆ ‘ಬಂಗಾರದ ಕೊಡುಗೆ’

ಕೂಲಿಕಾರನ ಮಗನಿಗೆ 6 ಸ್ವರ್ಣ ಪದಕ, ಗಣಿತದಲ್ಲಿ ಪವಿತ್ರಾಗೆ ಮೂರು ಚಿನ್ನ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2024, 4:31 IST
Last Updated 8 ಆಗಸ್ಟ್ 2024, 4:31 IST
ತಂದೆ ಮುತ್ಯಾಲಪ್ಪ ಜತೆ ರಾಮು
ತಂದೆ ಮುತ್ಯಾಲಪ್ಪ ಜತೆ ರಾಮು   

ತುಮಕೂರು: ಆಂಧ್ರಪ್ರದೇಶದ ಗಡಿ‌ಯಲ್ಲಿರುವ, ಸದಾ ಬಿಸಿಲು, ಬರದಿಂದಲೇ ಗುರುತಿಸಿಕೊಳ್ಳುತ್ತಿರುವ ಪಾವಗಡ ಭಾಗದ ವಿದ್ಯಾರ್ಥಿಗಳು ಈ ಬಾರಿಯ ಘಟಿಕೋತ್ಸವದಲ್ಲಿ ಎಲ್ಲರನ್ನು ತಮ್ಮತ್ತ ಸೆಳೆದರು. ಬರದ ನಾಡಿನಿಂದ ಬಂದವರು ಶಿಕ್ಷಣ ಕ್ಷೇತ್ರದಲ್ಲೂ ಮುಂದಿದ್ದೇವೆ ಎಂಬ ಸಂದೇಶ ಸಾರಿದರು.

ತುಮಕೂರು ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ 17ನೇ ಘಟಿಕೋತ್ಸವದಲ್ಲಿ ಪಾವಗಡ ತಾಲ್ಲೂಕು ನಾಗಲಮಡಿಕೆ ಹೋಬಳಿ ಕ್ಯಾತಗಾನಚೆರ್ಲು ಗ್ರಾಮದ ರಾಮು ಈ ವರ್ಷ ಅತ್ಯಧಿಕ 6 ಚಿನ್ನದ ಪದಕ, ಪಾವಗಡ ಪಟ್ಟಣದ ಕೆ.ಪಿ.ಪವಿತ್ರಾ 3 ಸ್ವರ್ಣ ಪದಕ ಪಡೆದು ಎಲ್ಲರ ಹುಬ್ಬೇರುವಂತೆ ಮಾಡಿದರು.

ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ವಿದ್ಯಾರ್ಥಿ ರಾಮು 6 ಬಂಗಾರದ ಪದಕ ತಮ್ಮದಾಗಿಸಿಕೊಂಡರು. ರಾಮು ಬಡತನ ಮಧ್ಯೆ ಬೆಳಗಿದ ಪ್ರತಿಭೆ. ಅವರ ಪೋಷಕರಿಗೆ ಅಷ್ಟಾಗಿ ಕನ್ನಡ ಮಾತನಾಡಲು ಬರುವುದಿಲ್ಲ. ಕೃಷಿ, ಕೂಲಿ ಕೆಲಸದಿಂದಲೇ ಬದುಕು ಕಟ್ಟಿಕೊಂಡು, ಮಗನಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು ಎಂಬ ಕನಸು ಕಂಡವರು. ರಾಮು ಚಿನ್ನದ ಪದಕ ಪಡೆಯುವುದನ್ನು ಕಣ್ತುಂಬಿಕೊಂಡರು.

ADVERTISEMENT

ಮನೆಯಲ್ಲಿ ತೆಲುಗು ಆವರಿಸಿಕೊಂಡಿದ್ದರೂ, ಕನ್ನಡ ಭಾಷೆ ಮೇಲಿನ ಅಭಿಮಾನ, ಪ್ರೀತಿ ಅವರನ್ನು ರಾಜ್ಯಪಾಲರಿಂದ ಬಂಗಾರದ ಪದಕ ಪಡೆಯುವಲ್ಲಿಗೆ ಕರೆ ತಂದು ನಿಲ್ಲಿಸಿತ್ತು. ಈಗಾಗಲೇ ಯುಜಿಸಿ–ನೆಟ್‌, ಕೆ–ಸೆಟ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರಾಧ್ಯಾಪಕರಾಗುವ ಯೋಚನೆಯಲ್ಲಿದ್ದು, ಸದ್ಯ ಬಿ.ಇಡಿ ಶಿಕ್ಷಣ ಪಡೆಯುತ್ತಿದ್ದಾರೆ.

‘ಮನೆಯಲ್ಲಿ ತೆಲುಗು, ಮ‌ನದಲ್ಲಿ ಕನ್ನಡ ಭಾಷೆ ಇದೆ. ಕನ್ನಡ ಸಾಹಿತ್ಯ ಓದುವ ಆಸೆ, ಕಾಲೇಜು ಪ್ರಾಧ್ಯಾಪಕರು, ಪಿಎಚ್‌.ಡಿ ಸಂಶೋಧನಾರ್ಥಿಗಳ ಮಾರ್ಗದರ್ಶನದಿಂದ ಚಿನ್ನದ ಪದಕ ಪಡೆಯಲು ಸಾಧ್ಯವಾಯಿತು. ವಿಶ್ವವಿದ್ಯಾಲಯಕ್ಕೆ ದಾಖಲಾದ ನಂತರ ಓದಿನ ಆಸಕ್ತಿ ಮತ್ತಷ್ಟು ಹೆಚ್ಚಿತು‌’ ಎಂದು ರಾಮು ಸಂತಸ ಹಂಚಿಕೊಂಡರು.

ಬಹುತೇಕ ವಿದ್ಯಾರ್ಥಿಗಳು ಗಣಿತ ಎಂದರೆ ಮಾರು ದೂರ ಸರಿಯುತ್ತಾರೆ. ಲೆಕ್ಕ, ಪಕ್ಕಾದ ಸಹವಾಸ ನಮಗೇಕೆ ಎಂದು ನುಣುಚಿಕೊಳ್ಳುವವರೇ ಹೆಚ್ಚು. ಅಂತವರ ಮಧ್ಯೆ ಪವಿತ್ರಾ ಗಣಿತ ವಿಷಯದಲ್ಲಿ 3 ಬಂಗಾರದ ಪದಕ ಪಡೆದು, ‘ಗಣಿತ ಕಬ್ಬಿಣದ ಕಡಲೆಯಲ್ಲ’ ಎಂದು ರುಜುವಾತು ಮಾಡಿದರು. ನಿವೃತ್ತ ಶಿಕ್ಷಕರಾದ ತಂದೆಯ ಮಾರ್ಗದರ್ಶನದಲ್ಲಿ ಸಾಗುವ ಮೂಲಕ ಕಷ್ಟದ ವಿಷಯವನ್ನು ಸುಲಭವಾಗಿಸಿಕೊಂಡಿದ್ದಾರೆ.

‘ಗಣಿತ ತರಗತಿಗಳು ತುಂಬಾ ಚೆನ್ನಾಗಿ ಇರುತ್ತವೆ. ಅಭ್ಯಾಸ ಮಾಡುವುದಕ್ಕೂ ಮುನ್ನವೇ ಕಷ್ಟ ಎಂದು ಕೈ ಕಟ್ಟಿ ಕುಳಿತರೆ ಯಾವುದೇ ಪ್ರಯೋಜನವಿಲ್ಲ. ಪ್ರತಿ ದಿನ ಅಭ್ಯಾಸ ನಡೆಸಿದರೆ ಯಾವುದೂ ಕಷ್ಟವಲ್ಲ. ಸರ್ಕಾರಿ ಶಾಲೆಯಲ್ಲಿ ಓದಿದ್ದಕ್ಕೆ ನನಗೆ ಆತ್ಮವಿಶ್ವಾಸ ಹೆಚ್ಚಿದೆ’ ಎಂದು ಪವಿತ್ರಾ ಪ್ರತಿಕ್ರಿಯಿಸಿದರು.

ಒಡಿಶಾ ಯುವತಿಗೆ 2 ಚಿನ್ನ

ಒಡಿಶಾದ ಮಮತಾರಾಣಿ ಮೊಹಂತಿ ಅರ್ಥಶಾಸ್ತ್ರ ವಿಭಾಗದಲ್ಲಿ ಎರಡು ಚಿನ್ನದ ಪದಕ ಪಡೆದರು. ಮಮತಾ ತಂದೆ ಕೆಲಸ ಅರಸಿ ಬೆಂಗಳೂರಿಗೆ ಬಂದವರು. ನೆಲಮಂಗಲದ ಬಳಿ ಕೈಮಗ್ಗದಿಂದ ಸೀರೆ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಐದು ವರ್ಷಗಳ ಹಿಂದೆ ವಿದ್ಯಾಭ್ಯಾಸಕ್ಕಾಗಿ ಒಡಿಶಾದಿಂದ ತುಮಕೂರಿಗೆ ಬಂದ ಮಮತಾ ಅಚ್ಚುಕಟ್ಟಾದ ಕನ್ನಡ ಭಾಷೆ ಮಾತನಾಡುತ್ತಾರೆ‌. ಬರೆಯುವುದನ್ನೂ ಕಲೆತಿದ್ದಾರೆ.

‘ಫಲಿತಾಂಶ ಹೀಗೆ ಬರುತ್ತದೆ ಎಂದು ಊಹಿಸಿರಲಿಲ್ಲ. ಪೋಷಕರು ಸದಾ ಬೆಂಬಲಿಸಿದ್ದರು. ಅವರ ಮಾರ್ಗದರ್ಶನದಿಂದ ಪದಕ ಸಾಧ್ಯವಾಗಿದೆ’ ಎಂದರು.

ಕೃಷಿಕರ ಮಗಳ ಚಿನ್ನದ ಬೆಳೆ

ಕೃಷಿ ಕುಟುಂಬದ ಹಿನ್ನೆಲೆ ಹೊಂದಿರುವ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹೊಸಹಳ್ಳಿಯ ಎಚ್.ಎಸ್.ಗಗನಾ ಪ್ರಾಣಿಶಾಸ್ತ್ರ ವಿಷಯದಲ್ಲಿ 2 ಬಂಗಾರದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ ಗಂಗಮ್ಮ ಅವರಿಂದ ಪ್ರೇರಣೆಗೊಂಡು ಶಿಕ್ಷಕಿಯಾಗುವ ಆಸೆ ಇಟ್ಟುಕೊಂಡಿದ್ದಾರೆ.

‘ಪೋಷಕರು ತುಂಬಾ ಕಷ್ಟಪಟ್ಟು ಓದಿಸಿದ್ದಾರೆ. ಸ್ನೇಹಿತರೂ ಸಹಕಾರ ಕೊಟ್ಟಿದ್ದಾರೆ. ನವೋದಯ ಶಾಲೆಯಿಂದ ಶಿಕ್ಷಣ ಪಡೆದಿದ್ದು, ನೆರವಾಯಿತು. ಶಿಕ್ಷಕಿಯಾಗಿ ಶಿಕ್ಷಣ ಕ್ಷೇತ್ರದಲ್ಲೇ ಮುಂದುವರಿಯುವೆ’ ಎಂದು ಗಗನಾ ನಗುತ್ತಲೇ ಹೇಳಿದರು.

ಗ್ರಾಮೀಣ ಪ್ರತಿಭೆಗೆ 3 ಪದಕ

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕೊಂಡ್ಲಹಳ್ಳಿಯ ಎನ್.ವಿಜಯಲಕ್ಷ್ಮಿ ಕಾಮರ್ಸ್‌ ವಿಭಾಗದಲ್ಲಿ 3 ಚಿನ್ನದ ಪದಕ ತಮ್ಮದಾಗಿಸಿಕೊಂಡರು.

ಬಾಲ್ಯದಲ್ಲಿಯೇ ತಂದೆ ಕಳೆದುಕೊಂಡ ಅವರಿಗೆ ತಾಯಿ, ಅಣ್ಣ, ಅಕ್ಕ ನೆರವಾದರು. ತಾಯಿ ಕೂಲಿ ಕೆಲಸ ಮಾಡುತ್ತಾ, ವಿದ್ಯಾಭ್ಯಾಸ ಕೊಡಿಸಿದರು. ಕಷ್ಟಪಟ್ಟು ದುಡಿದು ಮಕ್ಕಳನ್ನು ವಿದ್ಯಾವಂತರನ್ನಾಗಿ ರೂಪಿಸಿದ್ದಾರೆ. ವಿಜಯಲಕ್ಷ್ಮಿ ವಿ.ವಿಯಲ್ಲಿ ಓದುತ್ತಾ, ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ ಪಡೆದಿದ್ದರು. ಉತ್ತಮ ಶಿಕ್ಷಣದೊಂದಿಗೆ 3 ಪದಕ ಪಡೆದು ಎಲ್ಲರಿಂದ ಸೈ ಎನಿಸಿಕೊಂಡಿದ್ದಾರೆ.

ಪೋಷಕರೊಂದಿಗೆ ಕೆ.ಪಿ.ಪವಿತ್ರಾ
ಮಮತಾರಾಣಿ ಮೊಹಂತಿ
ಎಚ್.ಎಸ್.ಗಗನಾ
ಎನ್.ವಿಜಯಲಕ್ಷ್ಮಿ
ತುಮಕೂರು ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ಘಟಿಕೋತ್ಸವದಲ್ಲಿ ಭಾಗವಹಿಸಿದ್ದ ಪಿಎಚ್‌.ಡಿ ಹಾಗೂ ಚಿನ್ನದ ಪದಕ ವಿಜೇತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.