ADVERTISEMENT

ವಿ.ವಿಯಲ್ಲಿ ಗರಿಗೆದರಲಿದೆ ಚಿತ್ರೋತ್ಸವ

ಫೆ. 19ರಿಂದ 23ರ ವರೆಗೆ ಐದು ದಿನಗಳ ಕಾಲ ನೆರವೇರಲಿದೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2024, 7:40 IST
Last Updated 15 ಫೆಬ್ರುವರಿ 2024, 7:40 IST
ತುಮಕೂರು ವಿಶ್ವವಿದ್ಯಾಲಯ
ತುಮಕೂರು ವಿಶ್ವವಿದ್ಯಾಲಯ   

ತುಮಕೂರು: ತುಮಕೂರು ವಿಶ್ವವಿದ್ಯಾಲಯ ಡಿವಿಜಿ ಕನ್ನಡ ಅಧ್ಯಯನ ಕೇಂದ್ರವು ಐದು ದಿನಗಳ ಕಾಲ ಚಲನಚಿತ್ರೋತ್ಸವ ಆಯೋಜಿಸಿದೆ. ಫೆ. 19ರಿಂದ 23ರ ವರೆಗೆ ನಡೆಯಲಿರುವ ಸಿನಿಮಾ ಹಬ್ಬ ಈ ಬಾರಿ ‘ತಿಳಿಯ ಪೇಳುವೆ ಇಳೆಯ ಕಥೆಯನು’ ಎಂಬ ಪರಿಕಲ್ಪನೆಯಲ್ಲಿ ನೆರವೇರಲಿದೆ.

ಚಲನಚಿತ್ರ ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್ ಬಾಬು ಉದ್ಘಾಟಿಸಲಿದ್ದು, ನಿರ್ದೇಶಕರಾದ ಎನ್.ಎಸ್.ಶಂಕರ್, ಕೇಸರಿ ಹರಹು, ಪ್ರಶಾಂತ್ ಪಂಡಿತ್, ಅನನ್ಯಾ ಕಾಸರವಳ್ಳಿ ಮೊದಲಾದವರು ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಚಲನಚಿತ್ರ ನಿರ್ದೇಶಕರಾದ ಬರಗೂರು ರಾಮಚಂದ್ರಪ್ಪ, ಗಿರೀಶ್ ಕಾಸರವಳ್ಳಿ ಪಾಲ್ಗೊಳ್ಳಲಿದ್ದಾರೆ ಎಂದು ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಪ್ರೊ.ನಿತ್ಯಾನಂದ ಬಿ ಶೆಟ್ಟಿ ಅವರು ತಿಳಿಸಿದ್ದಾರೆ.

ಫೆ. 19ರಂದು ಮೊದಲಿಗೆ ಕೊರಿಯನ್ ಭಾಷೆಯ ಬೌದ್ಧ ತಾತ್ವಿಕತೆಯನ್ನು ಒಳಗೊಂಡ ‘ಸ್ಪ್ರಿಂಗ್ ಸಮ್ಮರ್ ಫಾಲ್ ವಿಂಟರ್’ ಸಿನಿಮಾ ಪ್ರದರ್ಶನಗೊಳ್ಳಲಿದೆ. ನಂತರ ‘ಅರಿವು ಮತ್ತು ಗುರುವು- ವಾಗರ್ಥದ ಹುಡುಕಾಟ’ ಸಿನಿಮಾ ಪ್ರದರ್ಶನವಾಗಲಿದೆ. ಈ ಸಿನಿಮಾ ಆಧುನಿಕ ಕನ್ನಡಕ್ಕೆ ಸಾಂಸ್ಥಿಕ ರೂಪ ಕೊಟ್ಟ ಬಾಸೆಲ್ ಮಿಷನರಿಗಳ ಕಥೆಯನ್ನು ಒಳಗೊಂಡ ಸಾಕ್ಷ್ಯಚಿತ್ರವಾಗಿದೆ.

ADVERTISEMENT

ಫೆ. 20ರಂದು ಮರಾಠಿ ಭಾಷೆಯ ‘ಫಂಡ್ರಿ’ ಹಾಗೂ ಮಲಯಾಳಂ ಭಾಷೆಯ ವಿಲಿಯಮ್ ಶೇಕ್ಸ್‌ಪಿಯರನ ‘ಮ್ಯಾಕ್‍ಬೆತ್’ ಆಧರಿಸಿ ರೂಪುಗೊಂಡ ‘ಜೋಜಿ’ ಸಿನಿಮಾ ಪ್ರದರ್ಶನ ಇರುತ್ತದೆ. ಫೆ. 21ರಂದು ಭಾರತೀಯ ರೈತ ಚಳವಳಿಯ ಕುರಿತು ಸಾಕ್ಷ್ಯಚಿತ್ರ, ಅಣುಬಾಂಬ್ ಕಂಡು ಹಿಡಿದ ಭೌತವಿಜ್ಞಾನಿ ಓಪನ್ ಹೈಮರ್ ಬಯೋಪಿಕ್ ಪ್ರದರ್ಶನಗೊಳ್ಳಲಿದೆ. ಫೆ. 22ರಂದು ‘ಬೂತಯ್ಯನ ಮಗ ಅಯ್ಯು’, ತಮಿಳಿನ ಪಾ ರಂಜಿತ್ ನಿರ್ದೇಶನದ ‘ನತ್ತಚ್ಚಿತಿರಮ್ ನಗರಗಿರದು’, ಫೆ. 23ರಂದು ಅನನ್ಯಾ ಕಾಸರವಳ್ಳಿ ಅವರ ‘ಹರಿಕಥಾ ಪ್ರಸಂಗ’ ಮತ್ತು ಪರೇಶ್ ರಾವಲ್ ಅದ್ಭುತವಾಗಿ ಅಭಿನಯಿಸಿರುವ ‘ರೋಡ್ ಟು ಸಂಗಮ್’ ಚಿತ್ರ ಪ್ರದರ್ಶನವಾಗಲಿದೆ. ತಮಿಳು ಭಾಷೆಯ ಮಕ್ಕಳ ಸಿನಿಮಾ ’ಕಾಕ ಮುಟ್ಟೈ’, ರಿಷಿ ಕಪೂರ್ ಮನೋಜ್ಞ ನಟನೆಯ ’ಮುಲ್ಕ್’ ಸಿನಿಮಾ ಪ್ರದರ್ಶನಗೊಳ್ಳುವ ಪಟ್ಟಿಯಲ್ಲಿವೆ.

ಎಲ್ಲಾ ಸಿನಿಮಾಗಳ ಕುರಿತು ಚರ್ಚೆ, ಸಂವಾದ ನಡೆಯಲಿದ್ದು, ಪ್ರೊ.ರಾಜಾರಾಮ ತೋಳ್ಪಾಡಿ, ಪ್ರೊ.ಎಚ್.ಕೆ.ಶಿವಲಿಂಗಸ್ವಾಮಿ, ಪ್ರೊ.ಎನ್.ಎಸ್.ಗುಂಡೂರ, ವಿ.ಎಲ್.ನರಸಿಂಹಮೂರ್ತಿ, ಗೋವಿಂದರಾಜು ಎಂ.ಕಲ್ಲೂರು, ಬಿ.ಅಮರ್ ಮೊದಲಾದವರು ಭಾಗವಹಿಸಲಿದ್ದಾರೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದು ನಿತ್ಯಾನಂದ ಶೆಟ್ಟಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.